ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಎಲ್ಲೆಡೆ ಮೊಳಗಿದ ರಾಮನಾಮ ಜಪ

ಶ್ರೀರಾಮ ದೇಗುಲಗಳಲ್ಲಿ ಪೂಜೆ, ಕರಸೇವಕರಿಗೆ ಸನ್ಮಾನ
Last Updated 5 ಆಗಸ್ಟ್ 2020, 13:46 IST
ಅಕ್ಷರ ಗಾತ್ರ

ಚಿತ್ರದುರ್ಗ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುತ್ತಿದ್ದಂತೆ ಕೋಟೆನಾಡಿನ ಶ್ರೀರಾಮ ದೇಗುಗಳಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ರಾಮಮಂದಿರಕ್ಕೆ ವಿಘ್ನಗಳು ಬಾರದಂತೆ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಐತಿಹಾಸಿಕ ಕ್ಷಣಕ್ಕೆ ಕಾತರರಾಗಿದ್ದ ಸಂಘಪರಿವಾರದ ಕಾರ್ಯಕರ್ತರು ಸಿಹಿ ವಿತರಿಸಿ ಸಂಭ್ರಮ ಹಂಚಿಕೊಂಡರು. ರಾಮಮಂದಿರ ನಿರ್ಮಾಣಕ್ಕೆ ನಡೆದ ಹೋರಾಟವನ್ನು ಮೆಲುಕು ಹಾಕಿದರು. ಕರಸೇವಕರಾಗಿ ಕೆಲಸ ಮಾಡಿದವರನ್ನು ಸನ್ಮಾನಿಸಿ ಅನುಭವ ಹಂಚಿಕೊಂಡರು. ನಿಷೇಧಾಜ್ಞೆಯ ನಡುವೆಯೂ ಹಲವೆಡೆ ಕಾರ್ಯಕ್ರಮಗಳು ನಡೆದವು.

ಬಜರಂಗದಳ, ವಿಶ್ವಹಿಂದೂ ಪರಿಷತ್‌, ಬಿಜೆಪಿ ಕಾರ್ಯಕರ್ತರ ಮನೆಯ ಅಂಗಳದಲ್ಲಿ ಬುಧವಾರ ನಸುಕಿನಲ್ಲಿ ರಂಗೋಲಿ ಕಂಗೊಳಿಸುತ್ತಿತ್ತು. ತಳಿರು ತೋರಣ ಕಟ್ಟಿ, ಭಗವಾಧ್ವಜ ಹಾರಿಸಲಾಗಿತ್ತು. ಹಲವು ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಾಮನಾಮ ಜಪ, ಭಜನೆಗಳು ಅಲ್ಲಲ್ಲಿ ಜರುಗಿದವು. ಭೂಮಿ ಪೂಜೆಯ ನೇರ ಪ್ರಸಾರವನ್ನು ಕಣ್ತುಂಬಿಕೊಂಡರು.

ಚಿತ್ರದುರ್ಗದ ಭೋವಿ ವಿದ್ಯಾರ್ಥಿನಿಲಯದ ಆವರಣದಲ್ಲಿರುವ ಶ್ರೀರಾಮ ಮಂದಿರದಲ್ಲಿ ಗಣಹೋಮ ಹಾಗೂ ಶ್ರೀರಾಮ ತಾರಕ ಪಠಣ ನಡೆಯಿತು. ಬೆಳಿಗ್ಗೆಯಿಂದ ಆರಂಭವಾದ ಪೂಜಾ ಕೈಂಕರ್ಯಗಳು ಮಧ್ಯಾಹ್ನದವರೆಗೆ ನಡೆದವು. ಬಳಿಕ ಸಾರ್ವಜನಿಕರಿಗೆ ಪ್ರಸಾದ ವಿತರಿಸಿ ಸಂತಸ ಹಂಚಿಕೊಂಡರು. ಭೋಮಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಹಾಗೂ ಬಂಜಾರ ಗುರುಪೀಠದ ಸೇವಾಲಾಲ್‌ ಸ್ವಾಮೀಜಿ ಇದಕ್ಕೆ ಸಾಕ್ಷಿಯಾದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ, ‘ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೋಟ್ಯಂತರ ಜನರ ಕನಸು ಈಡೇರಿದೆ. ಇಡಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಸಂದರ್ಭ ಸೃಷ್ಟಿಯಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ಹಿಂದೂ ಸಮುದಾಯ ಸಂಭ್ರಮದಲ್ಲಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಕೋವಿಡ್‌ ಸಂಕಷ್ಟ ಎದುರಾಗದಿದ್ದರೆ ಕೋಟ್ಯಂತರ ಜನರು ಸಾಕ್ಷಿಯಾಗುತ್ತಿದ್ದರು. ಮಂದಿರದ ಲೋಕಾರ್ಪಣೆ ಸಂದರ್ಭದಲ್ಲಿ ಅತಿ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. 1992ರಲ್ಲಿ ನಡೆದ ಹೋರಾಟ ಫಲವಾಗಿ ಮಂದಿರ ನಿರ್ಮಾಣದ ಕನಸು ಸಾಕಾರಗೊಂಡಿದೆ. ಅಂದು ಸಾಮಾನ್ಯ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿ, ಭೂಮಿ ಪೂಜೆ ನೆರವೇರಿಸಿದ್ದು ಸಂತಸವನ್ನು ಹೆಚ್ಚಿಸಿದೆ’ ಎಂದು ಹೇಳಿದರು.

ಕರಸೇವೆಯಲ್ಲಿ ಪಾಲ್ಗೊಂಡಿದ್ದ ಕೆ.ಶಿವಣ್ಣಾಚಾರ್, ಆಟೊ ತಿಪ್ಪೇಸ್ವಾಮಿ ಸೇರಿ ಅನೇಕರನ್ನು ಸನ್ಮಾನಿಸಲಾಯಿತು. ಬಜರಂಗದಳ ವಿಭಾಗ ಸಂಯೋಜಕ ಪ್ರಭಂಜನ್ ಮಾತನಾಡಿದರು. ವಿಎಚ್‍ಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‍ಬಾಬು, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ಮಾಜಿ ಅಧ್ಯಕ್ಷ ನರೇಂದ್ರನಾಥ್, ಸಂಘ ಪರಿವಾರದ ಮುಖಂಡರಾದ ಟಿ. ಬದರಿನಾಥ್, ರಾಜಕುಮಾರ್, ವಿಠ್ಠಲ್, ಭಾನುಮೂರ್ತಿ, ರುದ್ರೇಶ್, ಅಶೋಕ್, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT