ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಕಾರಿಡಾರ್‌ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

Last Updated 7 ಆಗಸ್ಟ್ 2022, 6:21 IST
ಅಕ್ಷರ ಗಾತ್ರ

ಧರ್ಮಪುರ: ಸಮೀಪದ ಹರಿಯಬ್ಬೆಯಿಂದ ಹಿರಿಯೂರಿನವರೆಗೆ ಕೆಪಿಟಿಸಿಎಲ್ ವತಿಯಿಂದ ನಿರ್ಮಿಸಲಾಗುತ್ತಿರುವ 66/11 ಕೆ.ವಿ. ಮಾರ್ಗದ ಜಮೀನಿನಲ್ಲಿಯ ಕಾರಿಡಾರ್‌ಗೆ ಪರಿಹಾರ ಕೊಡಬೇಕೆಂದು ಆಗ್ರಹಿಸಿ ರೈತರು ಶನಿವಾರ ಹರಿಯಬ್ಬೆ ವಿದ್ಯುತ್ ಉಪ ಕೇಂದ್ರದ ಹತ್ತಿರ ಪ್ರತಿಭಟನೆ ನಡೆಸಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ 28 ಕಿ.ಮೀ. ದೂರದವರೆಗೆ ವಿದ್ಯುತ್ ಪ್ರಸರಣದ ಮಾರ್ಗದ ತಂತಿಯನ್ನು ಬದಲಾಯಿಸುವುದು ಮತ್ತು ಹೆಚ್ಚುವರಿ ಗೋಪುರಗಳನ್ನು ಅಳವಡಿಸಲು ಈಗಾಗಲೇ ಕಾಮಗಾರಿ ಶುರುವಾಗಿದೆ. ಆದರೆ, ರೈತರ ಜಮೀನಿನಲ್ಲಿ ಗೋಪುರ ನಿರ್ಮಿಸಲು ಮತ್ತು ಪಕ್ಕದ ಕಾರಿಡಾರ್ ಜಮೀನಿಗೆ ಪರಿಹಾರ ಕೊಡದೇ ಇಲಾಖೆಯ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ರೈತರು ದೂರಿದರು.

‘ಕಾಮಗಾರಿ ಆರಂಭವಾಗಿ 4 ತಿಂಗಳು ಆಗಿದೆ. ಎಲ್ಲಯೂ ರೈತರ ಗಮನಕ್ಕೆ ತಂದಿಲ್ಲ. ಕೆಲವು ಕಡೆ ಪರಿಹಾರ ನೀಡಿದ್ದಾರೆ. ಇನ್ನಷ್ಟು ಕಡೆ ಪೊಲೀಸ್ ಬಲ ಪ್ರಯೋಗ ಮಾಡಿಸಲು ಮುಂದಾಗಿದ್ದಾರೆ. ಈ ರೀತಿ ತಾರತಮ್ಯವೇಕೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಚ್. ವೆಂಕಟೇಶಪ್ಪ ಆಕ್ರೋಶ ವ್ಯಕ್ತ ಪಡಿಸಿದರು.

‘ಬಯಲುಸೀಮೆಯ ರೈತರು ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಒಂದಿಂಚು ಭೂಮಿಯೂ ಮುಖ್ಯವಾಗಿದೆ. ಕೆಪಿಟಿಸಿಎಲ್ ಅಧಿಕಾರಿಗಳು ಡಿಪಿಆರ್ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಬೇಕು. ಯಾರಿಗೂ ನೋಟಿಸ್ ನೀಡಿಲ್ಲ. ಪರಿಹಾರ ಕೊಟ್ಟ ಹೊರತು ವಿದ್ಯುತ್ ಕಾಮಗಾರಿ ನಡೆಯಲು ಬಿಡುವುದಿಲ್ಲ’ ಎಂದು ರೈತ ಮುಂಗುಸುವಳ್ಳಿ ಬಂಗಾರಪ್ಪ ತಿಳಿಸಿದರು.

‘ಹಾಲಿ ಇರುವ ವಿದ್ಯುತ್ ಪ್ರಸರಣ ಮಾರ್ಗ 1980ರಲ್ಲಿ ಕಾಮಗಾರಿ ನಡೆದಿರುವುದು. ಈಗ ತಂತಿ ಬದಲಾವಣೆ ಮತ್ತು ಕೆಲವೊಂದು ಕಡೆ ಗೋಪುರ ನಿರ್ಮಿಸಲಾಗುತ್ತಿದೆ. ಗೋಪುರ ನಿರ್ಮಾಣಕ್ಕೆ ಒಂದು ಚದರ ಮೀಟರ್‌ಗೆ ₹ 3,000 ಸಾವಿರ ಪರಿಹಾರ ಕೊಡಲಾಗುತ್ತಿದೆ. ಜತೆಗೆ ಬೆಳೆ ನಷ್ಟವಿದ್ದರೆ ಅದಕ್ಕೂ ಪರಿಹಾರ ನೀಡಲಾಗುತ್ತಿದೆ. ಆದರೆ, ಕಾರಿಡಾರ್‌ಗೆ ಪರಿಹಾರ ಇಲ್ಲ’ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ್‌ ಸ್ಪಷ್ಟನೆ ನೀಡಿದರು.

ತಹಶೀಲ್ದಾರ್ ಭೇಟಿ: ಕೆಪಿಟಿಸಿಎಲ್ ಅಧಿಕಾರಿಗಳು ಕಾಮಗಾರಿ ಮಾಡಲೇಬೇಕೆಂದು ಪೊಲೀಸ್ ಬಂದೋಬಸ್ತ್‌ನಲ್ಲಿ ಬಂದಿದ್ದರು. ಆದರೆ, ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಮತ್ತು ನೂರಾರು ರೈತರು ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ್ ಭೇಟಿ ನೀಡಿ ಮಾತುಕತೆ ನಡೆಸಿದರು.

‘ರೈತರು ಶಾಂತಿಯಿಂದ ಇರಬೇಕು. ಇದರ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು. ಎಲ್ಲ ರೈತರಿಗೂ ಮಾಹಿತಿ ನೀಡಿ ಕಾಮಗಾರಿ ನಡೆಸಿ’ ಎಂದು ಕೆಪಿಟಿಸಿಎಲ್ ಅಧಿಕಾರಿಗಳಿಗೆ ತಿಳಿಸಿದರು. ಸಿಪಿಐ ರಾಘವೇಂದ್ರ, ಪಿಎಸ್ಐಗಳಾದ ಪರಶುರಾಮ್ ಎಸ್. ಲಮಾಣಿ, ಮಂಜುನಾಥ್, ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಪ್ರತಿಭಟನೆಯಲ್ಲಿ ಚಂದ್ರಪ್ಪ, ಗುಂಡಪ್ಪ, ತಿಪ್ಪೇಸ್ವಾಮಿ, ನಾಗರಾಜ್, ಶಿವಣ್ಣ, ಸಣ್ಣಪ್ಪ, ಚಿಕ್ಕಣ್ಣ, ಯೋಗಣ್ಣ, ಶಶಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಹಾಗೂ ನೂರಾರು ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT