ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿ ಮೀಸಲಾತಿಗೆ ಒತ್ತಾಯ: ಉರುಳುಸೇವೆ

ಬಿಸಿಲು ಲೆಕ್ಕಿಸದೇ ಉರುಳಿದ ಕಾಡುಗೊಲ್ಲ ಸಮುದಾಯದವರು
Last Updated 15 ಫೆಬ್ರುವರಿ 2021, 20:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಸೋಮವಾರ ‘ಉರುಳು ಸೇವೆ’ಯೊಂದಿಗೆ ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಪಂಗಡಕ್ಕೆ ಸೇರಲು ಎಲ್ಲ ಅರ್ಹತೆ ಇದ್ದರೂ ಸಮುದಾಯವನ್ನು ವಂಚಿಸಲಾಗುತ್ತಿದೆ. ಇನ್ನಾದರೂ ಎಸ್‌ಟಿ ಮೀಸಲಾತಿ ಸೌಲಭ್ಯ ದೊರಕಿಸಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ ಮೂಲಕ ಮನವಿ ರವಾನಿಸಲಾಯಿತು.

ಹಳೆಯ ದಿರಿಸು ತೊಟ್ಟು, ತಲೆಯ ಮೇಲೆ ಟವೆಲ್ ಸುತ್ತಿಕೊಂಡಿದ್ದ ಅನೇಕರು ಉರಿ ಬಿಸಿಲು, ಸುಡುವ ಕಾಂಕ್ರೀಟ್ ರಸ್ತೆಯನ್ನು ಲೆಕ್ಕಿಸದೆ ಉರುಳುಸೇವೆ ಮಾಡಿದರು. ಪ್ರವಾಸಿ ಮಂದಿರದಿಂದ ಆರಂಭವಾದ ಉರುಳುಸೇವೆ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಮಾರ್ಗ ಮಧ್ಯೆ ‘ಜೈ ಜುಂಜಪ್ಪ, ಜೈ ಕಾಟಪ್ಪ, ಜೈ ಕಾಡುಗೊಲ್ಲ’ ಎಂದು ಘೋಷಣೆ ಕೂಗಿದರು.

ಸಮುದಾಯಕ್ಕೆಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಧಿಕ್ಕಾರ ಕೂಗಿದರು. ಕಚೇರಿ ಆವರಣದೊಳಗೆ ಹೋಗಲು ಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಡ್ಡ ಇಟ್ಟು ತಡೆದರು. ಇದರಿಂದ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿ ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟುಹಿಡಿದರು. ಕೊನೆಗೆ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ. ಶಿವು ಯಾದವ್, ಮುಖಂಡರಾದ ಮಂಜಪ್ಪ, ದುಮ್ಮಿ ಗೊಲ್ಲರಹಟ್ಟಿ ಚಿತ್ತಪ್ಪ, ನಾಗಶೇಖರ್, ಲಕ್ಷ್ಮೀಕಾಂತ್, ಭರಮಸಾಗರ ಗೊಲ್ಲರಹಟ್ಟಿ ರಾಜಪ್ಪ, ತಿಮ್ಮಣ್ಣ, ಮಹೇಶ್‌, ಚಿತ್ರಹಳ್ಳಿ ಕಾಟಲಿಂಗಪ್ಪ, ರಮೇಶ್, ಜಾಲಿಕಟ್ಟೆ ಜಗದೀಶ್, ರಾಜ್‌ಕುಮಾರ್, ಸಂಪತ್‌ಕುಮಾರ್, ಎಸ್‌. ತಿಮ್ಮಯ್ಯ, ಮಂಜುನಾಥ್, ಕುಣಿಗಲ್ ನಾಗಣ್ಣ ಉರುಳುಸೇವೆ ಮಾಡಿದರು.

ವಿಧಾನಸೌಧ ಮುತ್ತಿಗೆ: ಎಚ್ಚರಿಕೆ
ಕಾಡುಗೊಲ್ಲರ ಆಚಾರ, ವಿಚಾರ ಎಲ್ಲವೂ ಬುಡಕಟ್ಟು ಸಂಸ್ಕೃತಿಯುಳ್ಳ ಪರಿಶಿಷ್ಟ ಪಂಗಡದವರಂತೆಯೇ ಇವೆ. ಇದನ್ನು ಮನಗಂಡು ಎಸ್‌ಟಿ ಮೀಸಲಾತಿ ಕಲ್ಪಿಸದಿದ್ದರೆ ವಿಧಾನಸೌಧ ಮುತ್ತಿಗೆಗೂ ಯತ್ನಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಸಿ. ಶಿವು ಯಾದವ್ ಎಚ್ಚರಿಕೆ ನೀಡಿದರು.

‘ಕೇಂದ್ರ ಸರ್ಕಾರ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮೀನಾಮೇಷ ಎಣಿಸುತ್ತಿದೆ. ಇದು ನಮ್ಮ ಆರಂಭಿಕ ಹೋರಾಟ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ತೀವ್ರಸ್ವರೂಪದ ಹೋರಾಟ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT