ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಧೈರ್ಯವಾಗಿ ಪರೀಕ್ಷೆಗೆ ಕಳಿಸಿ: ಬಸವರಾಜ ಹೊರಟ್ಟಿ

ಮುರುಘಾಮಠದಲ್ಲಿ ವಿಧಾನಪರಿಷತ್ ಸದಸ್ಯ
Last Updated 12 ಜೂನ್ 2020, 5:36 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸುರಕ್ಷತಾ ಕ್ರಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಧೈರ್ಯವಾಗಿ ಕಳುಹಿಸಿ’ ಎಂದು ಪೋಷಕರಿಗೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಮುರುಘಾಮಠಕ್ಕೆ ಗುರುವಾರ ಭೇಟಿ ನೀಡಿ, ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದ ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಕೆಲ ಕಾಲ ಚರ್ಚೆ ನಡೆಸಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಗೊಂದಲಗಳಿದ್ದರೂ ಪರೀಕ್ಷೆ ನಡೆಯಬೇಕು. ಇಲ್ಲದಿದ್ದರೆ, ಮಕ್ಕಳಲ್ಲಿ ಓದುವ ಪ್ರವೃತ್ತಿ ಕ್ಷೀಣಿಸುತ್ತದೆ. ಹೆಚ್ಚು ಅಂಕಗಳಿಸಲು ತಯಾರಿ ನಡೆಸಿರುವ ವಿದ್ಯಾರ್ಥಿಗಳಿಗೆ ನಿರಾಸೆಯಾಗಲಿದೆ. ಅಲ್ಲದೆ, ಎಲ್ಲರನ್ನೂ ಉತ್ತೀರ್ಣಗೊಳಿಸಿದರೆ ಮೆರಿಟ್ ಆಧಾರದ ಮುಂದಿನ ತರಗತಿಗಳ ಪ್ರವೇಶವೂ ಸೇರಿ ಅನೇಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ’ ಎಂದರು.

‘ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಲು ಮಕ್ಕಳು ಸಜ್ಜಾಗಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸುವುದಾಗಿ ಸರ್ಕಾರ ಹೇಳಿದೆ. ಪೋಷಕರಲ್ಲಿ ಅನೇಕರಿಗೆ ಭೀತಿ ಇದೆ. ಆದರೂ ಪರೀಕ್ಷೆ ಅನಿವಾರ್ಯವಾಗಿದೆ’ ಎಂದರು.

‘ಪರೀಕ್ಷಾ ಕೇಂದ್ರಗಳು ಎರಡು ಇರುವೆಡೆ 4 ಮಾಡಿ ಪರೀಕ್ಷೆ ನಡೆಸಬೇಕು. ಶಿಕ್ಷಣ ಸಚಿವರೂ ಎಂದಿನಂತೆ ಸುಗಮವಾಗಿ ನಡೆಸಬೇಕು ಎಂಬ ಉದ್ದೇಶದಿಂದ ರಾಜ್ಯದಾದ್ಯಂತ ಓಡಾಡುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳ ಜವಾಬ್ದಾರಿಯೂ ಹೆಚ್ಚಿದೆ’ ಎಂದ ಅವರು, ‘ರಾಜ್ಯ ಸರ್ಕಾರ ಈವರೆಗೆ ನಮ್ಮ‌ ಸಲಹೆ, ಸೂಚನೆ ಕೇಳಿಲ್ಲ. ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಿತಿ‌ ರಚಿಸಿದರೆ ಅಗತ್ಯ ಸಲಹೆ ನೀಡಲಿದ್ದೇವೆ’ ಎಂದು ಹೇಳಿದರು.

‘ದೊಡ್ಡ ದೊಡ್ಡ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸುವ ಬಹುತೇಕರು ಸ್ಥಿತಿವಂತರೇ ಆಗಿರುತ್ತಾರೆ. ಅಂಥವರು ಕೋವಿಡ್ ಸಂದರ್ಭದ ಲಾಭ ಪಡೆಯಬಾರದು. ಬಡವರಿದ್ದರೆ, ಪರಿಶೀಲಿಸಿ ವಿಶೇಷ ಪ್ರಕರಣ ಎಂದು ಸಹಾಯ ಮಾಡಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಶನಿವಾರ ರಜೆ ಘೋಷಿಸಲಿ:‘ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆ ತೆರೆಯಬಾರದು. ಈ ಕುರಿತು ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಶಾಲೆ ಪುನರಾರಂಭ ಆದಾಗ ಒಂದು ಶನಿವಾರ ದಿನವಿಡಿ ತರಗತಿ ಮಾಡಿ, ಮತ್ತೊಂದು ಶನಿವಾರ ರಜೆ ನೀಡಬೇಕು. ಶಾಲಾ ಸಮಯ ಅರ್ಧಗಂಟೆ ಹೆಚ್ಚಿಸಬೇಕು’ ಎಂದು ಬಸವರಾಜ ಹೊರಟ್ಟಿ ಒತ್ತಾಯಿಸಿದರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಜೆಡಿಎಸ್ ಮುಖಂಡ ಎಸ್.ವಿ. ಕೊಟ್ರೇಶ್, ವಕೀಲ ಪ್ರತಾಪ್‌ಜೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT