ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ದಿವ್ಯಾ ಪ್ರಕರಣದ ತನಿಖೆಗೆ ಆಗ್ರಹ

ವಿವಿಧ ಸಂಘಟನೆಗಳ ಪದಾಧಿಕಾರಿಗಳಿಂದ ಪ್ರತಿಭಟನೆ
Last Updated 27 ಫೆಬ್ರುವರಿ 2020, 12:33 IST
ಅಕ್ಷರ ಗಾತ್ರ

ಚಿತ್ರದುರ್ಗ: ದಿವ್ಯಾ ಸಾವಿನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ, ಸಮಗ್ರ ಪರಿಶೀಲನೆ ಮಾಡಬೇಕು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಅಪ್ರಾಪ್ತ ವಯಸ್ಕರು, ಯುವತಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಕೊಲೆ ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ದಿವ್ಯಾ ಸಾವಿಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎಐಎಂಎಸ್‌ಎಸ್ ಜಿಲ್ಲಾ ಸಹ ಸಂಚಾಲಕಿ ಕುಮುದಾ ಮಾತನಾಡಿ, ‘ತಾಲ್ಲೂಕಿನ ಸಿರಿಗೆರೆಯ ಚಿಕ್ಕೇನಹಳ್ಳಿ ಗ್ರಾಮದ ದಿವ್ಯಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮನೆಯಿಂದ ಹೊರಟವಳು ಶಿವಮೊಗ್ಗದ ಬಳಿಯ ಪುರ್ಲೆ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾದಳು. ಇದರ ಹಿಂದಿರುವ ದುಷ್ಕರ್ಮಿಗಳಿಗೆ ಶಿಕ್ಷೆಯಾಗಲೇಬೇಕು’ ಎಂದು ಒತ್ತಾಯಿಸಿದರು.

‘ಸ್ತ್ರೀಯನ್ನು ನೋಡುವ ದೃಷ್ಟಿಕೋನ ಸಮಾಜದಲ್ಲಿ ಬದಲಾಗುತ್ತಿಲ್ಲ. ಇದರಿಂದಾಗಿ ಇಂತಹ ಘಟನೆ ಮರುಕಳಿಸುತ್ತಲೇ ಇದೆ. ಮಹಿಳೆಯರನ್ನು ಗೌರವದಿಂದ ಕಾಣುವ ವಾತಾವರಣ ಎಲ್ಲೆಡೆ ನಿರ್ಮಾಣವಾಗಬೇಕು. ಜತೆಗೆ ಸೂಕ್ತ ಭದ್ರತೆ ಒದಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್, ‘ಸ್ವಚ್ಛ ಭಾರತ ನಿರ್ಮಾಣಕ್ಕಿಂತಲೂ ಮೊದಲು ಸಿನಿಮಾಗಳಲ್ಲಿ, ಮಾಧ್ಯಮಗಳಲ್ಲಿ ಮಹಿಳೆಯರನ್ನು ಭೋಗದ ವಸ್ತುವಾಗಿ ತೋರಿಸುವುದನ್ನು ತಡೆಯಬೇಕು. ಅಶ್ಲೀಲ ಚಿತ್ರ, ಸಾಹಿತ್ಯ, ಸಂಭಾಷಣೆಗೆ ಅವಕಾಶ ಕೊಡಬಾರದು’ ಎಂದು ಒತ್ತಾಯಿಸಿದರು.

‘ಇದು ಖಂಡಿತ ಆತ್ಮಹತ್ಯೆ ಅಲ್ಲ. ಈ ಪ್ರಕರಣ ಅನುಮಾನಾಸ್ಪದವಾಗಿದೆ. ದೂರು ದಾಖಲಿಸಿ ಒಂದು ತಿಂಗಳು ಕಳೆದರೂ ಪ್ರಕರಣದ ತನಿಖೆಯಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ಮೃತ ದಿವ್ಯಾ ಸಾವಿನ ಕುರಿತು ಸಮಗ್ರ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

‘ಕುಟುಂಬಕ್ಕೆ ಆಧಾರವಾಗಿದ್ದ ದಿವ್ಯಾ ಸಾವಿನಿಂದ ತುಂಬಲಾರದ ನಷ್ಟ ಉಂಟಾಗಿದೆ. ಆದ್ದರಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆಯಾಗಬೇಕು’ ಎಂದು ಎಐಡಿವೈಒ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ, ಗ್ರಾಮಸ್ಥ ಹನುಮಂತಪ್ಪ, ಸಹೋದರಿ ದೀಪಾ, ಸ್ನೇಹಿತೆ ಸಂಗೀತಾ ಸರ್ಕಾರಕ್ಕೆ ಕೋರಿದರು.

ಸಂಘಟನೆಗಳ ಪದಾಧಿಕಾರಿಗಳಾದ ನಿಂಗರಾಜು, ಮಲ್ಲಿಕಾರ್ಜುನ್, ಮಂಜುನಾಥ್, ವಕೀಲ ಪ್ರತಾಪ್‌ ಜೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT