ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕಾಲೇಜಿಗೆ ₹ 25 ಕೋಟಿ: ಸಚಿವ ಬಿ.ಶ್ರೀರಾಮುಲು

ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿಯ ಸಭೆಯಲ್ಲಿ ಸಚಿವ ಬಿ.ಶ್ರೀರಾಮುಲು ಹೇಳಿಕೆ
Last Updated 29 ನವೆಂಬರ್ 2020, 2:29 IST
ಅಕ್ಷರ ಗಾತ್ರ

ಚಿತ್ರದುರ್ಗ: ನೂತನವಾಗಿ ನಿರ್ಮಾಣವಾಗಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯಲ್ಲಿ ₹ 25 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೈದ್ಯಕೀಯ ಕಾಲೇಜಿಗೆ ಇನ್ನೂ ಅಗತ್ಯವಿರುವ ಅನುದಾನವನ್ನು ನೀಡಲು ಸಭೆ ತೀರ್ಮಾನಿಸಿತು. ಇದನ್ನು ಎಲ್ಲ ಸದಸ್ಯರು ಒಮ್ಮತದಿಂದ ಅನುಮೋದಿಸಿದರು.

‘ಸಾಂಕ್ರಾಮಿಕ ರೋಗ ತಡೆಗಟ್ಟಲು ಡಿಎಂಎಫ್‌ ನಿಧಿಯಲ್ಲಿ ಶೇ 30ರಷ್ಟು ಅನುದಾನವನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ನಿಧಿಯಲ್ಲಿ ಕೋವಿಡ್‌ಗೆ ₹ 36 ಕೋಟಿ ಮೀಸಲಿರಿಸಲಾಗಿದೆ. ಇದರಲ್ಲಿ ₹ 8.97 ಕೋಟಿಯನ್ನು ವೆಚ್ಚ ಮಾಡಲಾಗಿದೆ. ಕೋವಿಡ್‌ಗೆ ಅಗತ್ಯವಿರುವ ವೈದ್ಯಕೀಯ ಪರಿಕರ, ಲ್ಯಾಬ್‌ ಸೇರಿದಂತೆ ಇತರ ಉದ್ದೇಶಕ್ಕೆ ಖರ್ಚು ಮಾಡಬಹುದಾಗಿದೆ’ ಎಂದರು.

‘2017-18ರಲ್ಲಿ ₹21 ಕೋಟಿ, 2019-20ರಲ್ಲಿ ₹65 ಕೋಟಿ, 2020-2021ರಲ್ಲಿ ₹53 ಕೋಟಿ ಸೇರಿ ₹139 ಕೋಟಿ ಸಂಗ್ರಹವಾಗಿದೆ. ಈ ನಿಧಿಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದಿಸಲಾಗಿದೆ. ಇದರಲ್ಲಿ ₹ 85 ಕೋಟಿಯ 131 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ಕೇವಲ ಐದು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

2017-18ರಿಂದ 2020-21ನೇ ಸಾಲಿನವರೆಗೆ 167 ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸ ಲಾಗಿದೆ. ಇದರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದರೂ ಇನ್ನು
ಕೆಲ ಕಾಮಗಾರಿಗಳು ಆರಂಭವಾಗಿಲ್ಲ. ಇವು ಗಳನ್ನು ರದ್ದುಪಡಿಸಿ ಇತರೆ ಕಾಮಗಾರಿ ಕೈಗೊಳ್ಳಲು ಸಭೆ ನಿರ್ಣಯಿಸಿತು.

ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ಗೂಳಿಹಟ್ಟಿ ಡಿ.ಶೇಖರ್, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಲಿಂಗರಾಜು ಇದ್ದರು.

***

ಆಡಳಿತಾತ್ಮಕ ಅನುಮೋದನೆ

ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ 22 ಕಾಮಗಾರಿಗಳಿಗೆ ₹ 23 ಕೋಟಿ, ಪರಿಸರ ಸಂರಕ್ಷಣೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟುವ ಐದು ಕಾಮಗಾರಿಗಳಿಗೆ ₹ 7 ಕೋಟಿ, ಆರೋಗ್ಯ ಇಲಾಖೆಗೆ ಸಂಬಂಧಿಸಿದ 22 ಕಾಮಗಾರಿಗೆ ₹ 6 ಕೋಟಿ, ಶಿಕ್ಷಣಕ್ಕೆ ಸಂಬಂಧಿಸಿದ 55 ಕಾಮಗಾರಿಗೆ ₹ 29 ಕೋಟಿ ಮೀಸಲಿಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 10 ಕಾಮಗಾರಿಗೆ ₹ 10 ಕೋಟಿ, ಹಿರಿಯ ನಾಗರಿಕ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆಯ ಆರು ಕಾಮಗಾರಿಗೆ ₹ 4 ಕೋಟಿ, ಕೌಶಲ್ಯಾಭಿವೃದ್ಧಿಯ 4 ಕಾಮಗಾರಿಗೆ ₹ 1 ಕೋಟಿ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ 7 ಕಾಮಗಾರಿಗೆ ₹ 1 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT