ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಗಣೇಶೋತ್ಸವ ಷರತ್ತಿಗೆ ಸಂಘ ಪರಿವಾರ ಆಕ್ಷೇಪ

ಧಾರ್ಮಿಕ ವಿಧಿವಿಧಾನದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದಂತೆ ಆಗ್ರಹ
Last Updated 7 ಸೆಪ್ಟೆಂಬರ್ 2021, 3:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಗಣೇಶೋತ್ಸವಕ್ಕೆ ಹಲವು ಷರತ್ತುಗಳನ್ನು ವಿಧಿಸಿದ ರಾಜ್ಯ ಸರ್ಕಾರದ ವಿರುದ್ಧ ಸಂಘ ಪರಿವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಧಾರ್ಮಿಕ ವಿಧಿವಿಧಾನಗಳಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ನೀಡಿದ್ದು, 21 ದಿನಗಳ ಉತ್ಸವ ನಡೆಸುವುದಾಗಿ ಘೋಷಣೆ ಮಾಡಿದೆ.

‘ಕೋವಿಡ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಿದ್ದನ್ನು ಸ್ವಾಗತಿಸುತ್ತೇವೆ. ಮಾಸ್ಕ್‌ ಧರಿಸುವ, ಅಂತರ ಕಾಯ್ದುಕೊಳ್ಳುವ ಹಾಗೂ ಸ್ಯಾನಿಟೈಸರ್‌ ಬಳಕೆಗೆ ಒತ್ತು ನೀಡುತ್ತೇವೆ. ಇವನ್ನು ಹೊರತುಪಡಿಸಿದ ಷರತ್ತುಗಳು ಮೂರ್ಖತನದ ಪರಮಾವಧಿಯಂತೆ ಕಾಣುತ್ತಿವೆ’ ಎಂದು ಬಜರಂಗದಳ ಶಿವಮೊಗ್ಗ ವಿಭಾಗ ಸಂಯೋಜಕ ಪ್ರಭಂಜನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಗಣೇಶ ಮೂರ್ತಿ ನಾಲ್ಕು ಅಡಿಗಳಿಗಿಂತ ಕಡಿಮೆ ಇದ್ದರೆ ಕೋವಿಡ್‌ ಹರಡುವುದಿಲ್ಲವೆಂದು ಆಲೋಚನೆ ಮಾಡಿದಂತೆ ಕಾಣುತ್ತಿದೆ. ಐದು ದಿನಗಳಲ್ಲಿ ಉತ್ಸವ ಮುಗಿಸುವಂತೆ ಸೂಚನೆ ನೀಡಿದೆ. ಸರ್ಕಾರ ಹೇಳಿದಂತೆ ಉತ್ಸವ ನಡೆಸಲು ಸಾಧ್ಯವಿಲ್ಲ. ಧಾರ್ಮಿಕ ವಿಧಾನಗಳ ಮೂಲಕ 21 ದಿನಗಳವರೆಗೆ ಗಣೇಶೋತ್ಸವ ನಡೆಯಲಿದೆ. ಹಿಂದೂ ಮಹಾಗಣಪತಿ ಸೆ. 10ರಂದು ಪ್ರತಿಷ್ಠಾಪನೆ ಆಗಲಿದ್ದು, ಅ. 2ರಂದು ವಿಸರ್ಜಿಸುತ್ತೇವೆ. ಶೋಭಾಯಾತ್ರೆ ಇರುವುದಿಲ್ಲ’ ಎಂದು ಹೇಳಿದರು.

‘ಕೋವಿಡ್‌ ಬಗ್ಗೆ ನಮಗೂ ಅರಿವಿದೆ. ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವಾಗುವ ಕೆಲಸವನ್ನು ಕಾರ್ಯಕರ್ತರು ಮಾಡಿದ್ದಾರೆ. ಕೋವಿಡ್‌ನಿಂದ ಮೃತಪಟ್ಟ 183 ಜನರ ಅಂತ್ಯಕ್ರಿಯೆ ನೆರವೇರಿಸಿದ್ದೇವೆ. 250ಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದೇವೆ. ಸಮಾಜದ ಬಗ್ಗೆ ನಮಗೂ ಕಾಳಜಿ ಇದೆ. ಅಸಂಬದ್ಧ ಷರತ್ತುಗಳನ್ನು ಪಾಲಿಸಿ ಉತ್ಸವ ನಡೆಸಲು ಸಾಧ್ಯವಿಲ್ಲ’ ಎಂದರು.

‘ರಾಜಕೀಯ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಜನಾಶೀರ್ವಾದ ಯಾತ್ರೆ ನಡೆಸಲು ಅವಕಾಶ ಕಲ್ಪಿಸಿದೆ. ಮದುವೆ, ಪ್ರಾರ್ಥನೆ ನಡೆಸಲು ಯಾವ ನಿರ್ಬಂಧವೂ ಇಲ್ಲ. ಗಣೇಶೋತ್ಸವಕ್ಕೆ ಮಾತ್ರ ಷರತ್ತು ವಿಧಿಸಲಾಗುತ್ತಿದೆ. ಉತ್ಸವದಲ್ಲಿ ಸಾವಿರಾರು ಜನರ ಬದುಕಿದೆ. ಶಾಮಿಯಾನ, ಗಣೇಶಮೂರ್ತಿ ತಯಾರಕರ ಜೀವನ ಉತ್ಸವದ ಮೇಲೆ ಅವಲಂಬಿತವಾಗಿದೆ’ ಎಂದು ವಿವರಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ಸಂದೀಪ್, ನಗರ ಸಂಚಾಲಕ ರಂಗಸ್ವಾಮಿ, ರಾಜೇಶ್, ರುದ್ರೇಶ್, ಅಶೋಕ್
ಇದ್ದರು.

‘ಲೆಕ್ಕಪತ್ರದಲ್ಲಿ ಲೋಪ ಆಗಿಲ್ಲ’

ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಲ್ಲಿ ಪಾರದರ್ಶಕ ವ್ಯವಸ್ಥೆ ಇದೆ. ಪ್ರತಿ ವರ್ಷ ಲೆಕ್ಕಪತ್ರದ ಮಾಹಿತಿ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಲೋಪ ಉಂಟಾಗಿಲ್ಲ ಎಂದು ಪ್ರಭಂಜನ್ ತಿಳಿಸಿದರು.

‘ಪ್ರತಿ ವರ್ಷ ಸಮಿತಿ ಪುನರ್‌ ರಚನೆಯಾಗುತ್ತದೆ. ಕೆಲವರು ಸ್ವಯಂ ಇಚ್ಛೆಯಿಂದ ಹೊರಗೆ ಹೋಗಿರಬಹುದು. ಇದೊಂದು ಧಾರ್ಮಿಕ ಕಾರ್ಯ. ಏಕತಾ ಗಣಪತಿ ಪ್ರತಿಷ್ಠಾನೆಯನ್ನು ಸಮಿತಿ ಸ್ವಾಗತಿಸುತ್ತದೆ. ಹಿಂದುತ್ವದ ಹೆಸರಿನಲ್ಲಿ ಗಣೇಶೋತ್ಸವ ಇನ್ನೂ ಹೆಚ್ಚಾಗಬೇಕು ಎಂಬುದು ಸಂಘ ಪರಿವಾರದ ಆಶಯ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

.......

ಗಣೇಶ ಉತ್ಸವಕ್ಕೆ ಧಾರ್ಮಿಕ ಚೌಕಟ್ಟಿದೆ. ಇದರ ನೆಪದಲ್ಲಿ ರಾಜಕೀಯ ಮಾಡುವುದನ್ನು ಒಪ್ಪಲಾಗದು. ಯಾರಿಗೂ ತೊಂದರೆ ಆಗದಂತೆ ಎಚ್ಚರ ವಹಿಸಲಾಗುವುದು.

- ವಿಪುಲ್ ಜೈನ್‌, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ

....

ಗಣೇಶೋತ್ಸವ ಶಾಸ್ತ್ರೋಕ್ತವಾಗಿ ನಡೆಸಲು 21 ದಿನ ಬೇಕು. ಕಾನೂನು ಚೌಕಟ್ಟಿನಲ್ಲಿ ಉತ್ಸವ ನಡೆಸುತ್ತೇವೆ. ಪೂಜಾ ವಿಧಿವಿಧಾನ ನಡೆಸಲು ಅವಕಾಶ ನೀಡಬೇಕು.

-ಶರಣ್, ಉತ್ಸವ ಸಮಿತಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT