ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಹೆಸರಲ್ಲಿ ಜೇಬಿಗೆ ದುಡ್ಡು: ‘ಮುಖ್ಯಮಂತ್ರಿ’ ಚಂದ್ರು

ಕಾಂಗ್ರೆಸ್ ಮುಖಂಡ ‘ಮುಖ್ಯಮಂತ್ರಿ’ ಚಂದ್ರು ಆರೋಪ
Last Updated 24 ಅಕ್ಟೋಬರ್ 2020, 14:20 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕೋವಿಡ್‌ ಹೆಸರಲ್ಲಿ ಶೇ 60ರಷ್ಟು ದರೋಡೆ ನಡೆಯುತ್ತಿದೆ. ಆ ದುಡ್ಡು ಕೆಲವರ ಮನೆ ಸೇರುತ್ತಿದೆ. ಇದು ಮಾನವೀಯತೆಯೇ’ ಎಂದು ಕಾಂಗ್ರೆಸ್ ಮುಖಂಡ ‘ಮುಖ್ಯಮಂತ್ರಿ’ ಚಂದ್ರು ಪ್ರಶ್ನಿಸಿದರು.

‘ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ತುಂಬಲಾರದ ನಷ್ಟವಾಗಿದೆ. ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ’ ಎಂದು ಬಿಜೆಪಿ ಹೆಸರು ಪ್ರಸ್ತಾಪಿಸದೇ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ರಾಜ್ಯದಲ್ಲಿ ಕೊರೊನಾ ಭೀತಿ, ಮತ್ತೊಂದೆಡೆ ಅತಿವೃಷ್ಟಿ ಉಂಟಾಗಿದೆ. ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ನಾಡಿನಲ್ಲಿ ಅಭಿವೃದ್ಧಿ ಕೆಲಸ ಆಗದಿದ್ದರೂ ಪರವಾಗಿಲ್ಲ. ಜನರ ಜೀವ ಉಳಿಸುವ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರಾಣಕ್ಕಿಂತಲೂ ಯಾವುದು ದೊಡ್ಡದಲ್ಲ. ಆದ್ದರಿಂದ ಒಂದು ವರ್ಷ ವ್ಯರ್ಥವಾದರೂ ಸರಿ. ಶಾಲಾ-ಕಾಲೇಜು ತೆರೆಯಬಾರದು’ ಎಂದು ಒತ್ತಾಯಿಸಿದರು.

‘ರಾಜ್ಯದ ಜಿಎಸ್‌ಟಿ ಪಾಲು ಸೇರಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಸಂಬಂಧ ಕೇಂದ್ರಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಿ, ಅನುದಾನ ತರುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ನೊಂದವರ ಕಣ್ಣೀರು ಒರೆಸುವ ಕೆಲಸವಾಗಬೇಕು’ ಎಂದು ಆಗ್ರಹಿಸಿದರು.

‘ಪಕ್ಷಾತೀತವಾಗಿ ಎಲ್ಲರೂ ಹುಸಿ ಸುಳ್ಳು ಹೇಳುತ್ತಿದ್ದಾರೆ. ಅದನ್ನು ಮಾಧ್ಯಮಗಳು ದೊಡ್ಡದಾಗಿ ಪ್ರತಿಬಿಂಬಿಸುತ್ತಿವೆ. ಈಚೆಗಷ್ಟೇ ಆಡಳಿತಾರೂಢ ಪಕ್ಷದ ಮುಖಂಡರೊಬ್ಬರು ಕಾಂಗ್ರೆಸ್‌ ಶಾಸಕರಿಗೆ ಮಾಡಲು ಕೆಲಸವಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ, ಕೇಂದ್ರ ಮತ್ತು ರಾಜ್ಯ ಸಚಿವರು ಹೊರತುಪಡಿಸಿ, ಅಧಿಕಾರದಲ್ಲಿರುವ ಪಕ್ಷದ ಸಂಸದರಿಗೆ, ಶಾಸಕರಿಗೆ ಕೆಲಸವಿಲ್ಲವೇ? ಎಲ್ಲರೂ ಖಾಲಿ ಕುಳಿತಿದ್ದಾರೆಯೇ ಎಂಬುದನ್ನು ಬಿಜೆಪಿ ನಾಯಕರೇ ಸ್ಪಷ್ಟಪಡಿಸಬೇಕು’ ಎಂದರು.

‘ಕೊಲೆ, ಸುಲಿಗೆ, ಭ್ರಷ್ಟಾಚಾರ, ಅತ್ಯಾಚಾರ, ಕೋಮುಗಲಭೆ ಹೀಗೆ ದುಷ್ಕೃತ್ಯಗಳು ಮುಂದುವರಿಯುತ್ತಿವೆ. ಸಂವಿಧಾನ ಮತ್ತು ಬಸವಾದಿ ಶರಣರ ಪರಂಪರೆ ವಿರುದ್ಧವಾಗಿ ಪ್ರಸ್ತುತ ಮಾನವ ಸಂಸ್ಕೃತಿ ನಡೆದುಕೊಳ್ಳುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಅಭ್ಯರ್ಥಿ ರಮೇಶ್‌ಬಾಬು ಒಂದೂವರೆ ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಅವರಲ್ಲಿ ಕರ್ತವ್ಯ ಪ್ರಜ್ಞೆಯಿದೆ. ಈ ಹಿಂದೆ ಆಯ್ದೆಯಾಗಿದ್ದ ಜೆಡಿಎಸ್‌ ಅಭ್ಯರ್ಥಿ ಒಮ್ಮೆಯೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಆದ್ದರಿಂದ ವಿದ್ಯಾವಂತ ಮತದಾರರು ಯೋಚಿಸಿ, ಕಾಂಗ್ರೆಸ್‌ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಮುಖಂಡರಾದ ಡಿ.ಎನ್. ಮೈಲಾರಪ್ಪ, ಮುದಸಿರ್‌ನವಾಜ್, ಅಬ್ದುಲ್ಲಾ, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT