ಭಾನುವಾರ, ಏಪ್ರಿಲ್ 11, 2021
33 °C

ಪುನರಾವರ್ತನೆ ಆಗಲಿದೆ ಕಾಯಕ ಕ್ರಾಂತಿ: ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ, ಕಾಯಕ ಕ್ರಾಂತಿ ಮಾಡಿದರು. ಆಧುನಿಕ ಬಸವಣ್ಣನವರಂತೆ ಇರುವ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಕಾಯಕ ಕ್ರಾಂತಿ ಪುನರಾವರ್ತನೆ ಆಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ‘ಶರಣ ಸೇನೆ’ಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಶರಣರ ನೇತೃತ್ವದಲ್ಲಿ ಸಾಗಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಾಭಿಮಾನಿ, ಸ್ವಾವಲಂಬಿ ಭಾರತ ನಿರ್ಮಾಣವಾಗುತ್ತದೆ. ಹೀಗಾಗಿ, ತನು–ಮನ–ಧನದಿಂದ ಶರಣ ಸೇನೆಯೊಂದಿಗೆ ಇರುತ್ತೇನೆ ’ ಎಂದರು.

‘ಮಾನವ ಧರ್ಮದ ಮಹತ್ವ ತಿಳಿಸಿದ ಬಸವಣ್ಣನವರು ಯಂತ್ರ ಮಾನವರಾಗುವ ಅಪಾಯವನ್ನು ತಪ್ಪಿಸಿದರು. ಮಾನವೀಯ ಮೌಲ್ಯಗಳನ್ನು ಬೆಳೆಸಿದರು. ಭಾರತೀಯ ಸಂಸ್ಕೃತಿ ಉಳಿಯಲು ಶರಣರ ಕೊಡುಗೆ ಅಪಾರವಾಗಿದೆ. ಜಗತ್ತಿಗೆ ಬೆಳಕು ಕೊಡುವ ಶಕ್ತಿ ಬಸವತತ್ವಗಳಿಗೆ ಇದೆ’ ಎಂದು ಹೇಳಿದರು.

‘ಯುವ ಶಕ್ತಿ ನಿರಾಸಕ್ತಿ ತಳೆದರೆ ಹಾಗೂ ಕ್ರೌರ್ಯದಲ್ಲಿ ಮುಳುಗಿದರೆ ದೇಶ ತತ್ತರಿಸಿ ಹೋಗುತ್ತದೆ. ಸಮಾಜದ ಒಳಿತಿಗೆ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಶರಣ ಸೇನೆಯ ಅಗತ್ಯವಿತ್ತು. ಕಾಲು ಜಾರಿದಾಗ ಆಗುವ ಅಪಾಯಕ್ಕಿಂತ ನಾಲಿಗೆ ಜಾರಿದಾಗ ಆಗುವ ಅಪಾಯ ಹೆಚ್ಚು. ಹೀಗಾಗಿ, ಎಲ್ಲರೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ’ ಎಂದು ಕಿವಿಮಾತು ಹೇಳಿದರು.

‘2011ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸವಾಲುಗಳು ಎದುರಾದವು. ರಾಜಕೀಯ ಜೀವನ ಮುಗಿದೇ ಹೋಯಿತು ಎಂದು ಅನೇಕರು ಆಡಿಕೊಂಡಿದ್ದರು. ಕುಟುಂಬದ ವಿರುದ್ಧ 25ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು. ಸವಾಲುಗಳನ್ನು ಧೈರ್ಯವಾಗಿ ಎದುರಿಸಿದ್ದರ ಪರಿಣಾಮವಾಗಿ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಇತ್ತೀಚೆಗೆ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇದು ಖಂಡಿತ ತಪ್ಪು’ ಎಂದರು.

ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘ಅಧಿಕಾರಿ, ಹಣ, ಅಂತಸ್ತು ಬಂದು ಹೋಗುತ್ತವೆ. ಆದರೆ, ವಿಚಾರ ಶಕ್ತಿ ಮಾತ್ರ ಶಾಶ್ವತವಾಗಿ ಉಳಿಯಬಲ್ಲದು. ಯುವ ಸಮೂಹ ಮೊದಲು ಕೇಳಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕಿದೆ. ಶ್ರದ್ಧೆ, ವಿಶ್ವಾಸ, ಭಕ್ತಿ ಇದ್ದರೆ ಪ್ರತಿಯೊಬ್ಬ ವ್ಯಕ್ತಿ ಕೂಡ ಶಕ್ತಿಯಾಗಿ ಬೆಳೆಯಬಲ್ಲ’ ಎಂದರು.

‘ಧಾರ್ಮಿಕ ಗ್ರಂಥಗಳು ಮಾನವರನ್ನು ಆಳುತ್ತಿವೆ ಎಂಬ ಭಾವನೆ ಇದೆ. ವಿಚಾರಶಕ್ತಿ ನಮ್ಮನ್ನು ಆಳ್ವಿಕೆ ಮಾಡುತ್ತಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಸಂವಿಧಾನ ಕೂಡ ಉದಾತ್ತ ವಿಚಾರಗಳುಳ್ಳ ಒಂದು ಗೊಂಚಲು. ಇದೊಂದು ರಾಷ್ಟ್ರಗ್ರಂಥವಾಗಿದ್ದು, ದೇಶವನ್ನು ಆಳ್ವಿಕೆ ಮಾಡುತ್ತಿದೆ. ಇದರ ಶ್ರೇಯಸ್ಸು ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಸಲ್ಲಬೇಕು’ ಎಂದರು.

‘ಬುದ್ದಿವಂತರು ವಿಚಾರವಂತರಾಗಬೇಕು. ಮಿದುಳಿನ ಶಕ್ತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅನ್ಯರ ಬದುಕನ್ನು ಹಾಳು ಮಾಡಲು ಬುದ್ದಿಶಕ್ತಿ ಬಳಸಿಕೊಳ್ಳಬಾರದು. ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ವ್ಯಕ್ತಿಗಳಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲರೂ ಜವಾಬ್ದಾರಿಯುತ ವ್ಯಕ್ತಿಗಳಾಗಬೇಕು ಎಂಬುದು ಮಠದ ನಿರೀಕ್ಷೆ’ ಎಂದರು.

‘ಕೊಡಲಿ ಏಟು ಎದುರಿಸಲು ಸಿದ್ಧ’

ಮುರುಘಾ ಮಠಕ್ಕೆ ಕೊಡಲಿ ಏಟುಗಳನ್ನು ನೀಡಲಾಗುತ್ತಿದೆ. ಸಮಯ ಕಾದು ಕೊಡಲಿ ಬೀಸಲಾಗುತ್ತಿದೆ. ಇಂತಹ ಏಟುಗಳನ್ನು ಎದುರಿಸಲು ಸೇನೆ ಸಿದ್ಧವಿದೆ ಎಂದು ಶರಣ ಸೇನೆಯ ಅಧ್ಯಕ್ಷ ಎ.ಎಂ.ಮರುಳಾರಾಧ್ಯ ಹೇಳಿದರು.

‘ಮಠದಲ್ಲಿ ಇದ್ದು ಹೋದವರೇ ಕೊಡಲು ಏಟು ನೀಡುತ್ತಿದ್ದಾರೆ. ಶರಣರು ನಿಮಗೆ ಏನು ಮಾಡಿದ್ದರು? ಸಮಾಜಮುಖಿ ಕಾರ್ಯಕ್ಕೆ ನಮ್ಮೊಂದಿಗೆ ಜೊತೆಗೆ ಬನ್ನಿ. ಮುಕ್ತವಾಗಿ ಸ್ವೀಕರಿಸುತ್ತೇವೆ. ಶರಣ ಸೇನೆಯು ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲಿದೆ’ ಎಂದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಬಿಜೆಪಿ ಕಾರ್ಯದರ್ಶಿ ಕೆ.ಎಸ್‌.ನವೀನ್, ಎಸ್‌ಜೆಎಂ ವಿದ್ಯಾಪೀಠದ ನಿರ್ದೇಶಕ ಪಟೇಲ್ ಶಿವಕುಮಾರ್ ಇದ್ದರು.

***

ಮಧ್ಯ ಕರ್ನಾಟಕದಲ್ಲಿರುವ ಮಠ ಎಲ್ಲರಿಗೂ ಪ್ರೇರಣೆಯಾಗಿದೆ. ಬಸವಣ್ಣನವರ ಕಾರ್ಯವನ್ನು ಶರಣರು ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ಯುವಕರಿಗೆ ಮಾದರಿಯಾಗಿದ್ದಾರೆ.

–ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ

***

ಶರಣರು ರೂಪಿಸುವ ಪ್ರತಿ ಕಾರ್ಯಕ್ರಮಕ್ಕೂ ಅರ್ಥವಿದೆ. ಜಾತ್ಯತೀತ ನಾಡು ಕಟ್ಟುವಲ್ಲಿ ಅವರು ಮಾದರಿಯಾಗಿದ್ದಾರೆ. ಬಸವಣ್ಣನವರ ತತ್ವದ ಅಧಾರದಲ್ಲಿ ನಡೆದುಕೊಳ್ಳುತ್ತಿದ್ದಾರೆ.

– ಜಿ.ಎಚ್.ತಿಪ್ಪಾರೆಡ್ಡಿ. ಶಾಸಕ, ಚಿತ್ರದುರ್ಗ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು