ಮೊಳಕಾಲ್ಮುರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಮಂಗಳವಾರ ತಮಟೆ ಚಳವಳಿ ನಡೆಸಿದರು.
ಬಸ್‌ನಿಲ್ದಾಣದ ಆವರಣದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ತಮಟೆಗಳನ್ನು ಬಡಿಯುತ್ತಾ ಸರ್ಕಾರದ ಧೋರಣೆ ಖಂಡಿಸಿ ಘೋಷಣೆಗಳನ್ನು ಕೂಗಿದರು. ನಂತರ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ದಲಿತ ಹೋರಾಟಗಾರ ಪ್ರೊ.ಬಿ. ಕೃಷ್ಣಪ್ಪ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧರಣಿ ಆರಂಭಿಸಿದರು.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಮಾದಿಗ ಜನಾಂಗಕ್ಕೆ ಒಳಮೀಸಲಾತಿ ಸೌಕರ್ಯ ಕಲ್ಪಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ರಾಜ್ಯ ಸರ್ಕಾರ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಂಡು ಜಾರಿಗೆ ಮುಂದಾಗಬೇಕು. ಅಲ್ಲಿಯವರೆಗೆ ವಿವಿಧ ನೇಮಕಾತಿಗಳನ್ನು ಮುಂದೂಡಬೇಕು ಎಂದು ಸಮಿತಿ ಮುಖಂಡ ಜಿ. ಶ್ರೀನಿವಾಸಮೂರ್ತಿ ಮನವಿ ಮಾಡಿದರು.
ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿರಿಸಿರುವ ಎಸ್‌ಇಪಿ, ಟಿಎಸ್‌ಪಿ ವಿಶೇಷ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಈ ಅನುದಾನ ಬಳಕೆ ನಿಲ್ಲಿಸಿ ಸ್ಥಗಿತವಾಗಿರುವ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಈಚೆಗೆ ನಡೆದ ದಲಿತ ಸಮುದಾಯದ ಯಮನೂರಪ್ಪ ಕೊಲೆ ಪ್ರಕರಣ ಖಂಡನೀಯ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಯಮನೂರಪ್ಪ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು. ತಾಲ್ಲೂಕಿನ ಅನೇಕ ಕಡೆ ದಲಿತ ಸಮುದಾಯದವರಿಗೆ ಶವಸಂಸ್ಕಾರ ಮಾಡಲು ಸ್ಥಳವಿಲ್ಲದೇ ತೊಂದರೆಯಾಗಿದೆ. ಈ ಬಗ್ಗೆ ವರದಿ ತರಿಸಿಕೊಂಡು ಸ್ಥಳದ ವ್ಯವಸ್ಥೆ ಮಾಡಬೇಕು ಎಂದು ಸಮಿತಿ ತಾಲ್ಲೂಕು ಸಂಚಾಲಕ ಡಿ.ಒ. ಕರಿಬಸಪ್ಪ ಮನವಿ ಮಾಡಿದರು.
ತಾಲ್ಲೂಕಿನಲ್ಲಿ ಪ್ರತಿ 2 ತಿಂಗಳಿಗೊಮ್ಮೆ ದೌರ್ಜನ್ಯ ತಡೆ ಕಾಯ್ದೆ ಸಭೆಯನ್ನು ನಡೆಸಲು ಕ್ರಮ ಕೈಗೊಳ್ಳಬೇಕು, ಅಲ್ಲಲ್ಲಿ ಕಂಡುಬರುತ್ತಿರುವ ಅಸ್ಪೃಶ್ಯತೆ ಘಟನೆಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಸಿಪಿಐ ವಸಂತ್ ವಿ. ಆಸೋದೆ, ಶೀರಸ್ತೇದಾರ್ ಏಳುಕೋಟಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ನಂದೀಶ್ ಮನವಿ ಸ್ವೀಕರಿಸಿದರು.
ದಸಂಸಯ ರಾಯಾಪುರ ನಾಗೇಂದ್ರಪ್ಪ, ನಾಗೇಂದ್ರಪ್ಪ, ಮೊಗಲಹಳ್ಳಿ ಸಿದ್ದಾರ್ಥ, ಮಂಜಣ್ಣ, ತಿಪ್ಪೇಸ್ವಾಮಿ, ಮರಿಸ್ವಾಮಿ, ಅಜ್ಜೇರು ತಿಪ್ಪೇಸ್ವಾಮಿ, ರುದ್ರಮುನಿ, ಸೋಮಶೇಖರ್, ಪರಮೇಶ್, ಬಲರಾಮ್, ಬಸವರಾಜ್, ಹೊನ್ನೂರಸ್ವಾಮಿ, ಚಂದ್ರಣ, ಶಿವಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.