ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ

ರಾಜ್ಯ ರೈತ ಸಂಘ, ಎಸ್‌ಯುಸಿಐ ಕಾರ್ಯಕರ್ತರ ಪ್ರತಿಭಟನೆ
Last Updated 17 ಜೂನ್ 2020, 13:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಕಾರ್ಯಕರ್ತರು ಬುಧವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದ ಎದುರು ಜಮಾಯಿಸಿದ ರೈತರು ಅಲ್ಲಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತಲುಪಿದರು. ಭಿತ್ತಿ ಚಿತ್ರಗಳನ್ನು ಹಿಡಿದು ಒನಕೆ ಓಬವ್ವ ವೃತ್ತದಲ್ಲಿ ಸೇರಿದ ಎಸ್‌ಯುಸಿಐ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.

ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ಕರಡಿನಲ್ಲಿ ಸರ್ಕಾರ ಉಲ್ಲೇಖಿಸಿದ ಕಾರಣಗಳು ಬಾಲಿಷವಾಗಿವೆ. 79 ಎಬಿಸಿ ಮತ್ತು 80ನೇ ಕಲಾಂ ತೆಗೆದುಹಾಕಿದರೆ ಕಾಯ್ದೆ ಸಂಪೂರ್ಣ ಶಕ್ತಿಗುಂದುತ್ತದೆ. ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಗೆ ಈ ತಿದ್ದುಪಡಿ ತೀಲಾಂಜಲಿ ಇಟ್ಟಿದೆ ಎಂದು ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಾಗಿದ್ದಾರೆ. ಅವರ ಬದುಕು ಬೀದಿಗೆ ಬೀಳಲಿದೆ. ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗುವ ಪ್ರವೃತ್ತಿ ಹೆಚ್ಚಾಗಲಿದೆ. ರೈತಾಪಿ ಕೃಷಿ ಸಂಸ್ಕೃತಿ ಮಾಯವಾಗಿ ಬಂಡವಾಳಶಾಹಿ ಕೃಷಿ ಪದ್ಧತಿ ಬೆಳೆಯಲಿದೆ. ಆಹಾರ ಸಾರ್ವಭೌಮತ್ವಕ್ಕೆ ಪೆಟ್ಟುಬಿದ್ದು ಆಹಾರ ಭದ್ರತೆಯ ಹಕ್ಕು ನಾಶವಾಗುತ್ತದೆ. ಆಹಾರಕ್ಕಾಗಿ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗುತ್ತದೆ. ಸಾರ್ವಜನಿಕ ಚರ್ಚೆಗೆ ಅವಕಾಶ ನೀಡದೇ ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತರುವ ತುರ್ತು ಏನಿತ್ತು ಎಂದು ಪ್ರಶ್ನಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ ಬಾಬು, ಉಪಾಧ್ಯಕ್ಷರಾದ ಎಂ.ಬಿ.ತಿಪ್ಪೇಸ್ವಾಮಿ, ಎಂ.ಆರ್‌.ಪ್ರಭುಸ್ವಾಮಿ, ಬಸವರೆಡ್ಡಿ ಇದ್ದರು.

ಕಾರ್ಪೊರೇಟ್‌ ಕಂಪನಿಗೆ ನೆರವು:ಎಸ್‌ಯುಸಿಐ ಯುವ ಮುಖಂಡ ನಿಂಗರಾಜು ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕ್ರಮವನ್ನು ಎಸ್‌ಯುಸಿಐ ಖಂಡಿಸುತ್ತಿದೆ. ಕಾರ್ಪೊರೇಟ್‌ ಕಂಪನಿ, ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಕಾನೂನು ತಿದ್ದುಪಡಿಗೆ ಮುಂದಾಗಿದೆ. ಕೃಷಿಯತ್ತ ಜನರನ್ನು ಸೆಳೆಯುವುದಾಗಿ ಸುಳ್ಳು ಹೇಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಯುಸಿಐ ಮುಖಂಡ ರವಿಕುಮಾರ್ ಮಾತನಾಡಿ, ರೈತರು, ಸಣ್ಣ ರೈತರು ಭೂಮಿ ರಕ್ಷಿಸಿಕೊಳ್ಳಲು ಬೇಕಿದ್ದ ಅಗತ್ಯ ಕಾನೂನಿನ ಬೆಂಬಲವನ್ನು ಕಾಯ್ದೆ ನೀಡಿತ್ತು. ಭೂರಹಿತರಿಗೆ ಸರ್ಕಾರವೇ ಭೂಮಿ ಒದಗಿಸುವ ಸದಾಶಯವೂ ಕಾಯ್ದೆಯಲ್ಲಿತ್ತು. ಕಾಯ್ದೆ ತಿದ್ದುಪಡಿಯಿಂದ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಗಾತ್ರದ ರೈತರು ಭೂಮಿಯನ್ನು ಮಾರಾಟ ಮಾಡಿ ಬೀದಿಗೆ ಬೀಳಲಿದ್ದಾರೆ’ ಎಂದು ದೂರಿದರು.

ಮುಖಂಡರಾದ ವಿನಯ್, ಕುಮುದಾ, ತ್ರಿವೇಣಿ, ಮೇಘನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT