ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷದ ಬಾಟಲಿ ಹಿಡಿದು ರೈತ ಪ್ರತಿಭಟನೆ

ಬೆಳೆನಷ್ಟಕ್ಕೆ ಬಿಡಿಗಾಸು ಪರಿಹಾರದ ಆರೋಪ
Last Updated 18 ಡಿಸೆಂಬರ್ 2019, 14:58 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಕಾಲಿಕ ಮಳೆಗೆ ಬೆಳೆ ನಷ್ಟ ಅನುಭವಿಸಿದ ಹೊಸದುರ್ಗ ತಾಲ್ಲೂಕಿನ ರೈತರಿಗೆ ವಿತರಿಸಿದ ಪರಿಹಾರದ ಮೊತ್ತ ಅಸಮಾಧಾನ ಮೂಡಿಸಿದೆ. ಸಂಕಷ್ಟಕ್ಕೆ ಸಿಲುಕಿದ ರೈತರೊಬ್ಬರು ವಿಷದ ಬಾಟಲಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಗ್ರಾಮದ ಚಿಕ್ಕಣ್ಣ ಪ್ರತಿಭಟನೆ ನಡೆಸಿದ ರೈತ. ಹೋರಾಟಕ್ಕೆ ಬೆಂಬಲ ಸೂಚಿಸಿ ಗ್ರಾಮದ ಇತರರು ಬಂದಿದ್ದರು. ಹೆಚ್ಚಿನ ಪರಿಹಾರಕ್ಕೆ ಜಿಲ್ಲಾಧಿಕಾರಿ ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದು ಗ್ರಾಮಕ್ಕೆ ಮರಳಿದರು.

ವೇದಾವತಿ ನದಿಗೆ ನಿರ್ಮಿಸಿದ ಚೆಕ್‌ಡ್ಯಾಂ ಸಮೀಪದಲ್ಲೇ ಚಿಕ್ಕಣ್ಣ ಅವರ ಜಮೀನು ಇದೆ. ವಿಪರೀತ ಮಳೆಗೆ ಬ್ಯಾರೇಜ್‌ ಒಡೆದು ಜಮೀನಿಗೆ ನೀರು ನುಗ್ಗಿತ್ತು. ಒಂದು ಎಕರೆಯಲ್ಲಿದ್ದ 50ಕ್ಕೂ ಹೆಚ್ಚು ತೆಂಗಿನ ಮರಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಪಕ್ಕದ ಶಾರದಮ್ಮ ಎಂಬುವರ ಜಮೀನಿನ 20 ತೆಂಗಿನ ಮರಗಳು ಕೂಡ ನಾಶವಾಗಿದ್ದವು. ಚಿಕ್ಕಣ್ಣ ಅವರಿಗೆ ₹ 5,940 ಹಾಗೂ ಶಾರದಮ್ಮ ಅವರಿಗೆ ₹ 1,500 ಪರಿಹಾರ ವಿತರಣೆ ಮಾಡಲಾಗಿದೆ.

‘ಬ್ಯಾರೇಜ್‌ ಒಡೆದು ನುಗ್ಗಿದ ನೀರಿನಲ್ಲಿ ತೆಂಗಿನ ತೋಟ ಕೊಚ್ಚಿ ಹೋಗಿದೆ. ಬದುಕಿಗೆ ಆಸರೆಯಾಗಿದ್ದ ತೆಂಗಿನ ಮರಗಳು ಧರೆಗೆ ಉರುಳಿವೆ. ಸುಮಾರು 20 ಅಡಿಯಷ್ಟು ಕಂದಕ ನಿರ್ಮಾಣವಾಗಿದ್ದು, ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಸುಮಾರು ₹ 15 ಲಕ್ಷದಷ್ಟು ನಷ್ಟವಾಗಿದೆ. ನೆರೆ ನಿಂತು ಎರಡೂವರೆ ತಿಂಗಳ ಬಳಿಕ ಬಂದ ಪರಿಹಾರದ ಮೊತ್ತ ನೋಡಿ ನಿರಾಸೆಯಾಗಿದೆ’ ಎಂದು ಚಿಕ್ಕಣ್ಣ ಅಳಲು ತೋಡಿಕೊಂಡರು.

‘ಜಮೀನಿನಲ್ಲಿ ಇದ್ದ ಕೊಳವೆ ಬಾವಿ ಕೂಡ ಹಾಳಾಗಿದೆ. ನೀರಿನಲ್ಲಿ ಪಂಪ್‌ಸೆಟ್‌ ಕೊಚ್ಚಿಹೋಗಿದೆ. ಬದುಕಿಗೆ ಆಸರೆಯಾಗಿದ್ದ ಕೊಳವೆ ಬಾವಿ ಹಾಳಾಗಿದ್ದು, ಚಿಕ್ಕಣ್ಣ ಅವರನ್ನು ಕುಗ್ಗಿಸಿದೆ. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ತಹಶೀಲ್ದಾರ್‌ ಕಚೇರಿಗೆ ಅಲೆದು ಸಾಕಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ರಂಗನಾಥ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT