ಶನಿವಾರ, ಜನವರಿ 25, 2020
28 °C
ಶಿಕ್ಷಕರಿಗೆ ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಸಲಹೆ

ವಿಜ್ಞಾನ ಸಂಶೋಧನೆಯತ್ತ ಒಲವು ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ವಿಜ್ಞಾನದ ವಿಷಯದ ಬಗ್ಗೆ ಮಕ್ಕಳಿಗೆ ಆಸಕ್ತಿ ಬೆಳೆಸಬೇಕು. ವಿಜ್ಞಾನ ಸಂಶೋಧನೆಯತ್ತ ಒಲವು ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ ಸಲಹೆ ನೀಡಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ವಿಜ್ಞಾನ ಶಿಕ್ಷಕರ ಕ್ಲಬ್‌ ವತಿಯಿಂದ ವಿಜ್ಞಾನ ಶಿಕ್ಷಕರಿಗೆ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪುನಃಶ್ಚೇತನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಶಿಕ್ಷಣಕ್ಕಾಗಿ ಸರ್ಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳು ಸಮರ್ಪಕವಾಗಿ ಅನುಷ್ಠಾನ ಆಗಬೇಕಿದೆ. ಹೊಸ ಸಂಶೋಧನೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ. ಅಂತರರಾಷ್ಟ್ರೀಯ ಮಟ್ಟದವರೆಗೆ ಬೆಳೆಯಲು ಸಾಧ್ಯವಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ. ಜೀವನ ಕೌಶಲದ ಬಗ್ಗೆಯೂ ತಿಳಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್‌ ಮಾತನಾಡಿ, ‘ವಿಜ್ಞಾನ ಕುತೂಹಲಕಾರಿ ವಿಷಯ. ದೈನಂದಿನ ಜೀವನದಲ್ಲಿ ನಿತ್ಯ ಹಾಸುಹೊಕ್ಕಾಗಿದೆ. ಜಗತ್ತಿನಲ್ಲಿ ವಿಜ್ಞಾನ ಸುಧಾರಣೆಯಾಗುತ್ತಲೇ ಇದೆ. ಸರಳ ಮತ್ತು ಪ್ರಯೋಗಾತ್ಮಕ ಬೋಧನೆಯ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ವಿಜ್ಞಾನಿಗಳನ್ನಾಗಿ ರೂಪಿಸಬೇಕು’ ಎಂದು ಕಿವಿಮಾತು ಹೇಳಿದರು.

‘2018–19ರ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಐದು ವಿದ್ಯಾರ್ಥಿಗಳು ವಿಜ್ಞಾನದ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷ ಇಂತಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಅಗ್ರಸ್ಥಾನ ಪಡೆಯಬೇಕು. ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ’ ಎಂದು ನೆನಪಿಸಿದರು.

ವಿಜ್ಞಾನದ ಜ್ಞಾನ ಹಂಚಿ: ಮಕ್ಕಳಿಗೆ ವಿಜ್ಞಾನದ ಜ್ಞಾನವನ್ನು ಹಂಚುವುದರ ಜೊತೆಗೆ ಪರಿಸರ ಪ್ರಜ್ಞೆಯನ್ನು ಮೂಡಿಸುವ ಅಗತ್ಯವಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ.ಎಸ್.ಶಿಶುಪಾಲ್ ಸಲಹೆ ನೀಡಿದರು.

‘ಮಾನವ ಪರಿಸರದ ಒಂದು ಭಾಗವಷ್ಟೇ. ಈವರೆಗೆ ಮಾನವ ವಿಜ್ಞಾನದಲ್ಲಿ ಕಲಿತದ್ದು ವಿರಳ. ಇನ್ನೂ ಹಲವು ವಿಷಯಗಳನ್ನು ಅರಿಯುವ ಅಗತ್ಯವಿದೆ’ ಎಂದರು.

‘ಯುವ ಪೀಳಿಗೆಯ ಪಾಲಿಗೆ ಪರಿಸರ ಮೋಜಿನ ತಾಣವಾಗಿದೆ. ‍‍ಪರಿಸರದಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಾಗಿದೆ. ಪ್ರಕೃತಿ ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಕೃತಿ ವಿನಾಶದಂಚಿಗೆ ಸರಿದರೆ ಪ್ರಾಣಿ–ಪಕ್ಷಿಗಳ ಸಂಕುಲ ನಾಶವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ ಪ್ರಶ್ನೆ ಪತ್ರಿಕೆಗಳ ಗುಚ್ಛ ‘ಅಣು’, ವಿಜ್ಞಾನ ಚಿತ್ರಗಳ ಅಭ್ಯಾಸ ಕೈಪಿಡಿ ‘ಪರಮಾಣು’, ಪ್ರಶ್ನೆ ಪತ್ರಿಕೆಗಳ ‘ಸಂಯುಕ್ತ’ ಮತ್ತು ವಿಜ್ಞಾನ ಚಿತ್ರಗಳನ್ನು ಹೊಂದಿದ ‘ಧಾತು’ ಸೇರಿ ನಾಲ್ಕು ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಎನ್.ಪ್ರಜ್ವಲ್, ಬಿ.ಕೆ.ನಿತೇಶ್, ಟಿ.ಯಶೋದ, ಎಂ.ನಯನ್ ಗೌಡ, ಮಹಮ್ಮದ್ ಜುನೇದ್ ಹಾಗೂ ಶಿಕ್ಷಕರಾದ ಸುರೇಶ್, ಬಸವರಾಜಪ್ಪ, ಜಿ.ಕೆ.ತಮ್ಮಣ್ಣ, ಸಿದ್ಧಪ್ಪ, ಜಾನಕಿದೇವಿ, ಕೆ.ಟಿ.ಶಾಂತಾಕುಮಾರಿ ಅವರನ್ನು ಸನ್ಮಾನಿಸಲಾಯಿತು.

ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ಹೊಳಲ್ಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಸಿ.ವಿಜಯ್‍ಕುಮಾರ್, ವಿಷಯ ಪರಿವೀಕ್ಷಕರಾದ ಸವಿತಾ, ಗೋವಿಂದಪ್ಪ, ಕುಬೇರಪ್ಪ, ಶಿವಣ್ಣ, ಚಂದ್ರಣ್ಣ, ವಿಜ್ಞಾನ ಶಿಕ್ಷಕರ ಕ್ಲಬ್ ಅಧ್ಯಕ್ಷ ವಿ.ದೊಡ್ಡಯ್ಯ, ಹಿಂದಿ ವಿಷಯ ನೋಡಲ್ ಅಧಿಕಾರಿ ಎಸ್.ಟಿ.ಮಹಲಿಂಗಪ್ಪ, ಉಪಯೋಜನಾ ಸಂಯೋಜನಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಇದ್ದರು. 

ಪ್ರತಿಕ್ರಿಯಿಸಿ (+)