ಬುಧವಾರ, ಆಗಸ್ಟ್ 10, 2022
24 °C
ಪ್ರೊ.ಬಿ.ಕೃಷ್ಣಪ್ಪ ಅವರ ಒಡನಾಡಿ ಪ್ರೊ.ಎಂ.ಚಂದ್ರಶೇಖರಯ್ಯ ಅಭಿಮತ

ಒಡೆದ ಬಣಗಳು ಒಗ್ಗೂಡಿದರೆ ಚಳವಳಿ: ಪ್ರೊ.ಎಂ.ಚಂದ್ರಶೇಖರಯ್ಯ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋಮುವಾದವು ನೀಲಿ ಬಾವುಟದ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್ಎಸ್‌) ಸಶಕ್ತವಾಗುತ್ತಿರುವ ಸಂದರ್ಭದಲ್ಲಿ ದಲಿತ ಸಂಘಟನೆಗಳು ಛಿದ್ರವಾಗಿವೆ. ಹಲವು ಬಣಗಳಾಗಿ ಒಡೆದಿರುವ ಸಂಘಟನೆಯನ್ನು ಒಗ್ಗೂಡಿಸಿ ಚಳವಳಿಯನ್ನು ಮರುಕಟ್ಟಬೇಕಿದೆ ಎಂದು ಪ್ರೊ.ಬಿ.ಕೃಷ್ಣಪ್ಪ ಒಡನಾಡಿ ಪ್ರೊ.ಎಂ. ಚಂದ್ರಶೇಖರಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಅಂಬೇಡ್ಕರ್ ಪ್ರತಿಮೆ ಸಮೀಪ ಸಾಮಾಜಿಕ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ನವಯಾನ ಬುದ್ಧ ಧಮ್ಮದ ವತಿಯಿಂದ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘ದಲಿತ ಚಳವಳಿಯ ಮರುಕಟ್ಟುವಿಕೆ ದಿನ’ ಎಂಬ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮೇಲ್ಜಾತಿ ಆರಾಧನೆ ಗಾಬರಿ ಮೂಡಿಸುವ ರೀತಿಯಲ್ಲಿ ಬೆಳೆಯುತ್ತಿದೆ. ಇದು ನಿಜಕ್ಕೂ ಅಂತ್ಯವಾಗಲಿದ್ದು, ಈ ಪರಿಕಲ್ಪನೆ ಉಲ್ಟಾ ಆಗುವ ಸಾಧ್ಯತೆ ಇದೆ. ಸಂವಿಧಾನಬದ್ಧ ಹಕ್ಕಾಗಿರುವ ಮತಾಂತರವನ್ನು ನಿರ್ಬಂಧಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಬಲವಂತದ ಮತಾಂತರ ಎಂಬ ಹೊಸ ಪರಿಕಲ್ಪನೆ ಸೃಷ್ಟಿಸಿ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಇಂತಹ ರಾಜಕೀಯ ಭಯೋತ್ಪಾದನೆಯ ಪ್ರಯತ್ನ ಸಫಲವಾಗದು’ ಎಂದು ಹೇಳಿದರು.

‘ಪಠ್ಯ ಪರಿಷ್ಕರಣೆಯ ನೆಪದಲ್ಲಿ ಅಂಬೇಡ್ಕರ್‌ ಅವರ ಜೊತೆಗಿದ್ದ ಸಂವಿಧಾನ ಶಿಲ್ಪಿ ಎಂಬ ಪದವನ್ನು ತೆಗೆದುಹಾಕಲಾಗಿದೆ. ರೋಹಿತ್‌ ಚಕ್ರತೀರ್ಥ ಅವರು ಪಠ್ಯ ಪರಿಷ್ಕರಿಸಿ ದಲಿತ ಸಮುದಾಯವನ್ನು ಅವಮಾನಿಸಿದ್ದಾರೆ. ಇದನ್ನು ಶಿಕ್ಷಣ ಸಚಿವರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ಸುಳ್ಳುಗಳ ಸರಮಾಲೆ ಹೆಣೆಯುತ್ತಿರುವ ಬಿಜೆಪಿ ದಲಿತ ಸಮುದಾಯದ ಏಳಿಗೆಗೆ ಶ್ರಮಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಪ್ರೊ.ಬಿ.ಕೃಷ್ಣಪ್ಪ ಅವರು 1974ರಲ್ಲಿ ಕಟ್ಟಿದ ಚಳವಳಿಗೂ ಇಂದಿನ ಹೋರಾಟಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹೋರಾಟದ ಕಾವು, ಸಂಘಟನೆಯ ಶಕ್ತಿ ಕಡಿಮೆಯಾಗಿದೆ. ಕೃಷ್ಣಪ್ಪ ಅವರು ಬಹುದಿನಗಳವರೆಗೆ ಈ ಭಾಗದಲ್ಲಿ ಹೋರಾಟ ಮಾಡಿದ್ದಾರೆ. ಈ ಪ್ರದೇಶದ ಸಮಸ್ಯೆಯ ಅರಿವು ಅವರಲ್ಲಿತ್ತು. ಇಂತಹ ಚಳವಳಿ ಮತ್ತೆ ಹುಟ್ಟಬೇಕಿದೆ. ದಲಿತ ಸಮುದಾಯದ ಅಸ್ತಿತ್ವಕ್ಕೆ ಸಂಘಟನೆ, ಬಣ್ಣ, ಗುರುತಿನ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ಭಾರತದ ಚರಿತ್ರೆ ಪುರಾಣಕ್ಕಿಂತ ಭಿನ್ನವಾಗಿಲ್ಲ. ದಲಿತ ಸಮುದಾಯದ ಸುಧಾರಣೆಗೆ ಬುದ್ಧ, ಬಸವಣ್ಣ, ಗಾಂಧಿ ಬಂದು ಹೋಗಿದ್ದಾರೆ. ಗೋಪಾಲಸ್ವಾಮಿ ಎಂಬುವರು ಬೆಂಗಳೂರಿನಲ್ಲಿ ಶ್ರಮಿಸಿದ್ದಾರೆ. ಶಾಹು ಮಹಾರಾಜರು ಅಂಬೇಡ್ಕರ್ ಅವರಿಗೆ ಶಕ್ತಿ ಕೊಟ್ಟವರು. ಇಂತಹ ಸಮಾಜ ಈಗ ಜಾತಿ, ಧರ್ಮದ ಹೆಸರಿನಲ್ಲಿ ವಿಘಟನೆ ಆಗುತ್ತಿದೆ. ಶೋಷಿತ ಸಮುದಾಯಗಳನ್ನು ತುಳಿಯುವ ಹುನ್ನಾರಗಳು ನಡೆಯುತ್ತಿವೆ’ ಎಂದು ಹೇಳಿದರು.

‘ದಲಿತ ರಾಜಕಾರಣದ ನಿರ್ಲಕ್ಷ್ಯ’

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯ ಸರಾಸರಿ 40 ಸಾವಿರ ಮತಗಳನ್ನು ಹೊಂದಿದೆ. ಆದರೆ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುತ್ತಿಲ್ಲ. ದಲಿತ ರಾಜಕಾರಣವನ್ನು ಎಲ್ಲರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಸಂಘರ್ಷ ಸಮಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ ಬೇಸರ ವ್ಯಕ್ತಪಡಿಸಿದರು.

‘ಸಂವಿಧಾನದಲ್ಲಿ ಮನುವಾದವನ್ನು ತುರುಕುವ ಹುನ್ನಾರಗಳು ನಡೆಯುತ್ತಿವೆ. ಇದು ದಲಿತ ಸಮುದಾಯವನ್ನು ಆಪತ್ತಿಗೆ ತಳ್ಳಲಿದೆ. ಆರ್‌ಎಸ್‌ಎಸ್‌ ಸುಳ್ಳಿನ ಸರಮಾಲೆಗಳನ್ನು ಸೃಷ್ಟಿಸುತ್ತಿದೆ. ದಲಿತ ಸಮುದಾಯ ರಾಜಕೀಯ ಹಾಗೂ ಧಾರ್ಮಿಕ ಸಮಸ್ಯೆಗೆ ಸಿಲುಕಿದೆ’ ಎಂದರು.

ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್, ರಾಜ್ಯ ಉಪಾಧ್ಯಕ್ಷ ಡಿ.ದುರುಗೇಶಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕುಮಾರ್, ಮುಖಂಡರಾದ ಇಮ್ತಿಯಾಜ್ ಹುಸೇನ್, ಎಂ.ಡಿ.ರವಿ, ಎಸ್‌. ಜಯಣ್ಣ, ಶ್ರೀನಿವಾಸ್, ಎಚ್.ಆನಂದ ಕುಮಾರ್, ಹನುಮಂತಪ್ಪ, ಕೆ.ರುದ್ರಪ್ಪ, ಗೋಪಾಲಕೃಷ್ಣ, ವಿಶ್ವಸಾಗರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು