ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ್‌ ಕುಲಕರ್ಣಿ ಸೆರೆ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ ಆಕ್ರೋಶ

Last Updated 5 ನವೆಂಬರ್ 2020, 11:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಾಂಗ್ರೆಸ್‌ ಮುಖಂಡ ವಿನಯ್‌ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ‍ಪಡೆದಿರುವುದು ರಾಜಕೀಯ ಪ್ರೇರಿತ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಚ್ಚಿ ಹೋಗಿದ್ದ ಪ್ರಕರಣವನ್ನು ಮತ್ತೆ ಕೆದಕಲಾಗಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಬಿಜೆಪಿ ಹಲವು ಬಾರಿ ಹೀಗೆ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ’ ಎಂದು ಆರೋಪಿಸಿದರು.

‘ವಿನಯ್‌ ಕುಲಕರ್ಣಿ ಅವರೊಂದಿಗೆ ಮಾತನಾಡಿದ್ದೇನೆ. ತಪ್ಪು ಮಾಡಿಲ್ಲವೆಂದು ಅವರು ಹೇಳಿದ್ದಾರೆ. ಪ್ರಕರಣ ವಿಚಾರಣೆಯ ಹಂತದಲ್ಲಿರುವುದರಿಂದ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರಲ್ಲಿ ಪ್ರೌಢಿಮೆ ಇಲ್ಲ. ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ’ ಎಂದರು.

‘ಶಾಲೆಗಳನ್ನು ತರಾತುರಿಯಲ್ಲಿ ಪ್ರಾರಂಭ ಮಾಡುವುದು ಸರಿಯಲ್ಲ. ಕೋವಿಡ್‌ ಲಸಿಕೆ ಲಭ್ಯವಾಗುವವರೆಗೂ ಶಾಲೆ ಮುಚ್ಚುವುದೇ ಸೂಕ್ತ. ಪ್ರಸಕ್ತ ಶೈಕ್ಷಣಿಕ ವರ್ಷ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿದರೆ ಏನು ತೊಂದರೆ ಆಗದು. ಕೋವಿಡ್‌ ತೊಲಗುವವರೆಗೂ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ನಡೆಸಬಾರದು’ ಎಂದು ಪ್ರತಿಕ್ರಿಯಿಸಿದರು..

‘ರಾಜ್ಯದ ಹಣಕಾಸು ಸ್ಥಿತಿ ತೀರಾ ಹದಗೆಟ್ಟಿದೆ. ಸರ್ಕಾರಿ ನೌಕರರ ವೇತನ ನೀಡಲು ಖಜಾನೆಯಲ್ಲಿ ಹಣವಿಲ್ಲ. ಒಂದೇ ವರ್ಷದಲ್ಲಿ ₹ 90 ಸಾವಿರ ಕೋಟಿ ಸಾಲ ಪಡೆದಿದ್ದಾರೆ. ಕರ, ತೆರಿಗೆ ವಸೂಲಿ ಆಗುತ್ತಿಲ್ಲ. ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ವಿದ್ಯುತ್‌ ದರ ಏರಿಕೆ ಮಾಡಿದ್ದು ತಪ್ಪು’ ಎಂದು ಹೇಳಿದರು.

ಒತ್ತಡ ತಂತ್ರಕ್ಕೆ ಬಗ್ಗಲ್ಲ: ಪ್ರಿಯಾಂಕ ಖರ್ಗೆ

ಬಿಜೆಪಿಯ ಒತ್ತಡ, ಬೆದರಿಕೆಯ ತಂತ್ರಕ್ಕೆ ಕಾಂಗ್ರೆಸ್‌ ನಾಯಕರು ಬಗ್ಗುವುದಿಲ್ಲ. ಪ್ರಬಲ ವಿರೋಧ ಪಕ್ಷವಾಗಿ ಬಿಜೆಪಿಯನ್ನು ಪ್ರಶ್ನಿಸುತ್ತೇವೆ ಎಂದು ಶಾಸಕ ಪ್ರಿಯಾಂಕ ಖರ್ಗೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್‌ ಮೇಲೆ ದಾಳಿ ನಡೆಸಿದ್ದು ಮುಗಿದ ಮೇಲೆ ವಿನಯ್‌ ಕುಲಕರ್ಣಿ ಅವರನ್ನು ಹೆದರಿಸುತ್ತಿದೆ. ಇಂತಹ ಬೆದರಿಕೆಗೆ ಕಾಂಗ್ರೆಸ್‌ ಮಣಿಯುವುದಿಲ್ಲ’ ಎಂದು ಪ್ರತಿಕ್ರಿಯೆ ನೀಡಿದರು.

***

ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅಧಿಕೃತ ಮುಖ್ಯಮಂತ್ರಿ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಡಿಫ್ಯಾಕ್ಟ್‌ ಮುಖ್ಯಮಂತ್ರಿ.
– ಸಿದ್ದರಾಮಯ್ಯ,ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT