ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ಕೃಷಿಯಿಂದ ವಾರ್ಷಿಕ ₹ 50 ಲಕ್ಷ ಗಳಿಸುತ್ತಿರುವ ದೊಡ್ಡಉಳ್ಳಾರ್ತಿ ರೈತ

13 ವರ್ಷಗಳಿಂದ ದಾಳಿಂಬೆ ಬೆಳೆಯುತ್ತಿರುವ ದೊಡ್ಡಉಳ್ಳಾರ್ತಿಯ ಭೀಮಾ ರೆಡ್ಡಿ
Last Updated 1 ಸೆಪ್ಟೆಂಬರ್ 2021, 7:41 IST
ಅಕ್ಷರ ಗಾತ್ರ

ದೊಡ್ಡಉಳ್ಳಾರ್ತಿ (ಚಳ್ಳಕೆರೆ): ದಾಳಿಂಬೆ ಹಣ್ಣಿಗೆ ಪ್ರತಿದಿನವೂ ಬೇಡಿಕೆ ಇದ್ದೇ ಇರುತ್ತದೆ. ಹೀಗಾಗಿ 12 ಎಕರೆ ಪ್ರದೇಶದಲ್ಲಿ 13 ವರ್ಷಗಳ ಕಾಲ ನಿರಂತರ ದಾಳಿಂಬೆ ಬೆಳೆದು ಪ್ರತಿ ವರ್ಷ ₹ 40 ಲಕ್ಷದಿಂದ ₹ 50 ಲಕ್ಷ ಆದಾಯ ಪಡೆಯುತ್ತಿದ್ದಾರೆ ದೊಡ್ಡಉಳ್ಳಾರ್ತಿ ಗ್ರಾಮದ ಬೆಳೆಗಾರ ಭೀಮಾ ರೆಡ್ಡಿ.

ಸ್ಥಳೀಯ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್‍ನಲ್ಲಿ ₹ 4 ಲಕ್ಷದಿಂದ ₹ 5 ಲಕ್ಷದಷ್ಟು ಸಾಲ ಪಡೆದು ಕೊಳವೆಬಾವಿ ಕೊರೆಯಿಸಿದರು. ಲಭ್ಯವಾದ ನೀರಿಗೆ ಡ್ರಿಪ್ ಅಳವಡಿಸಿದರು. ಮಳೆಯಾಶ್ರಿತ 12 ಎಕರೆ ಭೂಮಿಯನ್ನು ನೀರಾವರಿ ಪ್ರದೇಶವನ್ನಾಗಿ ಪರಿವರ್ತಿಸಿದ ಪ್ರದೇಶದಲ್ಲಿ ವರ್ಷ ಒಂದೇ ಬಾರಿ ಬರೀ ದಾಳಿಂಬೆ ಬೆಳೆದು ಉತ್ತಮ ಆದಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳೆಯುವ ವಿಧಾನ: 2–3 ಬಾರಿ ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಬೇಕು. ಮತ್ತು 5-6 ಅಡಿಗಳ ಅಂತರದಲ್ಲಿ ಗುಂಡಿ ನಿರ್ಮಾಣ ಮಾಡಬೇಕು. ಹಸಿರು ಸೊಪ್ಪು ಹಾಗೂ ಕೊಟ್ಟಿಗೆ ಗೊಬ್ಬರವನ್ನು ಗುಂಡಿಗೆ ಹಾಕಬೇಕು. 6 ತಿಂಗಳ ನಂತರ ಗುಂಡಿಯಲ್ಲಿ ಸಸಿಯನ್ನು ನಾಟಿ ಮಾಡಬೇಕು. ಕೋಲಿನ ಆಸರೆ ಕೊಟ್ಟು ಸಸಿಗಳನ್ನು ರಕ್ಷಿಸಬೇಕು.

ವಾರಕ್ಕೆ 2–3 ಬಾರಿ ಸಸಿಗಳಿಗೆ ನೀರು ಹಾಯಿಸಬೇಕು. ಗಿಡದ ಬುಡದಲ್ಲಿ ಬೆಳೆದ ರೆಂಬೆಗಳನ್ನು ಕತ್ತರಿಸಬೇಕು. ಹೀಗೆ ಬೆಳೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ನಾಟಿ ಮಾಡಿದ ಎರಡು ವರ್ಷಗಳಿಗೆ ಫಲ ನೀಡುತ್ತವೆ. ಹಣ್ಣಿನ ರಕ್ಷಣೆಗೆ ಪ್ರತಿ ಗಿಡಕ್ಕೂ ಬಲೆಯನ್ನು ಹೊದೆಸಲಾಗಿದೆ. ವರ್ಷಕ್ಕೆ ಎರಡು ಬಾರಿ ಬೆಳೆ ತೆಗೆಯಬಹುದು. ಹಣ್ಣಿನ ಗಾತ್ರ, ಬಣ್ಣ, ರುಚಿಯ ಜೊತೆಗೆ ಬೆಳೆ ಉತ್ತಮ ಇಳುವರಿ ನೀಡಬೇಕೆಂದರೆ ವರ್ಷಕ್ಕೆ ಒಂದೇ ಬಾರಿ ಹಣ್ಣನ್ನು ಕಟಾವ್ ಮಾಡುವುದು ಸೂಕ್ತ ಎನ್ನುತ್ತಾರೆ ಬೆಳೆಗಾರ ಭೀಮಾ ರೆಡ್ಡಿ.

‘ಗುಣಮಟ್ಟದ ಹಣ್ಣುಗಳು ದೊರೆತಲ್ಲಿ ತಮಿಳುನಾಡು, ಬೆಂಗಳೂರು, ದಾವಣಗೆರೆ, ಶಿವಮೊಗ್ಗ ಮುಂತಾದ ಭಾಗಗಳಿಂದ ಮಾರಾಟಗಾರರು ಹೊಲಕ್ಕೆ ಬಂದು ಖರೀದಿ ಮಾಡುತ್ತಾರೆ. ಹಾಗಾಗಿ ಮಾರುಕಟ್ಟೆಯ ಸಮಸ್ಯೆಯೇ ಎದುರಾಗುವುದಿಲ್ಲ. 12 ಎಕರೆಗೆ ಪ್ರತಿ ವರ್ಷ ದಾಳಿಂಬೆ ಬೆಳೆಯಲು ಕನಿಷ್ಠ ₹ 7 ಲಕ್ಷದಿಂದ ₹ 8 ಲಕ್ಷ ವೆಚ್ಚ ಮಾಡುತ್ತೇನೆ. ನಾಟಿ ಮಾಡಿದ ಪ್ರತಿ ಗಿಡ ಫಲ ನೀಡುವವರೆಗೂ ಮಕ್ಕಳಂತೆ ಕಾಪಾಡುತ್ತೇನೆ. ಹೀಗಾಗಿ ಬೇಸಾಯ, ಕೂಲಿ, ಗೊಬ್ಬರ ಹಾಗೂ ಔಷಧ ಖರ್ಚು ತೆಗೆದು ಪ್ರತಿ ಎಕರೆಗೆ ₹ 5 ಲಕ್ಷದಿಂದ ₹ 6 ಲಕ್ಷದಂತೆ ವರ್ಷಕ್ಕೆ 12 ಎಕರೆ ಬೆಳೆಗೆ ₹ 50 ಲಕ್ಷದಿಂದ ₹ 60 ಲಕ್ಷ ಆದಾಯ ಬರುತ್ತದೆ’ ಎಂದು ಭೀಮಾ ರೆಡ್ಡಿ ತಿಳಿಸಿದರು.

ರೋಗ ನಿವಾರಣೆ: ದಾಳಿಂಬೆ ಬೆಳೆಗೆ ಸಾಮಾನ್ಯವಾಗಿ ಹಣ್ಣುಕೊರಕ, ಕಾಂಡಕೊರಕ, ಥ್ರಿಪ್ಸ್, ನುಸಿ, ತಿಗಣೆ, ಎಲೆಚುಕ್ಕೆ ಹಾಗೂ ಬೂದು ರೋಗ ಕಾಣಿಸಿಕೊಳ್ಳುತ್ತದೆ. ಆ ಸಂದರ್ಭದಲ್ಲಿ 2.5 ಗ್ರಾಂ, ಕ್ಲೋರೋಪೈರಿಫಾಸ್, 1.5 ಗ್ರಾಂ, ಮಾನೋಕ್ರೋಟೊಫಾನ್ ಮತ್ತು 1 ಗ್ರಾಂ, ಕಾರ್ಬೆಂಡೈಜಿಂ ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಗೆ ಸಿಂಪರಣೆ ಮಾಡಬೇಕು. ಇದರಿಂದ ರೋಗ ಹತೋಟಿಗೆ ಬರುತ್ತದೆ. ಗಿಡದಲ್ಲಿ ಹಣ್ಣುಗಳು ಬಿಟ್ಟ ನಂತರ 4 ಗ್ರಾಂ ಕಾರ್ಬಾರಿಲ್ ನೀರಿನೊಂದಿಗೆ ಮಿಶ್ರಣ ಮಾಡಿ ಗಿಡಗಳಿಗೆ ಸಿಂಪರಣೆ ಮಾಡಬೇಕು. ಇದರಿಂದ ಹಣ್ಣು ಬಣ್ಣ ಬರುವುದರ ಜತೆಗೆ ಗಾತ್ರವೂ ದೊಡ್ಡದಾಗುತ್ತದೆ ಎಂದು ಹೇಳಿದರು.

3,000 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ

ತಾಲ್ಲೂಕಿನಲ್ಲಿ 3,000 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ. ಗಾತ್ರ, ಬಣ್ಣ ಹಾಗೂ ರುಚಿ ಭಿನ್ನವಾಗಿರುವುದರಿಂದ ಈ ಭಾಗದ ಹಣ್ಣಿಗೆ ಹೊರ ದೇಶ ಹಾಗೂ ರಾಜ್ಯದಲ್ಲಿ ಭಾರಿ ಬೇಡಿಕೆ ಇದೆ. ಕಡಿಮೆ ನೀರಿನಲ್ಲಿ ಹೆಚ್ಚು ದಾಳಿಂಬೆ ಬೆಳೆದು ಉತ್ತಮ ಆದಾಯ ಪಡೆಯಬಹುದು. ಫಲಕ್ಕೆ ಬರುವವರೆಗೆ ದಾಳಿಂಬೆ ಬೆಳೆ ನಡುವೆ ತರಕಾರಿ ಬೆಳೆದು ಆದಾಯ ಪಡೆಯಬಹುದು.

– ಡಾ.ವಿರೂಪಾಕ್ಷಪ್ಪ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT