ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ತೊರೆಕೋಲಮ್ಮನಹಳ್ಳಿ ಸಮಸ್ಯೆಗಳಿಗೆ ಪರಿಹಾರ: ಪ್ರಶಂಸೆ

ಸಮಸ್ಯೆ ಮುಕ್ತ ಗ್ರಾಮದ ಕಡೆಗೆ ಜಿಲ್ಲಾಡಳಿತದ ಒಂದು ಹೆಜ್ಜೆ ಕಾರ್ಯಕ್ರಮ
Last Updated 5 ಸೆಪ್ಟೆಂಬರ್ 2021, 4:11 IST
ಅಕ್ಷರ ಗಾತ್ರ

ನಾಯಕನಹಟ್ಟಿ: ತೊರೆಕೋಲಮ್ಮನಹಳ್ಳಿಯಲ್ಲಿ ಕಂದಾಯ ಇಲಾಖೆಯ ಸಹಯೋಗದಲ್ಲಿ ಹಲವು ಇಲಾಖೆಗಳು ಗ್ರಾಮಕ್ಕೆ ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸಿದ್ದು, ನನೆಗುದಿಗೆ ಬಿದ್ದಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಗ್ರಾಮವನ್ನು ಸಮಸ್ಯೆ ಮುಕ್ತ ಮಾಡಿರುವುದು ಸಂತಸ ತಂದಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ಹೋಬಳಿಯ ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಸಮಸ್ಯೆ ಮುಕ್ತ ಗ್ರಾಮದ ಕಡೆಗೆ ಜಿಲ್ಲಾಡಳಿತದ ಒಂದು ಹೆಜ್ಜೆ ಪರಿಕಲ್ಪನೆಯ ಗ್ರಾಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚಳ್ಳಕೆರೆಯ ತಹಶೀಲ್ದಾರ್ ಎನ್. ರಘುಮೂರ್ತಿ ಈ ನಿಟ್ಟಿನಲ್ಲಿ ಅಪಾರ ಶ್ರಮ ವಹಿಸಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌ಗಳು ಮತ್ತು ಅಧಿಕಾರಿಗಳು ಹೀಗೆ ಸಮಸ್ಯೆಗಳಿರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಕೂಲಂಕಷವಾಗಿ ಸಮಸ್ಯೆಗಳನ್ನು ಬಗೆಹರಿಸುವ ಅಭಿಯಾನವನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

‘ಸ್ವಾತಂತ್ರ್ಯ ಬಂದಾಗಿನಿಂದ ಗ್ರಾಮಕ್ಕೆ ಸರ್ಕಾರಿ ಬಸ್‌ಗಳ ಓಡಾಟ ಇಲ್ಲದೇ ಜನರು ಖಾಸಗಿ ಬಸ್‌ ಮತ್ತು ಇತರ ಖಾಸಗಿ ವಾಹನಗಳನ್ನು ಅವಲಂಬಿಸಿರುವುದು ಕಂಡು ಬಂದಿತ್ತು. ಇದನ್ನು ಮನಗಂಡು ಸಾರಿಗೆ ಅಧಿಕಾರಿಗಳು ಸರ್ಕಾರಿ ಬಸ್‌ಗಳ ಓಡಾಟಕ್ಕೆ ರೂಟ್‌ಗಳನ್ನು ನೀಡಿದ್ದಾರೆ. ಜಿಲ್ಲೆ ಮತ್ತು ರಾಜಧಾನಿಗೆ ಸಂಪರ್ಕಿಸುವ ಎರಡು ಬಸ್‌ಗಳಿಗೆ ಇಂದು ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಹೆಣ್ಣನ್ನು ಗೌರವಿಸುವ ಸಂಸ್ಕಾರವನ್ನು ನೀಡಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಹಲವು ಮೌಢ್ಯಗಳಿರುತ್ತವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಎಗ್ಗಿಲ್ಲದೇ ನಡೆಯುತ್ತವೆ. ಇದಕ್ಕೆ ಕಾನೂನಿನ ಅಜ್ಞಾನವೇ ಕಾರಣ. ಪುರುಷರು ಮಹಿಳೆಯರ ಬಗ್ಗೆ ಭಿನ್ನಾಪ್ರಾಯ ತೊರೆದು ಅವಳನ್ನು ಸಮಾಜದ ಸಮಾನ ಪ್ರಜೆಯಂತೆ ಕಾಣಬೇಕು. ಪ್ರತಿಯೊಬ್ಬ ಪೋಷಕರೂ ತಮ್ಮ ಗಂಡು ಮಕ್ಕಳಿಗೆ ಮನೆಯಲ್ಲಿಯೇ ಹೆಣ್ಣನ್ನು ಗೌರವಿಸುವ ಸಂಸ್ಕಾರ ನೀಡಬೇಕು ಎಂದು ಹೇಳಿದರು.

‘ಯುವಜನತೆ ಉತ್ತಮ ಅಭ್ಯಾಸ ರೂಢಿಸಿಕೊಂಡು ಉನ್ನತ ಶಿಕ್ಷಣ ಪಡೆಯಲು ಪಣ ತೊಡಬೇಕು. ಒಂದು ಮಗು ಸಮಾಜದಲ್ಲಿ ದೊಡ್ಡವ್ಯಕ್ತಿಯಾಗಬೇಕು. ಉನ್ನತ ಹುದ್ದೆಯಲ್ಲಿರಬೇಕು ಎಂಬುದನ್ನು ಬಿಟ್ಟು ಏನಾದರೂ ಆಗಲಿ ಮೊದಲು ಸಮಾಜದಲ್ಲಿ ಉತ್ತಮ ನಡವಳಿಕೆ ಹೊಂದಬೇಕು’ ಎಂಬ ನೀತಿಯನ್ನು ಬೋಧಿಸಿ ಎಂದು ಕಿವಿಮಾತು ಹೇಳಿದರು.

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ‘ಚಳ್ಳಕೆರೆ ತಾಲ್ಲೂಕಿನ ಗಡಿಗ್ರಾಮವಾದ ತೊರೆಕೋಲಮ್ಮನಹಳ್ಳಿ ಗ್ರಾಮವು ತಾಲ್ಲೂಕಿನಲ್ಲೇ ಅತಿ ಹಿಂದುಳಿದ ಗ್ರಾಮವಾಗಿದ ಎಂಬ ಮಾಹಿತಿ ಇದೆ. ಈ ಗ್ರಾಮದಿಂದಲೇ ಹೆಚ್ಚು ಜನರು ತಾಲ್ಲೂಕು ಕಚೇರಿಗೆ ಅಲೆದಾಡುತ್ತಿರುವುದು ನನ್ನ ಗಮನಕ್ಕೆ ಬಂದಿತು. ಹಾಗಾಗಿ ಈ ಗ್ರಾಮದಲ್ಲಿರುವ ಎಲ್ಲ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಬೇಕು ಎಂದು ನಿರ್ಧರಿಸಿ 15 ದಿನಗಳಿಂದ ಕಂದಾಯ, ಕೃಷಿ, ತೋಟಗಾರಿಕೆ, ಕಾರ್ಮಿಕ, ಆರೋಗ್ಯ, ಸಮಾಜಕಲ್ಯಾಣ ಹಲವು ಇಲಾಖೆಗಳ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆದುಕೊಂಡು ಬಂದು ಇರುವ ಎಲ್ಲ ಸಮಸ್ಯೆಗಳ ಅಧ್ಯಯನ ನಡೆಸಿ ಪರಿಹರಿಸಲಾಗಿದೆ’ ಎಂದು ಹೇಳಿದರು.

‘ಗ್ರಾಮದಲ್ಲಿ ಮೊದಲು ಸಂಪೂರ್ಣ ಕೋವಿಡ್ ಲಸಿಕೆ ನೀಡಬೇಕು ಎಂಬ ಉದ್ದೇಶದೊಂದಿಗೆ ಕೆಲಸ ಆರಂಭಿಸಿ 1,173 ಜನರಿಗೆ ಎರಡೂ ಡೋಸ್‌ಗಳನ್ನು ನೀಡಿ ಸಂಪೂರ್ಣ ಲಸಿಕೀಕರಣಗೊಂಡ ಗ್ರಾಮವಾಗಿ ಘೋಷಿಸಿದೆವು. ಮತ್ತು 6 ಪೌತಿಖಾತೆ, 31 ವೃದ್ಧರಿಗೆ ಪಿಂಚಣಿ ವ್ಯವಸ್ಥೆ, 2 ಪೋಡಿ ಪ್ರಕರಣ, 9 ಪಹಣಿ ಸಮಸ್ಯೆ ಪರಿಹಾರ, 94 ಪೈಕಿ ಪಹಣಿ ಒಟ್ಟುಗೂಡಿಸುವಿಕೆ, 306 ಪಿ.ಎಂ. ಕಿಸಾನ್ ಸೌಲಭ್ಯ, ಕೃಷಿ ಇಲಾಖೆಯ ಫ್ರೂಟ್‌ ತಂತ್ರಾಂಶದಲ್ಲಿ 342 ಕೃಷಿಕರ ನೋಂದಣಿ, 431 ರೈತರ ಬೆಳೆ ಸಮೀಕ್ಷೆ, 258 ರೈತರ ಆಧಾರ್ ಸೀಡಿಂಗ್, ಫಾರಂ 57ರಲ್ಲಿ 15 ಜನರಿಗೆ ಸಮಸ್ಯೆಗಳನ್ನು ಪರಿಸಲಾಗಿದೆ. ಆ ಮೂಲಕ ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇನ್ನೂ 6 ತಿಂಗಳು ಈ ಗ್ರಾಮದ ಜನರು ತಾಲ್ಲೂಕು ಕೇಂದ್ರಕ್ಕೆ ಸಮಸ್ಯೆ ಎಂದು ಹೇಳಿಕೊಂಡು ಬರುವ ಅಗತ್ಯವೇ ಇಲ್ಲ’ ಎಂದು ಹೇಳಿದರು.

ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಜಿ. ತಿಪ್ಪೇಸ್ವಾಮಿ ಮಾತನಾಡಿ, ಗ್ರಾಮಕ್ಕೆ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ, ಕುಡಿಯುವ ನೀರಿನ ಸಂಗ್ರಹಕ್ಕಾಗಿ ನೆಲಮಟ್ಟದ ಮತ್ತು ಓವರ್‌ಹೆಡ್ ಟ್ಯಾಂಕ್ ನಿರ್ಮಾಣ, ಜಿನಗಿ ಹಳ್ಳಕ್ಕೆ ಬ್ಯಾರೇಜ್ ನಿರ್ಮಾಣ, ಗ್ರಾಮದ ಮುಖ್ಯ ರಸ್ತೆ ವಿಸ್ತರಣೆ, ಗ್ರಾಮದಲ್ಲಿರುವ ಎಲ್ಲ ಜನಾಂಗಗಳಿಗೂ ಸ್ಮಶಾನ ನಿರ್ಮಾಣ, ಸಾಮೂಹಿಕ ಶೌಚಾಲಯ ನಿರ್ಮಾಣ, ಜಿನಗಿಹಳ್ಳದ ಸೇತುವೆ ದುರಸ್ತಿ, ಗ್ರಾಮಕ್ಕೆ ಒಳಚರಂಡಿ ವ್ಯವಸ್ಥೆ, ಬೀದಿದೀಪಗಳ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಶಂಕರಸ್ವಾಮಿ, ಉಪಾಧ್ಯಕ್ಷೆ ಕೆ.ಸಿ. ರಾಧಾ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಟಿ.ಎಚ್.ಒ. ಪ್ರೇಮಸುಧಾ, ಕೃಷಿ ಸಹಾಯಕ ನಿರ್ದೇಶಕ ಅಶೋಕ್, ತೋಟಗಾರಿಕೆ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ರೇಷ್ಮೆ ಸಹಾಯಕ ನಿರ್ದೇಶಕ ಕೆಂಚೋಜಿರಾವ್, ಸಿಡಿಪಿಒ ಮೋಹನಕುಮಾರಿ, ಅಬಕಾರಿ ಉಪನಿರೀಕ್ಷಕ ನಾಗರಾಜ್, ಪೊಲೀಸ್ ಉಪನಿರೀಕ್ಷಕ ಮಹೇಶ್ ಲಕ್ಷ್ಮಣ ಹೊಸಪೇಟೆ ಅವರೂಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT