ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ರೈಲು ನಿಲ್ದಾಣ ಹಲವು ಸಮಸ್ಯೆಗಳ ಆಗರ, ಕಾಲರಾ– ಮಲೇರಿಯಾ ರೋಗದ ಭೀತಿ

Published 14 ಅಕ್ಟೋಬರ್ 2023, 6:12 IST
Last Updated 14 ಅಕ್ಟೋಬರ್ 2023, 6:12 IST
ಅಕ್ಷರ ಗಾತ್ರ

ಚಳ್ಳಕೆರೆ: ನಿರ್ವಹಣೆ ಕೊರತೆಯ ಕಾರಣ ನಗರದ ಬ್ರಾಡ್‍ಗೇಜ್ ರೈಲು ನಿಲ್ದಾಣ ಹಲವು ಸಮಸ್ಯೆಗಳ ಆಗರವಾಗಿದೆ.

ನಿಲ್ದಾಣದ ರಸ್ತೆ ಬದಿಯಲ್ಲಿ ದಟ್ಟವಾಗಿ ಬೆಳೆದ ಮುಳ್ಳುಗಿಡಗಳು, ಪ್ರತಿದಿನ ತಂದು ಸುರಿಯುತ್ತಿರುವ ನಗರದ ಕಸ ಕಡ್ಡಿ ಇತರೆ ಘನ ತ್ಯಾಜ್ಯ ವಸ್ತುಗಳಿಂದ ರೈಲು ನಿಲ್ದಾಣ ಕಸದ ತಿಪ್ಪೆಯಂತಾಗಿದೆ.

ಪಕ್ಕದ ರಾಜಕಾಲುವೆಯಲ್ಲಿ ಹರಿಯುತ್ತಿರುವ ನಗರದ ಕೊಚ್ಚೆ– ಕೊಳಚೆ ನೀರು ನಿಲ್ದಾಣದ ಆವರಣದಲ್ಲಿ ನಿತ್ಯ ಓಡಾಡುವ ಜನರಲ್ಲಿ ಅಸಹ್ಯ ಹುಟ್ಟಿಸಿದೆ.

ಸದಾ ಹರಿಯುತ್ತಿರುವ ಕೊಳಚೆ ನೀರಿನಿಂದ ಸೊಳ್ಳೆ ಮತ್ತು ಹಂದಿಗಳ ಸಂಖ್ಯೆ ಹೆಚ್ಚಿದೆ. ಮುಳ್ಳುಗಿಡದಲ್ಲಿ ಸತ್ತುಬಿದ್ದ ಹಂದಿ, ಕುರಿ– ಕೋಳಿಯ ತ್ಯಾಜ್ಯದ ದುರ್ವಾಸನೆ ಹಾಗೂ ರಾಜಕಾಲುವೆಯ ಕೊಳಚೆ ನೀರು ಇಲ್ಲಿನ ಸಿಬ್ಬಂದಿಗೆ ಕಾಲರಾ, ಮಲೇರಿಯ ಮುಂತಾದ ರೋಗಗಳ ಆತಂಕ ಹೆಚಿಸ್ಚಿದೆ.

ಶಿಥಿಲಗೊಂಡ ವಸತಿ ಗೃಹ: ಸಿಬ್ಬಂದಿಯ ವಾಸಕ್ಕೆ ನಿಲ್ದಾಣದಲ್ಲಿ ನಿರ್ಮಿಸಿರುವ 14 ಕೊಠಡಿಗಳಲ್ಲಿ 4 ಕೊಠಡಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಕೊಠಡಿಗಳು ಶಿಥಿಲಗೊಂಡಿವೆ. ಕೊಠಡಿ ಚಾವಣಿಗೆ ಹಾಕಿದ್ದ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಸತ್ವ ಕಳೆದುಕೊಂಡ ಕಾಂಕ್ರೀಟ್ ತುಂಡು ತುಂಡಾಗಿ ಉದುರುತ್ತಿದ್ದು, ಅಲ್ಪ ಪ್ರಮಾಣದ ಮಳೆ ಬಿದ್ದರೂ ಕೊಠಡಿಗಳು ಸೋರುತ್ತವೆ.

ಕೊಠಡಿಗಳ ಕಿಟಕಿ, ಬಾಗಿಲು ಮುರಿದು ಬಿದ್ದಿವೆ. ತಗ್ಗು ಪ್ರದೇಶದಲ್ಲಿರುವ ವಸತಿ ಗೃಹಗಳ ಪಕ್ಕದಲ್ಲಿ ಯಥೇಚ್ಛವಾಗಿ ಮುಳ್ಳು ಗಿಡಗಳು ಬೆಳೆದಿದ್ದು ವಿಷಜಂತುಗಳ ತಾಣವಾಗಿದೆ.

ಶುದ್ಧ ಕುಡಿಯುವ ನೀರಿನ ಸಮಸ್ಯೆ: ಆವರಣದಲ್ಲಿ ಒಂದೇ ಕೊಳವೆಬಾವಿ ಇದೆ. ಆ ಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ವಿವಿ ಸಾಗರದ ನೀರು ನಗರಕ್ಕೆ ಹರಿದು ಬಂದರೂ ಇಲ್ಲಿನ ಸಿಬ್ಬಂದಿ ಹಾಗೂ ಪ್ರಯಾಣಿಕರು ಶುದ್ಧ ಕುಡಿಯುವ ನೀರಿಗೆ ನಿತ್ಯ ಪರದಾಡುತ್ತಿರುತ್ತಾರೆ. ಸರಿಯಾದ ರಸ್ತೆ, ಚರಂಡಿ, ಶೌಚಾಲಯದ ವ್ಯವಸ್ಥೆ ಇಲ್ಲ. ಹಾಗಾಗಿ ಇಡೀ ನಿಲ್ದಾಣದ ಸ್ವಚ್ಛತೆ ಎನ್ನುವುದು ಕನಸಿನ ಮಾತಾಗಿದೆ.

ವಸತಿ ಗೃಹಗಳು ಶಿಥಿಲಾವಸ್ಥೆ ತಲುಪಿರುವುದರಿಂದ ಉತ್ತರ ಪ್ರದೇಶ ಮತ್ತು ಸ್ಥಳೀಯ ರೈಲ್ವೆ ಸಿಬ್ಬಂದಿ ಬೇರೆಡೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ತಿಂಗಳಿಗೆ 7,000ದಿಂದ 8,000 ಬಾಡಿಗೆ ತೆರುತ್ತಿದ್ದಾರೆ. 

ಮುಳ್ಳುಗಿಡಗಳು ದಟ್ಟವಾಗಿ ಬೆಳೆದಿರುವ ಕಾರಣ ಜೂಜುಕೋರರು, ಮದ್ಯವ್ಯಸನಿಗಳು ಸೇರಿದಂತೆ ಕಳ್ಳಕಾಕರ ಕಾಟವೂ ಹೆಚ್ಚಾಗಿದೆ. ಈ ಮಾರ್ಗದ ರಸ್ತೆಯಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ತುಂಬಾ ಭಯ ಪಡುವಂತಾಗಿದೆ.

ಗುಂತಕಲ್ಲು, ಹೊಸಪೇಟೆ, ರಾಯದುರ್ಗ, ಬಳ್ಳಾರಿ, ಚಳ್ಳಕೆರೆ ಮಾರ್ಗವಾಗಿ ಬೆಂಗಳೂರು ನಗರದ ಕಡೆಗೆ ನಿತ್ಯ 3– 4 ಬಾರಿ ಪ್ಯಾಸೆಂಜರ್ ರೈಲು ಓಡಾಡುತ್ತದೆ. ವಾರಕ್ಕೊಮ್ಮೆ ಕಾಶಿಯಿಂದ ಮೈಸೂರು ಕಡೆಗೆ ಹೋಗುವ ರೈಲು ಮತ್ತು ಗಂಟೆಗೆ ಒಮ್ಮೆ ಗೂಡ್ಸ್ ರೈಲುಗಳು ಓಡಾಡುತ್ತವೆ. ಆದರೆ, ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯವೇ ಇಲ್ಲ.

ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಶಿಥಿಲಗೊಂಡ ವಸತಿ ಗೃಹ ಗಳು
ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಶಿಥಿಲಗೊಂಡ ವಸತಿ ಗೃಹ ಗಳು
ವಸತಿ ಗೃಹ ದ ಒಳಗೆ ತುಂಬಿದ ಕಸ
ವಸತಿ ಗೃಹ ದ ಒಳಗೆ ತುಂಬಿದ ಕಸ
ಬೆಳೆದ ಮುಳ್ಳು ಗಿಡಗಳು
ಬೆಳೆದ ಮುಳ್ಳು ಗಿಡಗಳು

Cut-off box - ವಸತಿ ಗೃಹಗಳನ್ನು ದುರಸ್ತಿ ಮಾಡಿಸಿ ವಸತಿಗೃಹ ನಿರ್ವಹಣೆಗೆ ಪ್ರತಿವರ್ಷ ಇಲಾಖೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಶಿಥಿಲಗೊಂಡ ವಸತಿ ಗೃಹಗಳನ್ನು ಕೂಡಲೇ ದುರಸ್ತಿ ಮಾಡಿಸಬೇಕು. ಬೆಳೆದ ಮುಳ್ಳು ಗಿಡಗಳನ್ನು ಕಡಿಸಿ ಹಾಕಬೇಕು. ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಜತೆಗೆ ಶೌಚಾಲಯ ಹಾಗೂ ಬೆಳಕಿನ ವ್ಯವಸ್ಥೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಆರ್.ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT