ಮಂಗಳವಾರ, ಮೇ 24, 2022
22 °C
ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ನಾಗಮೋಹನದಾಸ್‌ ಎಚ್ಚರಿಕೆ

ಅಸಹಿಷ್ಣುತೆ ಹೆಚ್ಚಿದರೆ ದೇಶಕ್ಕೆ ಅಪಾಯ: ಎಚ್‌.ಎಸ್‌.ನಾಗಮೋಹನದಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬಹುತ್ವದ ಭಾರತದಲ್ಲಿ ಹಿಜಾಬ್‌, ಮಾಂಸದ ವಿಚಾರಕ್ಕೆ ಸಂಬಂಧಿಸಿದಂತೆ ಅಸಹಿಷ್ಣುತೆ ಬೆಳೆಯುತ್ತಿದೆ. ಸಹಿಷ್ಣು ಮನೋಭಾವನೆ ಕಡಿಮೆಯಾದರೆ ದೇಶ ಇನ್ನಷ್ಟು ಅಪಾಯಕ್ಕೆ ಸಿಲುಕಲಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ನಾಗಮೋಹನದಾಸ್‌ ಎಚ್ಚರಿಕೆ ನೀಡಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ಎರಡು ದಿನ ಹಮ್ಮಿಕೊಂಡಿರುವ ‘ರಾಜ್ಯ ಬುಂಧುತ್ವ ಅಧಿವೇಶನ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಒಬ್ಬರ ಬದುಕಿನಲ್ಲಿ ಮತ್ತೊಬ್ಬರು ಪಾಲ್ಗೊಳ್ಳುವ ಬಹುತ್ವದ ಭಾರತ ನಮ್ಮದು. ಆದರೆ, ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ತೀರಾ ಅಪಾಯಕಾರಿಯಾಗಿವೆ. ಅತಿಯಾದ ಜಾಗತೀಕರಣ, ಕೋಮುವಾದ, ಸಾಂಸ್ಕೃತಿಕ ದಿವಾಳಿತನ ಹೆಚ್ಚಾಗುತ್ತಿದೆ. ಕೃಷಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ನಿರುದ್ಯೋಗ, ಭೂಮಿ ಮತ್ತು ವಸತಿ ರಹಿತರ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂವಿಧಾನಬದ್ಧವಾಗಿ ರಚನೆಯಾದ ಸರ್ಕಾರ ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಪ್ರಯತ್ನಿಸುತ್ತಿದೆ. ಪ್ರಜೆಗಳ ಕನಿಷ್ಠ ಅಗತ್ಯಗಳನ್ನು ಪೂರೈಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆ ಖಾಸಗೀಕರಣಗೊಳ್ಳುತ್ತಿವೆ. ದೇಶದ ಪ್ರತಿಯೊಬ್ಬ ಪ್ರಜೆಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳು ಖಾಸಗೀಯವರ ಹಿಡಿತಕ್ಕೆ ಸಿಲುಕುತ್ತಿವೆ. ಕಲ್ಯಾಣ ರಾಜ್ಯದ ಪರಿಕಲ್ಪನೆ ಮೂಲೆಗೆ ಸೇರಿದೆ. ಈ ಬಗ್ಗೆ ಜನರು ಧ್ವನಿಯತ್ತದೇ ಇರುವುದು ವಿಪರ್ಯಾಸ’ ಎಂದರು.

ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ‘ಸಂವಿಧಾನದ ಸ್ಥಾನಕ್ಕೆ ಮನುಸ್ಮೃತಿ ತರುವ ಹುನ್ನಾರಗಳು ನಡೆಯುತ್ತಿವೆ. ಮನುಸ್ಮೃತಿ ಸಂವಿಧಾನದ ಸ್ಥಾನ ಪಡೆದರೆ ಮಹಿಳೆಯರು ಹಾಗೂ ಶೂದ್ರರು ಹಕ್ಕು ಕಳೆದುಕೊಳ್ಳಲಿದ್ದಾರೆ. ಹಲವು ನಿರ್ಬಂಧಗಳನ್ನು ಹೇರಲಾಗುತ್ತದೆ’ ಎಂದರು.

‘ಸರ್ಕಾರ ಜವಾಬ್ದಾರಿ ಮರೆತು ವರ್ತನೆ ಮಾಡುತ್ತಿದೆ. ‘ಕಾಶ್ಮೀರಿ ಫೈಲ್ಸ್‌’ ಟಿಕೆಟ್‌ ಮಾರಾಟ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ. ಕಾಶ್ಮೀರದಲ್ಲಿ ಮಾತ್ರವಲ್ಲ ದೇಶದ ಉದ್ದಗಲಕ್ಕೂ ಎಲ್ಲ ಸಮುದಾಯದ ಜನರೂ ಪ್ರಾಣ ಕಳೆದುಕೊಂಡಿದ್ದಾರೆ. ಹಂಗರಳ್ಳಿ, ಕಂಬಾಲಪಲ್ಲಿ, ಬದನವಾಳು ಸೇರಿದಂತೆ ರಾಜ್ಯದ ಹಲವೆಡೆ ಇಂತಹ ನಿದರ್ಶನಗಳಿವೆ. ಇಂತಹ ದಲಿತ ಫೈಲ್ಸ್‌ಗಳ ಬಗ್ಗೆ ಏಕೆ ಈ ಕಾಳಜಿ ಇಲ್ಲ’ ಎಂದು ಪ್ರಶ್ನಿಸಿದರು.

‘ಹಂಸಲೇಖ ಅವರು ಶೋಷಿತ ಸಮುದಾಯಗಳ ಪರವಾಗಿ ಆಡಿದ ಮಾತುಗಳನ್ನು ಟ್ರೋಲ್‌ ಮಾಡಲಾಯಿತು. ಅವರ ಬಗೆಗೆ ಅಪಪ್ರಚಾರ ಮಾಡಿ ಕ್ಷಮೆ ಕೇಳುವ ಹಂತಕ್ಕೆ ಕೊಂಡೊಯ್ಯಲಾಯಿತು. ನಾವೆಲ್ಲರೂ ಮೌನವಾಗಿ ಅದನ್ನು ನೋಡುತ್ತಾ ಕುಳಿತಿದ್ದೆವು. ಪ್ರಸ್ತುತ ಸಂದರ್ಭದಲ್ಲಿ ಯುದ್ಧ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿದೆ. ಪ್ರತಿಯೊಬ್ಬರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ, ಅಂಬೇಡ್ಕರ್‌, ಪೆರೆಯಾರ್‌ ವಿಚಾರಗಳಿಗೆ ಧಕ್ಕೆಯುಂಟಾದಾಗ ಎಲ್ಲರೂ ಧ್ವನಿಯತ್ತಬೇಕು’ ಎಂದು ಮನವಿ ಮಾಡಿದರು.

‘ಸಾಂಸ್ಕೃತಿಕ ದಾಳಿ ಹೆಚ್ಚಳ’

ಹಿಂದುಳಿದ ವರ್ಗ, ದಲಿತ ಹಾಗೂ ಶೂದ್ರ ಸಮುದಾಯಗಳ ಅಸ್ಮಿತೆಯನ್ನು ನಾಶಪಡಿಸುವ ಸಾಂಸ್ಕೃತಿಕ ದಾಳಿಗಳು ಹೆಚ್ಚಾಗುತ್ತಿವೆ. ಬಹುಸಂಖ್ಯಾತ ಶೋಷಿತ ಸಮುದಾಯವನ್ನು ಸಾಂಸ್ಕೃತಿಕ ಗುಲಾಮರನ್ನಾಗಿ ಮಾಡಿಕೊಳ್ಳುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ಚಿಂತಕ ಸಿದ್ದನಗೌಡ ಪಾಟೀಲ್‌ ಕಳವಳ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ‘ಚಿಂತನಾ ಗಂಗ’ ಎಂಬ ಗ್ರಂಥದಿಂದ ವಿಚಾರಗಂಗೆ ಹರಿದಂತೆ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ. ತ್ರಿವರ್ಣ ಧ್ವಜ, ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದವರು ಏಕ ಸಂಸ್ಕೃತಿ ಹೇರಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಬಡತನ, ನಿರುದ್ಯೋಗ ಸಮಸ್ಯೆಗಳನ್ನು ನಿರ್ಮೂಲನೆ ಮಾಡುವ ಬದಲು ಪಾಕಿಸ್ತಾನ ತೋರಿಸಿ ಆಡಳಿತ ನಡೆಸುತ್ತಿವೆ’ ಎಂದು ಕಿಡಿಕಾರಿದರು.

‘ಮೇಲ್ಜಾತಿ ರಾಜಕಾರಣವೇ ಹಿಂದೂತ್ವ’

ಮೇಲ್ಜಾತಿ ರಾಜಕಾರಣದ ಭಾಗವಾಗಿ ಹಿಂದೂತ್ವ ಪ್ರಚಲಿತದಲ್ಲಿದೆ. ಧಾರ್ಮಿಕ ಮುಖವಾಡವನ್ನು ಹಾಕಿಕೊಂಡಿರುವ ಹಿಂದೂತ್ವ ರಾಜಕಾರಣ, ದಲಿತರು ಹಾಗೂ ಬಹುಸಂಖ್ಯಾತ ಸಮುದಾಯದ ವಿರುದ್ಧವಾಗಿದೆ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಅಭಿಪ್ರಾಯಪಟ್ಟರು.

‘ಸಕಾರಾತ್ಮಕ ರಾಜಕೀಯವನ್ನು ಧ್ವಂಸಗೊಳಿಸಿ ವೈದಿಕ ಸಂಸ್ಕತಿಯನ್ನು ಬೆಳೆಸಲಾಗುತ್ತಿದೆ. ದೇಶವನ್ನು ಮಾರಾಟಕ್ಕೆ ಇಡಲಾಗಿದ್ದು, ಸರ್ಕಾರವೇ ದಲ್ಲಾಳಿಯಂತೆ ವರ್ತನೆ ಮಾಡುತ್ತಿದೆ. ಪುರಾಣಗಳನ್ನು ಇತಿಹಾಸವನ್ನಾಗಿ ಬಿಂಬಿಸಲಾಗುತ್ತಿದೆ. ಮೊಘಲರು ಶತಮಾನಗಳ ಕಾಲ ದೇಶದಲ್ಲಿ ಆಳ್ವಿಕೆ ನಡೆಸಿದ್ದಾರೆ. ಅವರು ಮತಾಂತರ ಮಾಡಿದ್ದರೆ ಇಡೀ ಭಾರತ ಮುಸ್ಲಿಂ ದೇಶವಾಗಬೇಕಿತ್ತು’ ಎಂದರು.

‘ಮೀಸಲಾತಿ ವಿರುದ್ಧ ಹುನ್ನಾರ’

ಸಾಮಾಜಿಕ ನ್ಯಾಯದ ಕಲ್ಪನೆಯನ್ನೇ ವಿವಾದಕ್ಕೆ ತಿರುಗಿಸಿ, ಜನಸಾಮಾನ್ಯರೇ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುವಂತೆ ಮಾಡಲಾಗುತ್ತಿದೆ ಎಂದು ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು ಅಭಿಪ್ರಾಯಪಟ್ಟರು.

‘ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವಾಗ ಯಾರೂ ಬೀದಿಗಿಳಿಯಲಿಲ್ಲ. ಈ ತಿದ್ದುಪಡಿಯೇ ಸಂವಿಧಾನ ವಿರೋಧಿ. ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು. ಆದರೆ, ಇಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗಿದೆ. ಕರ್ನಾಟಕದಲ್ಲಿ ಶೇ 5ರಷ್ಟು ಜನರಿಗೆ ಶೇ 10 ಮೀಸಲಾತಿ ಸಿಕ್ಕಿದೆ. ಇದನ್ನು ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷಗಳೂ ವಿರೋಧಿಸಲಿಲ್ಲ’ ಎಂದರು.

ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌, ವಿಭಾಗೀಯ ಸಂಚಾಲಕ ಅನಂತನಾಯ್ಕ್‌, ಜಿಲ್ಲಾ ಸಂಚಾಲಕ ಎಚ್‌.ಅಂಜನಪ್ಪ ಇದ್ದರು.

ಅಡುಗೆ ಅನಿಲಕ್ಕೆ ಅತಿ ಹೆಚ್ಚು ದರ ಇರುವುದು ಭಾರತದಲ್ಲಿ ಮಾತ್ರ. ಪೆಟ್ರೋಲ್‌ ಮತ್ತು ಡೀಸೆಲ್‌ಗೆ ದುಬಾರಿ ಬೆಲೆ ನಿಗದಿ ಮಾಡಿರುವುದು ಇಲ್ಲಿಯೇ. ಪ್ರತಿ ವರ್ಷ ಇಂಧನದಿಂದ ₹ 4.5 ಲಕ್ಷ ಕೋಟಿ ಆದಾಯ ಕೇಂದ್ರಕ್ಕೆ ಸಿಗುತ್ತಿದೆ.

ಕೆ.ಸಿ.ರಘು, ಆರ್ಥಿಕ ತಜ್ಞ

ಬಹುತೇಕ ಹಿಂದುಳಿದ ವರ್ಗಗಳು ರಾಜಕೀಯವಾಗಿ ಮೂಲೆಗುಂಪಾಗಿವೆ. ಆರ್ಥಿಕ ಸಂಪನ್ಮೂಲ ನಮ್ಮ ಕೈಯಲ್ಲಿಲ್ಲ. ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಸಮಾಜ ಒಡೆದಷ್ಟು ಪುರೋಹಿತಶಾಹಿಗೆ ಅನುಕೂಲ.

ಮಾವಳ್ಳಿ ಶಂಕರ್, ಮುಖಂಡರು, ದಲಿತ ಸಂಘರ್ಷ ಸಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು