ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರಿಗೆರೆ: ಪ್ರೀತಿ ಬಾಂಧವ್ಯ ಬೆಸೆಯುವ ತರಳಬಾಳು ಹುಣ್ಣಿಮೆ

ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.‌ಎಸ್.‌ ಮಲ್ಲಿಕಾರ್ಜುನ್‌
Published 22 ಫೆಬ್ರುವರಿ 2024, 16:33 IST
Last Updated 22 ಫೆಬ್ರುವರಿ 2024, 16:33 IST
ಅಕ್ಷರ ಗಾತ್ರ

ಸಿರಿಗೆರೆ: ಜನರಲ್ಲಿ ಪ್ರೀತಿ ಬಾಂಧವ್ಯಗಳನ್ನು ಬೆಸೆಯುವ ಮೂಲಕ ತರಳಬಾಳು ಹುಣ್ಣಿಮೆ ಮಹೋತ್ಸವವು ನಾಡಹಬ್ಬವಾಗಿ ರೂಪಿತವಾಗಿದೆ ಎಂದು ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.‌ಎಸ್.‌ ಮಲ್ಲಿಕಾರ್ಜುನ್‌ ಅಭಿಪ್ರಾಯಪಟ್ಟರು.

ಸಿರಿಗೆರೆಯಲ್ಲಿ ಗುರುವಾರ ಆರಂಭಗೊಂಡ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತರಳಬಾಳು ಪೀಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ದರು ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿದವರು. ಮಾನವ ಕುಲದ ಹಿರಿಮೆಯನ್ನು ಸಾರಿದವರು ಎಂದು ಬಣ್ಣಿಸಿದರು.

ಸಮಾಜದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ, ಶಿವಶರಣರ ತತ್ವಗಳ ಆಧಾರದಲ್ಲಿ ಬದುಕು ಸಾಗಿಸಲು ತರಳಬಾಳು ಹುಣ್ಣಿಮೆ ಮಹೋತ್ಸವ ದಾರಿದೀಪವಾಗಿದೆ. ಸದ್ಧರ್ಮದ ಅಡಿಯಲ್ಲಿ ಎಲ್ಲರೂ ಒಂದಾಗಿ ಪ್ರೀತಿಯ ಬದುಕು ಸಾಗಿಸಬೇಕೆಂಬುದು ಪೀಠದ ಆಶಯ. ಆ ಮೂಲಕ ಭಾವೈಕ್ಯತೆಯ ಸಂಗಮವಾಗಿ ಮಠವು ನಿಂತಿದೆ ಎಂದರು.

ರಾಜ್ಯದಲ್ಲಿ ಬರದ ಛಾಯೆ ಇರುವ ಕಾರಣ ಈ ಬಾರಿಯ ತರಳಬಾಳು ಹುಣ್ಣಿಮೆಯನ್ನು ಸಿರಿಗೆರೆಯಲ್ಲಿ ಮೂರು ದಿನಗಳ ಕಾಲ ಸರಳವಾಗಿ ಆಚರಿಸಲು ತೀರ್ಮಾನ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ವರ್ಷ ಮುಂಗಾರು ಮಳೆ ಬೇಗನೆ ಕರುಣಿಸಿ, ಸಮೃದ್ಧ ಮಳೆ ಬಂದು ರೈತರಲ್ಲಿ ಸಂತಸ ಮೂಡಲಿ ಎಂದು ಸಚಿವರು ಹಾರೈಸಿದರು.

ತರಳಬಾಳು ಹುಣ್ಣಿಮೆ ಮಹೋತ್ಸವವು ನಿರಾಶಾವಾದಿಗಳಾಗಿರುವ ಯುವಕರ ಎದೆಯಲ್ಲಿ ಜೀವನ ಪ್ರೀತಿ ಹುಟ್ಟಿಸುವಂತಾಗಲಿ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಿ.ವಿ. ಪರಮಶಿವಮೂರ್ತಿ ತಿಳಿಸಿದರು.

ತರಳಬಾಳುಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ತಿಕೋಟದ ಮಲ್ಲಿಕಾರ್ಜುನ ಸ್ವಾಮೀಜಿ,  ಅನುಷಾ ಕೆ. ಹಿರೇಮಠ, ಆರ್.ಜಿ. ಮುಕುಂದಸ್ವಾಮಿ, ಗಂಗಾವತಿ ಪ್ರಾಣೇಶ್‌, ಅಮೆರಿಕದ ಅಣ್ಣಾಪುರ ಶಿವಕುಮಾರ್‌ ಮಾತನಾಡಿದರು. ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.‌ಆರ್.‌ ಬಸವರಾಜಪ್ಪ ಉಪಸ್ಥಿತರಿದ್ದರು.

ಎ.ಆರ್.‌ ತಿಪ್ಪೇಸ್ವಾಮಿ ಸ್ವಾಗತಿಸಿದರು. ಅರಸೀಕೆರೆಯ ವಚನ ವರ್ಷಿಣಿ ಕಲಾ ತಂಡದವರು ವಚನ ಗೀತೆಗಳನ್ನು ಹಾಡಿದರು. ದಾವಣಗೆರೆಯ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಶಾಲೆಯ ವಿದ್ಯಾರ್ಥಿನಿಯರು ಭರತ ನಾಟ್ಯ, ಸಿರಿಗೆರೆಯ ತರಳಬಾಳು ಕಲಾಸಂಘದ ಮಕ್ಕಳು ಭರತನಾಟ್ಯ, ದಾವಣಗೆರೆ ಅನುಭವ ಮಂಟಪದ ವಿದ್ಯಾರ್ಥಿನಿಯರು ವಚನ ನೃತ್ಯ ಮತ್ತು ನೃತ್ಯ ರೂಪಕ ಹಾಗೂ ಬೆನಕನಹಳ್ಳಿ ವಿನಾಯಕ ಪ್ರೌಢಶಾಲೆ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರದರ್ಶನ ನೀಡಿದರು.

ಬೆನಕನಹಳ್ಳಿಯ ವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗ್ಯದ ಬಳೆಗಾರ ಹೋಗಿಬಾ ತವರಿಗೆ ಜಾನಪದ ನೃತ್ಯ ಪ್ರದರ್ಶಿಸಿದರು
ಬೆನಕನಹಳ್ಳಿಯ ವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗ್ಯದ ಬಳೆಗಾರ ಹೋಗಿಬಾ ತವರಿಗೆ ಜಾನಪದ ನೃತ್ಯ ಪ್ರದರ್ಶಿಸಿದರು

ಸರಳ ಹುಣ್ಣಿಮೆಗೆ ಭವ್ಯತೆಯ ಮೆರುಗು

ತರಳಬಾಳು ಹುಣ್ಣಿಮೆ ಆಚರಣೆಗೆ ಸಿಬಿಎಸ್‌ಇ ಶಾಲೆಯ ಮುಖ್ಯದ್ವಾರವನ್ನು ಬಳಸಿಕೊಂಡು ರೂಪಿಸಿದ್ದ ಸಭಾ ವೇದಿಕೆ ಭಕ್ತರನ್ನು ಆಕರ್ಷಿಸಿತು.

ವಿಶಾಲವಾದ ವೇದಿಕೆಯಲ್ಲಿ ಸಭಾ ಕಾರ್ಯಕ್ರಮಗಳಿಗೆ ನೀಡಿದಷ್ಟೇ ಮಹತ್ವವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನೀಡಲಾಗಿತ್ತು. ವೇದಿಕೆಯ ಹಿಂಬದಿಯಲ್ಲಿ ತರಳಬಾಳು ಹುಣ್ಣಿಮೆ ಆಚರಣೆಯ ವೈಶಿಷ್ಟ್ಯ ಸಾರುವ ಸರ್ವಧರ್ಮಗಳ ಚಿಹ್ನೆಗಳನ್ನು ಅಳವಡಿಸಲಾಗಿತ್ತು. ಅವುಗಳ ಹಿಂಬದಿಯಲ್ಲಿ ವೈವಿಧ್ಯಮಯ ಬಣ್ಣಗಳ ಛತ್ರಿ ಚಾಮರಗಳನ್ನು ಅಳವಡಿಸಲಾಗಿತ್ತು.

ಶಾಲೆಯ ಮುಖ್ಯದ್ವಾರದ ಎರಡೂ ಬದಿಯಲ್ಲಿ ಸಿಮೆಂಟ್‌ ಬಳಸಿ ಬೃಹತ್‌ ಗಾತ್ರದ ಆನೆಗಳನ್ನು ನಿರ್ಮಿಸಸಲಾಗಿತ್ತು. ಅವುಗಳ ಹಿಂಬದಿಯಲ್ಲಿ ಒಂದು ತುದಿಯಲ್ಲಿ ಪರಂಪರೆಯ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಮತ್ತೊಂದು ಬದಿಯಲ್ಲಿ ಶಿವಕುಮಾರ ಸ್ವಾಮೀಜಿಯವರ ಬೃಹತ್‌ ಭಾವಚಿತ್ರಗಳನ್ನು ಅಳವಡಿಸಿದ್ದು ನೋಡುಗರನ್ನು ಸೆಳೆಯಿತು. ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಆವರಣ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು.

ಸಭಾ ಕಾರ್ಯಕ್ರಮದ ವೇದಿಕೆಗೆ ಎದುರಾಗಿ ದಾಸೋಹ ಮಂಟಪ ನಿರ್ಮಿಸಿದ್ದು ಬಫೆ ಮತ್ತು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಕಾಲೇಜು ಆವರಣದಿಂದ ಮಠದ ಮಹಾದ್ವಾರದವರೆಗೆ ವಿದ್ಯುತ್‌ ದೀಪಾಲಂಕಾರ ಶಿವಧ್ವಜಗಳನ್ನು ರಸ್ತೆಯ ಎರಡೂ ಬದಿಗೆ ಕಟ್ಟಲಾಗಿದೆ. ಮಠದ ಮುಖ್ಯದ್ವಾರ ಸಹ ವಿಶೇಷವಾಗಿ ಅಲಂಕೃತಗೊಂಡಿದ್ದು ಐಕ್ಯಮಂಟಪಕ್ಕೆ ಆಕರ್ಷಣೀಯವಾದ ವಿದ್ಯುತ್‌ ಅಲಂಕಾರ ಮಾಡಲಾಗಿದೆ. ಹಲಸಂದೆ ಕಾಳು ಪಲ್ಯ ರೈಸ್‌ಬಾತ್‌ ಪಾಯಸ ಶೇಂಗಾ ಹೋಳಿಗೆ ಅನ್ನಸಾರು ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT