ಬುಧವಾರ, ಮಾರ್ಚ್ 29, 2023
32 °C
ಹೊಸದುರ್ಗ ತಾಲ್ಲೂಕಿನ ಹೊಸಕುಂದೂರು ಗ್ರಾಮದ ರೈತನ ಸಾಧನೆ

ದಾಳಿಂಬೆ ಬೆಳೆದು ಗೆಲುವಿನ ನಗೆ ಬೀರಿದ ರಾಜಪ್ಪ

ಎಸ್‌.ಸುರೇಶ್‌ ನೀರಗುಂದ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಕೋವಿಡ್‌ ಸಂಕಷ್ಟದ ನಡುವೆಯೂ ಉತ್ಕೃಷ್ಟವಾದ ದಾಳಿಂಬೆ ಹಣ್ಣು ಬೆಳೆದಿರುವ ತಾಲ್ಲೂಕಿನ ಕಸಬಾ ಹೋಬಳಿಯ ಹೊಸಕುಂದೂರು ಗ್ರಾಮದ ರೈತ ಎಚ್‌.ಕೆ. ರಾಜಪ್ಪ ಅವರು ಗೆಲುವಿನ ನಗೆ ಬೀರಿದ್ದಾರೆ.

2013ರಲ್ಲಿ 3 ಎಕರೆ ಜಮೀನಿಗೆ 2 ಕೊಳವೆಬಾವಿ ಕೊರೆಯಿಸಿ, 700 ದಾಳಿಂಬೆ ಸಸಿಗಳನ್ನು ನಾಟಿ ಮಾಡಿದ್ದರು. ನಾಟಿ ಮಾಡಿದ ಒಂದೂವರೆ ವರ್ಷದ
ನಂತರದಿಂದ ವರ್ಷಕ್ಕೊಮ್ಮೆ ಒಂದು ಬೆಳೆಯಂತೆ 3 ಬೆಳೆ ಹಣ್ಣು ಬೆಳೆದರು. ಪ್ರತಿ ಬೆಳೆಯಲ್ಲಿ ₹ 5 ಲಕ್ಷಕ್ಕೂ ಅಧಿಕ ಆದಾಯ ಕೈಸೇರಿತ್ತು. 4ನೇ ಬೆಳೆ ಹಣ್ಣಿಗೆ ಬಿಟ್ಟಾಗ ದಾಳಿಂಬೆ ಗಿಡಗಳು ಸಂಪೂರ್ಣ ದುಂಡಾಣು ಅಂಗಮಾರಿ ರೋಗಕ್ಕೆ ತುತ್ತಾದವು. ಆಗ 6 ತಿಂಗಳ ಕಾಲ ಎಷ್ಟು ಔಷಧ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರಲಿಲ್ಲ.

‘ಈ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ದುಂಡಾಣು ಅಂಗಮಾರಿ ರೋಗ ಉಲ್ಬಣಿಸಿದ್ದರಿಂದ ಬಹುತೇಕ ಬೆಳೆಗಾರರು ಈ ದಾಳಿಂಬೆ ಸಹವಾಸವೇ ಬೇಡಪ್ಪಾ ಎಂದು ಕಣ್ಣೀರಿಡುತ್ತ ಬೆಳೆ ನಾಶ ಮಾಡಿದ್ದರು. ಆದರೂ ನಾವು ಧೃತಿಗೆಡಲಿಲ್ಲ. ಬೆಳೆ ಬೆಳೆಯಲಿಕ್ಕೆ ಕೊಳವೆಬಾವಿ ಕೊರೆಯಿಸಿದ್ದು, ವಿದ್ಯುತ್‌ ತರಲು, ಪೈಪ್‌ಲೈನ್‌, ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲು ₹ 7 ಲಕ್ಷ ಖರ್ಚು ಮಾಡಿದ್ದೆವು. ಕಷ್ಟಪಟ್ಟು ಬೆಳೆಸಿರುವ ದಾಳಿಂಬೆ ಗಿಡ ನಾಶ ಪಡಿಸುವುದು ಬೇಡ. ಗಿಡ ತೆಗೆದರೆ ಮತ್ತೆ ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಇನ್ನೆರಡು ವರ್ಷ ಕಾದು ನೋಡೋಣ ಎಂದು ದಾಳಿಂಬೆ ಗಿಡಗಳನ್ನು ಉಳಿಸಿಕೊಂಡಿದ್ದೆವು. ದಾಳಿಂಬೆ ಗಿಡಗಳು ರೋಗಕ್ಕೆ ತುತ್ತಾಗಿದ್ದರಿಂದ ಒಂದೂವರೆ ವರ್ಷ ಕಾಲ ಹಣ್ಣಿಗೆ ಬಿಡಲಿಲ್ಲ. ಗಿಡಗಳಿಗೆ ನೀರು ಹಾಯಿಸಲಿಲ್ಲ. ಸಂಪೂರ್ಣ ಡ್ರೈಗೆ ಬಿಟ್ಟಿದ್ದೆವು. ರೋಗ ನಿಯಂತ್ರಣಕ್ಕೆ ಬರಲು ತಿಂಗಳಿಗೊಮ್ಮೆ ಔಷಧ ಸಿಂಪಡಿಸುತ್ತಿದ್ದೆವು. ಗಿಡಗಳು ರೋಗದಿಂದ ಒಂದಿಷ್ಟು ಮುಕ್ತವಾದ ಲಕ್ಷಣ ಕಾಣಿಸಿದ್ದರಿಂದ ಕಳೆದ ವರ್ಷ 12 ಟ್ರ್ಯಾಕ್ಟರ್‌ ಲೋಡ್‌ ದನ, ಕುರಿ ಹಾಗೂ ಕೋಳಿ ಗೊಬ್ಬರವನ್ನು ಜಮೀನಿಗೆ ಏರಿಸಿದ್ದೆವು. ಈ ಮೂರು ಗೊಬ್ಬರವನ್ನು ಮಿಶ್ರಣ ಮಾಡಿ ಪ್ರತಿ ದಾಳಿಂಬೆ ಗಿಡಕ್ಕೆ 3 ಬುಟ್ಟಿ ಹಾಕಿಸಿದ್ದೆವು. ಆ ಗೊಬ್ಬರದ ಮೇಲೆ ಮತ್ತೆ ಹೊಸಮಣ್ಣು ಹಾಕಿಸಿ ಗಿಡಗಳಿಗೆ ಇಥ್ರೇಲ್‌ ಮಾಡಿ ಹಣ್ಣಿಗೆ ಬಿಟ್ಟಿದ್ದೆವು. ಆಗ 15 ಟನ್‌ ದಾಳಿಂಬೆ ಹಣ್ಣು ಇಳುವರಿ ಬಂದಿತ್ತು. ಮಾರುಕಟ್ಟೆಯಲ್ಲಿ ಧಾರಣೆ ಉತ್ತಮವಾಗಿದ್ದರಿಂದ ₹ 10 ಲಕ್ಷ ಆದಾಯ ಸಿಕ್ಕಿತ್ತು’ ಎಂದು ಅವರು
ವಿವರಿಸಿದರು.

‘ಹಣ್ಣು ಕಟಾವು ಮಾಡಿದ ನಂತರ 4 ತಿಂಗಳು ಗಿಡಗಳಿಗೆ ವಿರಾಮ ಕೊಟ್ಟು. ಮತ್ತೆ ಕಳೆದ ಜನವರಿಯಲ್ಲಿ ಇಥ್ರೇಲ್‌ ಮಾಡಿದ್ದೆವು. ಹೂವು ಚೆನ್ನಾಗಿ ಬಂದಿತ್ತು. ಆದರೆ, ಫೆಬ್ರುವರಿಯಲ್ಲಿ ಅಕಾಲಿಕ ಮಳೆ ಬಂದಿದ್ದರಿಂದ ಸ್ವಲ್ಪ ಹೂವು ಉದುರಿತ್ತು. ಉಳಿದ ಹೂವಿಗೆ ಕಾಲಕಾಲಕ್ಕೆ ಔಷಧ ಸಿಂಪಡಿಸಿ ಹನಿನೀರಾವರಿ ಮೂಲಕ ನೀರು ಹಾಯಿಸಿದೆವು. ಕಳೆ ಹೆಚ್ಚು ಬಿಟ್ಟುಕೊಳ್ಳದೇ ಜಮೀನು ಸ್ವಚ್ಛವಾಗಿ ಇಟ್ಟುಕೊಂಡೆವು. ಈಗ ಹಣ್ಣು ಕಟಾವು ಹಂತಕ್ಕೆ ಬಂದಿದೆ. ರೋಗ ಸಂಪೂರ್ಣ ಮಾಯವಾಗಿದೆ. ಹಣ್ಣಿನ ಮೇಲೆ ಒಂದು ಚುಕ್ಕಿ ಇಲ್ಲ. ಬಣ್ಣ ಚೆನ್ನಾಗಿದ್ದು ಹಣ್ಣುಗಳು ಹೊಳೆಯುತ್ತಿವೆ. ಒಂದೊಂದು ಹಣ್ಣು 300ರಿಂದ 450 ಗ್ರಾಂ ಇದೆ. ಸುಮಾರು 10 ಟನ್‌ ಹಣ್ಣು ಇಳುವರಿ ಬರಬಹುದು’ ಎಂದು ಅವರು
ಹೇಳಿದರು.

ಈ ಬಾರಿ ಹಣ್ಣಿಗೆ ಬಿಟ್ಟಾಗಿನಿಂದ ಸುಮಾರು ₹ 1.50 ಲಕ್ಷ ಖರ್ಚಾಗಿದೆ. ಈಗ ಲಾಕ್‌ಡೌನ್‌ ಸಡಿಲಿಕೆಯಾದ ನಂತರದಲ್ಲಿ ಬೆಂಗಳೂರು ಸೇರಿ ಇನ್ನಿತರ ದೊಡ್ಡ ಮಾರುಕಟ್ಟೆಗಳು ತೆರೆದಿವೆ. ಇದರಿಂದಾಗಿ ಗುಣಮಟ್ಟದ ಪ್ರತಿ ಕೆ.ಜಿ ದಾಳಿಂಬೆ ಹಣ್ಣಿನ ದರ ಮತ್ತೆ ₹ 110ರಿಂದ 140ರವರೆಗೂ ಏರಿಕೆಯಾಗಿದೆ. ನಮಗೆ ಈ ಸಲವೂ ₹ 8 ಲಕ್ಷಕ್ಕೂ ಹೆಚ್ಚು ಆದಾಯ ಸಿಗುವ ನಿರೀಕ್ಷೆ ಇದೆ. ಬೇರೆ ಯಾವುದೇ ಬೆಳೆಯಲ್ಲಿ ಇಷ್ಟೊಂದು ಆದಾಯ ನೋಡಲು ನಮಗೆ ಆಗುತ್ತಿರಲಿಲ್ಲ. ಇದರಿಂದಾಗಿ ಈ ಬೆಳೆ ಬೆಳೆಯುತ್ತಿರುವುದಕ್ಕೆ ಮನೆ ಮಂದಿಯೆಲ್ಲಾ ಖುಷಿಯಾಗಿದ್ದಾರೆ’ ಎಂದು ರಾಜಪ್ಪ ಅವರ ಪುತ್ರ ಹರೀಶ್‌  ‘ಪ್ರಜಾವಾಣಿ’ಗೆ ವಿವರಿಸಿದರು.

ಅಂತರ ಬೆಳೆಯಾಗಿ ಅಡಿಕೆ ಸಸಿ

ಹಿಂದೆ ದಾಳಿಂಬೆ ಗಿಡ ರೋಗಕ್ಕೆ ತುತ್ತಾಗಿದ್ದರಿಂದ ಅಡಿಕೆಯನ್ನಾದರೂ ಬೆಳೆಯೋಣ ಎಂದು 3 ಎಕರೆ ಜಮೀನಿಗೂ ದಾಳಿಂಬೆ ಗಿಡಗಳ ಮಧ್ಯೆಕ್ಕೆ ಅಂತರ ಬೆಳೆಯಾಗಿ 2,000 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದೆವು. ದಾಳಿಂಬೆ ಗಿಡದ ನೆರಳು ಬೀಳುತ್ತಿದ್ದು ಅಡಿಕೆ ಸಸಿಗಳು ಉತ್ಕೃಷ್ಟವಾಗಿ ಬೆಳೆಯುತ್ತಿವೆ. ಮನೆಯಲ್ಲಿ ನಾಲ್ಕೈದು ಮಂದಿ ಕೃಷಿ ಕಾಯಕ ಮಾಡುತ್ತಿರುವುದರಿಂದ ಅಡಿಕೆ ಹಾಗೂ ದಾಳಿಂಬೆ ಬೆಳೆಯ ನಿರ್ವಹಣೆ ಚೆನ್ನಾಗಿ ಮಾಡಿದೆವು. ಈ ಎರಡು ಬೆಳೆಯಲ್ಲಿ ರೋಗವಿಲ್ಲ. ರೈತರು ಮಣ್ಣಿನ ಗುಣಕ್ಕೆ ಅನುಗುಣವಾಗಿ ನೀರು, ಗೊಬ್ಬರ ಔಷಧೋಪಚಾರ ಮಾಡಬೇಕು. ಬೆಳೆಯ ನಡುವೆ ಕಳೆ ಬಿಟ್ಟುಕೊಳ್ಳಬಾರದು. ಈ ಕ್ರಮ ಅನುಸರಿಸಿ ನಿಷ್ಟೆಯಿಂದ ಕೃಷಿ ಕಾಯಕ ಮಾಡಿದಲ್ಲಿ ಭೂತಾಯಿ ನಂಬಿದವರನ್ನು ಕೈಬಿಡುವುದಿಲ್ಲ ಎನ್ನುತ್ತಾರೆ ದಾಳಿಂಬೆ ಬೆಳೆಗಾರ ಎಚ್‌.ಕೆ. ರಾಜಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.