ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ವಿಧಾನಸೌಧ ಚಲೋ 12ಕ್ಕೆ

Last Updated 4 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಸಂಘಟಿತ ವಲಯದ ಕಾರ್ಮಿಕರ ರಕ್ಷಣೆಗಾಗಿ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಡಿ.12ರಂದು ವಿಧಾನಸೌಧ ಚಲೊ ಹಮ್ಮಿಕೊಂಡಿದೆ.

‘ಕಾರ್ಮಿಕ ಇಲಾಖೆ ರೂಪಿಸಿದ ಭವಿಷ್ಯ ನಿಧಿ ಯೋಜನೆ ಅಸಂಘಟಿತ ಕಾರ್ಮಿಕರಿಗೆ ಪೂರಕವಾಗಿದೆ. ಇದನ್ನು ಕೂಡಲೇ ಜಾರಿಗೊಳಿಸಿ, 2020ರ ಬಜೆಟ್‌ನಲ್ಲಿ ಕನಿಷ್ಠ ₹ 500 ಕೋಟಿ ಅನುದಾನ ಮೀಸಲಿಡಬೇಕು. ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸೈಯದ್‌ ಮುಜೀಬ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರು, ಮನೆಗೆಲಸ ಮಾಡುವವರು, ಆಟೊ, ಟ್ಯಾಕ್ಸಿ ಚಾಲಕರು ಸೇರಿ ಹಲವು ವಲಯಗಳಲ್ಲಿ ಅಸಂಘಟಿತ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಎರಡು ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರಿದ್ದಾರೆ. ರಾಜ್ಯದ ಒಟ್ಟು ಆದಾಯದಲ್ಲಿ ಶೇ 60ರಷ್ಟು ಕೊಡುಗೆ ಕಾರ್ಮಿಕರದ್ದು. ಆದರೆ, ಕನಿಷ್ಠ ವೇತನ, ಪಿಂಚಣಿ, ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ’ ಎಂದು ಆರೋಪಿಸಿದರು.

‘ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಒದಗಿಸುವ ಉದ್ದೇಶದಿಂದ 2009ರಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ರಚನೆಯಾಗಿದೆ. ಇದರಂತೆ ಮಕ್ಕಳಿಗೆ ಉಚಿತ ಶಿಕ್ಷಣ, ಅಪಘಾತ ಪರಿಹಾರ, ವಸತಿ ಹಾಗೂ ಪಿಂಚಣಿ ಸೇರಿ ಅನೇಕ ಸೌಲಭ್ಯಗಳು ಸಿಗಬೇಕಿತ್ತು. ಆದರೆ, ಅನುದಾನದ ಕೊರತೆಯ ನೆಪದಲ್ಲಿ ಈ ಸೌಲಭ್ಯ ಈವರೆಗೆ ಸಿಕ್ಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಶ್ಚಿಮ ಬಂಗಾಳದ ಮಾದರಿಯಲ್ಲಿ ಅಂಘಟಿತ ವಲಯದ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ 2017ರಲ್ಲಿ ₹ 133 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಕಾರ್ಮಿಕ ಇಲಾಖೆಗೆ ಮಂಜೂರಾಗಿದ್ದು ₹ 25 ಕೋಟಿ ಮಾತ್ರ. ಈ ಅನುದಾನದಲ್ಲಿ ಸ್ಮಾರ್ಟ್‌ ಕಾರ್ಡ್‌ ರೂಪಿಸಲು ಮಾತ್ರ ಸಾಧ್ಯವಾಯಿತು. ಸ್ಮಾರ್ಟ್ ಕಾರ್ಡ್‌ ಸಿಕ್ಕಿವೆಯಾದರೂ ಸೌಲಭ್ಯಗಳು ಮರೀಚಿಕೆಯಾಗಿವೆ’ ಎಂದು ದೂರಿದರು.

‘ಕಾರ್ಮಿಕರ ಭವಿಷ್ಯನಿಧಿ ಯೋಜನೆಯನ್ನು ಸರ್ಕಾರ ಕಾನೂನು ರೂಪದಲ್ಲಿ ಜಾರಿಗೊಳಿಸುವ ಅಗತ್ಯವಿದೆ. ಡಿ.12ರಂದು ಬೆಳಿಗ್ಗೆ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಸಭೆ ನಡೆಸಲಾಗುತ್ತದೆ’ ಎಂದು ವಿವರಿಸಿದರು.

ಸಿಐಟಿಯು ಜಿಲ್ಲಾ ಸಂಚಾಲಕ ಟಿ.ತಿಪ್ಪೇಸ್ವಾಮಿ, ಮುಖಂಡರಾದ ಡಿ.ಎಂ.ಮಲಿಯಪ್ಪ, ಟಿ.ನಿಂಗಪ್ಪ, ಎಚ್‌.ಒ.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT