ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಧರ್ಮಪುರ: ಪೂರ್ಣಿಮಾಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧರ್ಮಪುರ: ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಕಾರಣ ಅವರ ಬೆಂಬಲಿಗರು ಶುಕ್ರವಾರ ಪಾದಯಾತ್ರೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರ ಹಾಕಿದ್ದಾರೆ.

ಪೂರ್ಣಿಮಾ ಬೆಂಬಲಿಗರು ಮತ್ತು ಕಾರ್ಯಕರ್ತರು ಧರ್ಮಪುರದ ಶನೇಶ್ವರ ದೇವಸ್ಥಾನದ ವೃತ್ತದಲ್ಲಿ ಬೆಳಿಗ್ಗೆ ಗುಂಪು ಸೇರಿ ಬೊಮ್ಮಾಯಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪಾದಯಾತ್ರೆಯ ನೇತೃತ್ವ ವಹಿಸಿದ್ದ ಶ್ರವಣಗೆರೆಯ ಎಂ. ಶಿವಣ್ಣ ಮಾತನಾಡಿ, ‘ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯವಿದ್ದು, ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ಸಚಿವ ಸ್ಥಾನದ ಭರವಸೆ ನೀಡಿ, ನಂತರ ಕೊಡದಿರುವುದು ಇಡೀ ಹಿಂದುಳಿದ ಸಮುದಾಯಗಳನ್ನು ಬಿಜೆಪಿ ನಾಯಕರು ಮರೆತಂತೆ ಕಾಣುತ್ತದೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವಾಗಲೂ ಬೇರೆ ಪಕ್ಷದವರು ಶಾಸಕರಾಗಿ ಆಯ್ಕೆಯಾಗುತ್ತಿದ್ದರು. ಆದರೆ, ಮೊದಲ ಬಾರಿಗೆ ಹಿರಿಯೂರಿನಲ್ಲಿ ಬಿಜೆಪಿಯ ಗೆಲುವಿನ ಬಾವುಟ ಹಾರಿಸಿದ್ದಾರೆ. ಯಾವುದೇ ಕಳಂಕವಿಲ್ಲದ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ಕೊನೆಯವರೆಗೂ ಸಚಿವ ಸ್ಥಾನದ ಭರವಸೆ ಮೂಡಿಸಿ ಕೊನೆಯ ಗಳಿಗೆಯಲ್ಲಿ ಮೊಟ್ಟೆ ಹಗರಣದ ಆರೋಪ ಹೊತ್ತ ಶಶಿಕಲಾ ಜೊಲ್ಲೆ ಅವರಿಗೆ ಸಚಿವ ಸ್ಥಾನ ನೀಡಿರುವುದು ಅತ್ಯಂತ ನೋವಿನ ಸಂಗತಿ. ಈಗಲಾದರೂ ಉಳಿದಿರುವ ನಾಲ್ಕು ಸ್ಥಾನಗಳಲ್ಲಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಬೇಕು. ಅದಕ್ಕಾಗಿ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸಿ ಪ್ರತಿಭಟನೆ ಮಾಡಲಾಗುವುದು’ ಎಂದರು.

ಧರ್ಮಪುರದಿಂದ 33 ಕಿ.ಮೀ. ದೂರದ ಹಿರಿಯೂರಿಗೆ ಪಾದಯಾತ್ರೆ ನಡೆಸಲಾಗುತ್ತಿದ್ದು, ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು, ಬಿಜೆಪಿ ಮುಖಂಡರು ಸೇರಿದಂತೆ ಹೋಬಳಿಯ ವಿವಿಧ ಗ್ರಾಮದ ಜನರು ಭಾಗಿಯಾಗಿ ಕಣಜನಹಳ್ಳಿ ವೃತ್ತದ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಿಡಿ
ಕಾರಿದರು.

ಪಾದಯಾತ್ರೆಯ ಸಂದರ್ಭದಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಡಿವೈಎಸ್‌ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ, ಎಸ್ಐ ಪರಶುರಾಮ್ ಎಸ್. ಲಮಾಣಿ ಸ್ಥಳಕ್ಕೆ ಬಂದು ಶಾಂತಿ ಪಾಲನೆಗೆ ಸೂಚಿಸಿದರು.

ನಾಗರಾಜರಾವ್, ಅಭಿನಂದನ್, ಬಂಗಾರಪ್ಪ, ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಾಬು ರಾಜೇಂದ್ರ ಪ್ರಸಾದ್, ಅಸ್ಲಾಂ ಖಾನ್, ರಂಗನಾಥ್, ನರಸಿಂಹಮೂರ್ತಿ, ಓಬಳೇಶ್, ಮೋಹನ್, ರವಿಶಂಕರ, ರಾಕೇಶ್, ಯಲ್ಲಪ್ಪ, ವೀರಣ್ಣ, ಮಂಜುನಾಥ್, ಹೊಲಿಗೇನಪ್ಪ, ಪರಮೇಶ್ವರಪ್ಪ, ಜಿ.ಗುರುಲಿಂಗಪ್ಪ, ಮಲ್ಲ, ನಾಗರಾಜ್, ಚಿಕ್ಕಣ್ಣ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು