ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ರಿಕಾ ವಿತರಕರ ನಿಧಿಗೆ ₹ 10 ಕೋಟಿ ಮೀಸಲಿಗೆ ಮನವಿ: ಸಚಿವ ಡಿ.ಸುಧಾಕರ್‌

Published : 8 ಸೆಪ್ಟೆಂಬರ್ 2024, 15:32 IST
Last Updated : 8 ಸೆಪ್ಟೆಂಬರ್ 2024, 15:32 IST
ಫಾಲೋ ಮಾಡಿ
Comments

ಚಿತ್ರದುರ್ಗ: ‘ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ ವಾರ್ಷಿಕ ₹ 10 ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗುವುದು’ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್‌ ಹೇಳಿದರು.

ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಕಾರ್ಯನಿರತ ಪತ್ರಿಕಾ ವಿತರಕರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ವಿತರಕರ 4ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಪತ್ರಿಕಾ ವಿತರಕರ ನೆರವಿಗೆ ನಿಲ್ಲುತ್ತದೆ. ಈಗಾಗಲೇ ಕಾರ್ಮಿಕ ಇಲಾಖೆಯ ‘ಇ–ಶ್ರಮ್‌’ ಯೋಜನೆಯಡಿ ಪತ್ರಿಕಾ ವಿತರಕರನ್ನು ಸೇರಿಸಲಾಗಿದೆ. ಆ ಮೂಲಕ ಕರ್ತವ್ಯ ನಿರ್ವಹಣೆ ವೇಳೆ ಅವಘಡ ಸಂಭವಿಸಿದರೆ ಅವರಿಗೆ ಪರಿಹಾರ ದೊರೆಯಲಿದೆ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಪತ್ರಿಕೆಗಳ 40,000ಕ್ಕೂ ಅಧಿಕ ವಿತರಕರಿದ್ದು, ಅಸಂಘಟಿತರಾಗಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 120 ಸ್ಥಳಗಳಲ್ಲಿ 6,500 ಜನ ವಿತರಕರಿದ್ದಾರೆ. ಎಪಿಜೆ ಅಬ್ದುಲ್‌ ಕಲಾಂ ಅವರೂ ಪತ್ರಿಕೆ ಹಂಚಿ ಶಾಲೆಗೆ ತೆರಳುತ್ತಿದ್ದರು. ಪತ್ರಿಕೆ ವಿತರಣೆ ಮಾಡಿ ಶಾಲೆ–  ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಒಂದು ದಿನವೂ ರಜೆ ಪಡೆಯದೇ ಮನೆಮನೆಗೆ ಪತ್ರಿಕೆ ತಲುಪಿಸುವ ವಿತರಕರ ನೆರವಿಗೆ ನಿಲ್ಲಬೇಕಾದುದು ಎಲ್ಲರ ಕರ್ತವ್ಯ’ ಎಂದರು.

‘ಜನತಂತ್ರದ ನಿಜವಾದ ರೂಪವು ಮುದ್ರಣ ಮಾಧ್ಯಮದಲ್ಲಿದೆ. ನಿತ್ಯ ಮುಂಜಾನೆ ಹಾಲು ಹಾಗೂ ಪತ್ರಿಕೆ ಹಾಕುವ ವಿತರಕರು ನಮ್ಮ ಬಂಧುಗಳಾಗಿದ್ದಾರೆ. ಅವರನ್ನು ಗುರುತಿಸಿ, ಉಳಿಸಿ, ಬೆಳೆಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಪತ್ರಿಕೆಯ ಸಂಪಾದಕರಿಗೆ ಕೊಡುವ ಗೌರವವನ್ನು ಪತ್ರಿಕಾ ವಿತರಕರಿಗೂ ನೀಡಬೇಕು’ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.

‘ಪತ್ರಿಕಾ ವಿತರಕರು ಸಂಕಷ್ಟದಲ್ಲಿದ್ದಾರೆ. ಕಾರ್ಮಿಕ ಇಲಾಖೆ ನೀಡುತ್ತಿರುವ ಸೌಲಭ್ಯಗಳನ್ನು ವಿತರಕರು ಸದುಪಯೋಗ ಮಾಡಿಕೊಳ್ಳಬೇಕು. ಶೇ 50ರ ಸಹಾಯಧನದಲ್ಲಿ ಅವರಿಗೆ ಬೈಕ್‌ ಸಿಗಬೇಕು. ಆರೋಗ್ಯ ಕ್ಷೇಮ ನಿಧಿ, ವಿತರಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯಬೇಕು’ ಎಂದು  ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

‘ಪತ್ರಿಕಾ ವಿತರಕರಿಗೆ ನಿವೇಶನ, ಮನೆ ಒದಗಿಸಲು ಸರ್ಕಾರ ಯೋಜನೆ ರೂಪಿಸಬೇಕು. ಮಾಧ್ಯಮ ಅಕಾಡೆಮಿ, ಪ್ರೆಸ್‌ ಕ್ಲಬ್ ವಾರ್ಷಿಕ ಪ್ರಶಸ್ತಿಯನ್ನು ವಿತರಕರಿಗೂ ನೀಡಬೇಕು. ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾನ ನೀಡಬೇಕು’ ಎಂದು ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಕೋರಿದರು. ಅಂಗವಿಕಲ ವಿತರಕರಿಗೆ ಸನ್ಮಾನ, ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT