ಸಿರಿಗೆರೆ: ತರಳಬಾಳು ಮಠ ಧರ್ಮ, ನ್ಯಾಯ ಮತ್ತು ಜ್ಞಾನಗಳ ತ್ರಿವೇಣಿ ಸಂಗಮವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಹೇಳಿದರು.
ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಿವಕುಮಾರ ಶ್ರೀ ಯಾವುದೇ ಒತ್ತಡಗಳಿಗೆ ಜಗ್ಗದೆ, ಬಗ್ಗದೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಕ್ರಾಂತಿಕಾರಿ ಸ್ವಾಮೀಜಿಯಾಗಿದ್ದರು ಎಂದರು.
ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಶಿಕ್ಷಣ ನೀಡಿದರು. ಅಂತಹ ಕಾರ್ಯವನ್ನು ಮುಂದುವರೆಸಿರುವ ಶಿವಮೂರ್ತಿ ಶ್ರೀಗಳು, ಆ ಕಾರ್ಯಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಿದ್ದಾರೆ ಎಂದರು.
ಸುಳ್ಳಿಗೆ ನೂರಾರು ಬಣ್ಣಗಳು–ತರಳಬಾಳು ಶ್ರೀ: ‘ಸತ್ಯಕ್ಕೆ ಒಂದೇ ಬಣ್ಣ. ಆದರೆ ಸುಳ್ಳಿಗೆ ನೂರಾರು ಬಣ್ಣಗಳಿವೆ. ಸತ್ಯ ಮನೆಯ ಬಾಗಿಲು ದಾಟುವಷ್ಟರಲ್ಲಿ ಸುಳ್ಳು ಊರನ್ನೇ ಸುತ್ತು ಹೊಡೆದಿರುತ್ತದೆ. ಅಂತಹ ಕೆಟ್ಟ ಪ್ರವೃತ್ತಿ ಸಮಾಜದಲ್ಲಿದೆ’ ಎಂದು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರೋಕ್ಷವಾಗಿ ಮಠದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಗುಡ್ಡದ ಮೇಲಿನಿಂದ ಬೀಳುವ ಕಲ್ಲುಗಳಿಂದ ಇತರರಿಗೆ ಆಗುವ ಅಪಾಯವನ್ನು ತಪ್ಪಿಸುವ ಗುಣವುಳ್ಳವನೇ ಸಮಾಜ ಸೇವಕ. ಈಗ ಹಿರಿಯ ಗುರುಗಳನ್ನು ಹೊಗಳುವ ಜನರೇ ಹಿಂದೆ ತ್ಯಾಗಪತ್ರ ನೀಡಿದ ಕ್ರಮವನ್ನು ‘ಶೋ’ ಎಂದಿದ್ದರು. ಹಿರಿಯ ಶ್ರೀಗಳು ಜನರ ನಿಂದನೆಗಳಿಗೆ ಕಿವಿಗೊಡದಂತೆ ಸಮಾಜದ ಕೆಲಸ ಮಾಡುವಂತೆ ಕಿವಿಮಾತು ಹೇಳಿದ್ದರು’ ಎಂದು ಸ್ಮರಿಸಿದರು.
'ಸಮಾಜ, ಆತ್ಮ ಮತ್ತು ಕಾನೂನು ಭಯಗಳು ವ್ಯಕ್ತಿಯನ್ನು ಕಾಡುವಂತಿರಬೇಕು. ಈ ಮೂರೂ ಭಯಗಳನ್ನು ಹೊಂದಿರುವ ವ್ಯಕ್ತಿ ಸರಿಯಾದ ದಾರಿಯಲ್ಲಿ ಹೋಗುತ್ತಾನೆ" ಎಂದರು.
ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್. ಆರ್. ಬಸವರಾಜಪ್ಪ ಗುರುವಂದನೆ ಸಲ್ಲಿಸಿದರು. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಅಖಿಲ ಕರ್ನಾಟಕ ವೀರಶೈವ-ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಕರ್ನಾಟಕ ನೀರಾವರಿ ನಿಗಮದ ಮಲ್ಲಿಕಾರ್ಜುನ ಗುಂಗೆ ಮಾತನಾಡಿದರು.
ಭರಮಸಾಗರ, ಜಗಳೂರು ಮತ್ತು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ತ್ವರಿತಗತಿಯಲ್ಲಿ ಆಗಲು ಶ್ರಮಿಸಿದ ಎಂಜಿನಿಯರ್‌ಗಳನ್ನು ಶ್ರೀಗಳು ಸನ್ಮಾನಿಸಿದರು. ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ನ್ಯಾಯವಾದಿ ಸಾವಿತ್ರಿ ರೆಡ್ಡಿ ಮುಂತಾದವರು ಭಾಗವಹಿಸಿದ್ದರು.
ದಾವಣಗೆರೆ ಅನುಭವ ಮಂಟಪದ ವಿದ್ಯಾರ್ಥಿ ಗುರುದೇವಯ್ಯ ಗಾಂಧಾರ ವಿದ್ಯೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ತೋಟಪ್ಪ ಉತ್ತಂಗಿ ತಂಡದವರು ವಚನ ಗೀತೆಗಳನ್ನು ಹಾಡಿದರು. ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ ನಿರೂಪಿಸಿದರು. ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ ಸ್ವಾಗತಿಸಿದರು.
- ಗಣ್ಯರ ಗೈರು: ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿಬೇಕಾಗಿದ್ದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸಚಿವರಾದ ಜಿ. ಪರಮೇಶ್ವರ್ ಎಂ.ಬಿ. ಪಾಟೀಲ್ ಮತ್ತು ಈಶ್ವರ ಖಂಡ್ರೆ ಗೈರಾಗಿದ್ದರು. ನಾಲ್ಕು ಕೃತಿಗಳ ಬಿಡುಗಡೆ: ಮಠದ ಸಾಹಿತ್ಯಸಿರಿ ಮಾಲಿಕೆಯಲ್ಲಿ ಪ್ರಕಟವಾದ ನಾಲ್ಕು ಕೃತಿಗಳನ್ನು ನ್ಯಾಯಮೂರ್ತಿ ಶಿವರಾಜ ಪಾಟೀಲ್ ಲೋಕಾರ್ಪಣೆ ಮಾಡಿದರು. ಹಿರಿಯ ಶ್ರೀಗಳ ಆತ್ಮನಿವೇದನೆ ಸಂಕಲ್ಪ ಹಾಗೂ ಹಿಂದಿ ಭಾಷೆಗೆ ಅನುವಾದಿಸಿದ ಅಕ್ಕಮಹಾದೇವಿ ವಚನಗಳು ಮತ್ತು ಅಲ್ಲಮಪ್ರಭು ವಚನಗಳ ಕೃತಿಗಳು ಅನಾವರಣಗೊಂಡವು. ಐಕ್ಯಮಂಟಪದಲ್ಲಿ ಪುಷ್ಪಾರ್ಚನೆ: ಇದಕ್ಕೂ ಮುನ್ನ ಶಾಂತಿವನದಿಂದ ಮಠದ ಅಂಗಳಕ್ಕೆ ಆಗಮಿಸಿದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಐಕ್ಯಮಂಟಪದಲ್ಲಿರುವ ಶಿವಕುಮಾರ ಶ್ರೀಗಳ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಮೊದಲ ಮಹಡಿಗೆ ತೆರಳಿ ಅಲ್ಲಿ ತಮ್ಮ ಗುರುಪಿತಾಮಹರಾದ ಗುರುಶಾಂತ ಶ್ರೀಗಳ ಮೂರ್ತಿಗೆ ಪೂಜೆ ಸಲ್ಲಿಸಿದರು. ಐಕ್ಯಮಂಟಪದಿಂದ ಸಭಾ ಮಂಟಪದವರೆಗೆ ನೂರಾರು ಮಹಿಳೆಯರು ಏರ್ಪಡಿಸಿದ್ದ ಪೂರ್ಣಕುಂಭಗಳ ಜೊತೆಗೆ ಶ್ರೀಗಳು ಪಾದಯಾತ್ರೆಯಲ್ಲಿ ಸಾಗಿದರು. ಸಭಾ ಮಂಟದ ಸಮೀಪ ವಿಶೇಷವಾಗಿ ನಿರ್ಮಿಸಲಾಗಿದ್ದ ಮಂಟಪದ ಬಳಿ ಶಿವಧ್ವಜಾರೋಹಣ ನೆರವೇರಿಸಿದರು. ಬಾಲಕಿಯರು ಬಸವ ಗೀತೆಗಳನ್ನು ಹಾಡಿದರು.
ಹರಿದು ಬಂದ ಜನಸ್ತೋಮ
ಈ ಬಾರಿಯ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ನಾಡಿನ ಹಲವು ಕಡೆಯಿಂದ ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಾಮಾನ್ಯವಾಗಿ ಶ್ರದ್ಧಾಂಜಲಿಯ ಕೊನೆಯ ದಿನ ಆಗಮಿಸುತ್ತಿದ್ದ ಹೆಚ್ಚಿನ ಸಂಖ್ಯೆಯ ಭಕ್ತರು ಎರಡು ದಿನ ಮೊದಲೇ ಸಿರಿಗೆರೆಯಲ್ಲಿ ಜಮಾಯಿಸಿದ್ದರು. ಬೆಳಿಗ್ಗೆಯಿಂದಲೇ ದಾಸೋಹ ಮಂಟಪದಲ್ಲಿ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. 2000 ಜನರು ಏಕಕಾಲದಲ್ಲಿ ಕುಳಿತು ಊಟ ಮಾಡಲು ಹಾಗೂ 2000 ಜನ ಬಫೆ ಪದ್ಧತಿಯಲ್ಲಿ ಊಟ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೂ ಜನರ ನೂಕುನುಗ್ಗಲು ಇತ್ತು. ಕುಂಬಳಕಾಯಿ ಮಿಶ್ರಿತ ಬೆಲ್ಲದ ಪಾಯಸ ಲಾಡು ಅನ್ನ ಸಾಂಬಾರ್ ರುಚಿಗೆ ಭಕ್ತರು ಸಂತೃಪ್ತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.