ಶನಿವಾರ, ಸೆಪ್ಟೆಂಬರ್ 18, 2021
30 °C
ಶೂಟ್‌ಔಟ್‌ಗೆ ಬೆಚ್ಚಿಬಿದ್ದ ಪಟ್ಟಣದ ನಾಗರಿಕರು, ಪತ್ತೆಯಾಗದ ದುಷ್ಕರ್ಮಿಗಳು

ಪೂಜೆ ಮಾಡುತ್ತಿದ್ದವನ ತಲೆಗೆ ಬಿತ್ತು ಗುಂಡೇಟು! ಭಯಾನಕ ಶೂಟ್‌ಔಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ರಾತ್ರಿ 8.50ರ ಸಮಯ. ಇನ್ನೇನು ಅಂಗಡಿಯ ಬಾಗಿಲು ಮುಚ್ಚುವ ಹೊತ್ತು. ಕೆಲಸಗಾರರು ಹೊರಗೆ ತೂಗು ಹಾಕಿದ್ದ ಬಟ್ಟೆಗಳನ್ನು ಒಳಗೆ ಇಡುವ ಧಾವಂತದಲ್ಲಿದ್ದರು.

ಅಂಗಡಿ ಮುಚ್ಚುವಾಗ ಸಾರ್ವಜನಿಕರ ಕಣ್ಣುಗಳಿಂದ ಆಸರ ಆಗದಿರಲಿ, ಚೆನ್ನಾಗಿ ವ್ಯಾಪಾರ ಆಗಲಿ ಎಂದು ನಿತ್ಯವೂ ಅಂಗಡಿಗೆ ದೃಷ್ಟಿ ತೆಗೆಯುವುದು ಇವರ ರೂಢಿ. ಬಟ್ಟೆ ಅಂಗಡಿ ಮಾಲೀಕ ಮೂಲ್ ಸಿಂಗ್ ಅಂಗಡಿಯ ಹೊರಗೆ ಬಂದು ದೃಷ್ಟಿ ತೆಗೆಯಲೆಂದು ಪೂಜಾ ಸಾಮಗ್ರಿ ಜೋಡಿಸುತ್ತಿದ್ದರು. ಇದೇ ಸಮಯಕ್ಕೆ ಕಾದು ಕುಳಿತಿದ್ದ ಹಂತಕರು ಮೂಲ್ ಸಿಂಗ್ ಅವರ ತಲೆಗೆ ಗುಂಡು ಹಾರಿಸಿದರು. ಹತ್ತಿರದಿಂದಲೇ ಹಾರಿಸಿದ ಬಂದೂಕಿನ ಗುಂಡು ಮೂಲ್ ಸಿಂಗ್‌ ಅವರ ತಲೆ ಸೀಳುತ್ತಿದ್ದಂತೆ ಅಲ್ಲಿಯೇ ಕುಸಿದು ಬಿದ್ದರು. ಕ್ಷಣಾರ್ಧದಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಯಿತು.

ಪಟ್ಟಣದ ಬಸ್ ನಿಲ್ದಾಣದಿಂದ ಹೊಸದುರ್ಗ ಮಾರ್ಗದಲ್ಲಿರುವ ಪ್ರಿಯದರ್ಶಿನಿ ಬಟ್ಟೆ ಅಂಗಡಿಯ ಮುಂದೆ ಮಂಗಳವಾರ ರಾತ್ರಿ ನಡೆದಶೂಟ್ಔಟ್ ಪ್ರಕರಣದ ಭಯಾನಕ ದೃಶ್ಯವಿದು. ಪಟ್ಟಣದ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಶೂಟ್ಔಟ್

ಪ್ರಕರಣ ಇದಾಗಿದ್ದು, ನಾಗರಿಕರು ಅಕ್ಷರಶಃ ಬೆಚ್ಚಿಬಿದ್ದರು. ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಅಂಗಡಿಯ ಮುಂದೆ ಜಮಾಯಿಸಿದರು.

ರಾಮಗಿರಿಯಲ್ಲಿ ಪತ್ನಿಯೊಂದಿಗೆ ವಾಸವಿದ್ದ 29 ವರ್ಷದ ಮೂಲ್ ಸಿಂಗ್‌ ಅವರಿಗೆ ಮಕ್ಕಳಿರಲಿಲ್ಲ. ರಾಜಸ್ಥಾನದ ಪಾಲಿ ಜಿಲ್ಲೆ, ಸೋಜತ್ ತಾಲ್ಲೂಕಿನ ಸರ್ದಾರ್ಪುರ ಗ್ರಾಮದ ರಜಪೂತ ಜನಾಂಗಕ್ಕೆ ಸೇರಿದ ಇವರು ವ್ಯಾಪಾರದ ಉದ್ದೇಶದಿಂದ ಹಲವು ವರ್ಷಗಳ ಹಿಂದೆಯೇ ರಾಮಗಿರಿಗೆ ಬಂದು ನೆಲೆಸಿದ್ದರು. ರಾಮಗಿರಿಯಲ್ಲಿ ಭವಾನಿ ಟೆಕ್ಸ್‌ಟೈಲ್ಸ್‌ ಎಂಬ ಒಂದು ಬಟ್ಟೆ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದರು. ವ್ಯಾಪಾರ ವಿಸ್ತರಿಸುವ ಉದ್ದೇಶದಿಂದ ಪಟ್ಟಣದಲ್ಲಿ ಮತ್ತೊಂದು ಬಟ್ಟೆ ಅಂಗಡಿ ಆರಂಭಿಸಿದ್ದರು. ರಾಮಗಿರಿಯ ಅಂಗಡಿ ನೋಡಿಕೊಳ್ಳಲು 5 ವರ್ಷಗಳ ಹಿಂದೆ ತಮ್ಮ ಶೇರ್ ಸಿಂಗ್ ಅವರನ್ನು ಕರೆಸಿಕೊಂಡಿದ್ದರು. ಶೇರ್‌ಸಿಂಗ್ ರಾಮಗಿರಿಯ ಅಂಗಡಿ, ಮೂಲ್ ಸಿಂಗ್ ಪಟ್ಟಣದ ಅಂಗಡಿ ನೋಡಿಕೊಳ್ಳುತ್ತಿದ್ದರು. ನಿತ್ಯವೂ ಕಾರಿನಲ್ಲಿ ಪಟ್ಟಣಕ್ಕೆ ಬಂದು ವ್ಯಾಪಾರ ನಡೆಸಿ ರಾತ್ರಿ ರಾಮಗಿರಿಗೆ ವಾಪಸ್‌ ಆಗುತ್ತಿದ್ದರು. ಮಂಗಳವಾರ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿ ಮುಚ್ಚಿ ರಾಮಗಿರಿಗೆ ಹೋಗಲು ಸಿದ್ಧವಾಗುತ್ತಿದ್ದಂತೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಬಂದೂಕಿನ ಶಬ್ದ ಕೇಳುತ್ತಿದ್ದಂತೆ ಕೆಲಸಗಾರರು ಹೊರಗೆ ಬಂದು ನೋಡಿದಾಗ ಮೂಲ್ ಸಿಂಗ್ ಮಕಾಡೆ ಬಿದ್ದು, ಮೃತಪಟ್ಟಿದ್ದರು.

ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ರಾಜಸ್ಥಾನದ ಸ್ವಗ್ರಾಮಕ್ಕೆ ಒಯ್ಯಲಾಯಿತು. ‘ಅಣ್ಣನಿಗೆ ವೈರಿಗಳು ಇರಲಿಲ್ಲ. ಯಾರು ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಮೂಲ್ ಸಿಂಗ್‌ ಅವರ ತಮ್ಮ ಶೇರ್ ಸಿಂಗ್ ತಿಳಿಸಿದ್ದಾರೆ. ‘ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಚಿತ್ರಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ’ ಎಂದು ಸಿಪಿಐ ರವೀಶ್ ತಿಳಿಸಿದ್ದಾರೆ.

ಹಳೇ ದ್ವೇಷಕ್ಕೆ ಪ್ರತೀಕಾರದ ಶಂಕೆ

2018ರ ನ. 28ರಂದು ರಾಮಗಿರಿಯಲ್ಲಿ ಚಿನ್ನದ ವ್ಯಾಪಾರಿ ಕಲ್ಯಾಣ್ ಸಿಂಗ್ ಎಂಬುವರನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಈಗ ಶೂಟ್‌ಔಟ್‌ನಿಂದ ಮೃತಪಟ್ಟಿರುವ ಮೂಲ್ ಸಿಂಗ್ 4ನೇ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದರು.

ಕೆಲ ಕಾಲ ಜೈಲಿನಲ್ಲಿದ್ದ ಮೂಲ್ ಸಿಂಗ್ ಜಾಮೀನು ಪಡೆದು ಹೊರಗೆ ಬಂದು ಮತ್ತೆ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ‘ನಾನು ಜೈಲಿನಲ್ಲಿದ್ದಾಗ ನಮ್ಮ ಅಂಗಡಿಯಲ್ಲಿದ್ದ ₹ 80 ಲಕ್ಷ ಮೌಲ್ಯದ ಬಟ್ಟೆಗಳನ್ನು ಕಲ್ಯಾಣ್ ಸಿಂಗ್‌ನ ಪತ್ನಿ ಮತ್ತು ಮಕ್ಕಳು ಲೂಟಿ ಮಾಡಿದ್ದಾರೆ’ ಎಂದು ನ್ಯಾಯಾಲಯದ ಮೂಲಕ ನೋಟಿಸ್‌ ಕೊಡಿಸಿದ್ದ. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹಳೇ ವೈಷಮ್ಯದಿಂದ ಕೊಲೆ ನಡೆದಿರಬಹುದು’ ಎಂಬ ಶಂಕೆ ವ್ಯಕ್ತವಾಗಿದೆ.

ತನಿಖೆಗೆ ಎಂಟು ತಂಡ ರಚನೆ

ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ನಡೆದ ಶೂಟೌಟ್‌ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆ ತನಿಖೆಗೆ ಎಂಟು ತಂಡಗಳನ್ನು ರಚಿಸಿದೆ. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರಿಗೆ ಕೆಲ ಸುಳಿವುಗಳು ಸಿಕ್ಕಿವೆ. ತಾಂತ್ರಿಕ ತಂಡ ಬುಧವಾರ ಸ್ಥಳ ಪರಿಶೀಲನೆ ನಡೆಸಿ ಕೆಲ ಮಾಹಿತಿ ನೀಡಿದೆ. ಮೂಲ್‌ ಸಿಂಗ್‌ ಅವರಿಗೆ ಸಮೀಪದಿಂದಲೇ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ತಲೆಗೆ ಹೊಕ್ಕ ಗುಂಡು ಹೊರಗೆ ಬಂದಿಲ್ಲ. ಶೂಟೌಟ್‌ಗೆ ಸಂಬಂಧಿಸಿದಂತೆ ಕೆಲ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ. ಇದನ್ನು ಆಧರಿಸಿದ ಪೊಲೀಸರು ಆರೋಪಿಗಳ ಬೆನ್ನುಹತ್ತಿ ಹೊರರಾಜ್ಯಕ್ಕೂ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು