ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೇಖಕನಿಗೆ ಸಾಮಾಜಿಕ ಪ್ರಜ್ಞೆ ಅತ್ಯವಶ್ಯ: ಸಾಹಿತಿ ಬಂಜಗೆರೆ ಜಯಪ್ರಕಾಶ್‌

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್‌ ಅಭಿಮತ
Published : 15 ಸೆಪ್ಟೆಂಬರ್ 2024, 15:55 IST
Last Updated : 15 ಸೆಪ್ಟೆಂಬರ್ 2024, 15:55 IST
ಫಾಲೋ ಮಾಡಿ
Comments

ಚಿತ್ರದುರ್ಗ: ‘ಲೇಖಕ ತನ್ನ ಬರಹದಲ್ಲಿ ಸದಾ ಸಮಾಜಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು. ಕರ್ತವ್ಯ ಪ್ರಜ್ಞೆ, ಬದ್ಧತೆ ಹಾಗೂ ಜಾಗೃತಿಯೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಬೇಕು’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್‌ ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ರಶ್ಮಿ ಪ್ರಕಾಶನದ ವತಿಯಿಂದ ಭಾನುವಾರ ನಡೆದ ‘ಎಚ್.ಲಿಂಗಪ್ಪ ಬದುಕು-ಬರಹ; ಮನಸ್ವಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಸಾಹಿತಿಗೆ ತನ್ನದೇ ಜವಾಬ್ದಾರಿಗಳಿವೆ. ಎಚ್.ಲಿಂಗಪ್ಪ ಅವರು ಇಳಿ ವಯಸ್ಸಿನಲ್ಲಿಯೂ ಉತ್ತಮ ಚಿಂತನೆಗಳೊಂದಿಗೆ ಕೃತಿ ಬರೆಯುತ್ತಿರುವುದು ಸಂತಸದ ವಿಚಾರ. ದಮನಿತರ ಪರ ಸದಾ ಚಿಂತಿಸುವ ಆಲೋಚನೆಯನ್ನಿಟ್ಟುಕೊಂಡು ಕೃತಿಗಳನ್ನು ಬರೆದಿದ್ದಾರೆ’ ಎಂದರು.

‘ದಮನಿತರು, ಶೋಷಣೆಗೆ ಒಳಗಾದವರು ಉನ್ನತ ಸ್ಥಾನಕ್ಕೆ ಹೋದಾಗ ಮಾನವೀಯತೆಯನ್ನೇ ಮರೆಯುತ್ತಾರೆ. ಆದರೆ ಸಾಮಾಜಿಕ ಪ್ರಜ್ಞೆಯನ್ನು ಇಟ್ಟುಕೊಂಡವರು ಎಂದಿಗೂ ತಾವು ನಡೆದುಬಂದ ಹಾದಿಯನ್ನು ಮರೆಯುವುದಿಲ್ಲ. ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಜೀವಿತಾವಧಿಯ ಕೊನೆ ಕಾಲದಲ್ಲಿ ಸಾಕಷ್ಟು ಹಿಂಸೆ ಅನುಭವಿಸಿದರು. ಅಧ್ಯಾತ್ಮ ಸಾಧನವನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಡಬೇಕೆಂಬುದು-ಅವರ ಆಸೆಯಾಗಿತ್ತು’ ಎಂದರು.

ಜಾನಪದ ವಿದ್ವಾಂಸ ಪಿ.ಬಿ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ ‘ಕತೆ, ಕಾದಂಬರಿಗಳನ್ನು ಬರೆಯುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಷಟ್ಪದಿಯಲ್ಲಿ ಕೃತಿ ರಚನೆ ಮಾಡುವವರು ಬಹಳ ಕಡಿಮೆ. 40ಕ್ಕೂ ಹೆಚ್ಚು ಕೃತಿ ಬರೆದಿರುವ ಎಚ್‌.ಲಿಂಗಪ್ಪ ಅವರು ಸಾಹಿತ್ಯ ಕ್ಷೇತ್ರಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದರು.

ಸಾಹಿತಿ ಸಿ.ಶಿವಲಿಂಗಪ್ಪ ಮಾತನಾಡಿ ‘ಸೃಜನಶೀಲ, ಮಾರ್ಗದರ್ಶಿ, ಅಭಿವ್ಯಕ್ತಿ ಬರವಣಿಗೆ ಸಮಾಜಕ್ಕೆ ಬಲು ಮುಖ್ಯವಾಗಿದೆ. ಬರಹಗಾರನ ಬದುಕು ಅಂತಃಸತ್ವದಿಂದ ಕೂಡಿದಾಗ ಮಾತ್ರ ಅನನ್ಯವಾದ ಕೊಡುಗೆ ನೀಡಲು ಸಾಧ್ಯವಾಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿ.ಪರಮೇಶ್ವರಪ್ಪ ಮಾತನಾಡಿ ‘ಎಚ್.ಲಿಂಗಪ್ಪನವರ ಬದುಕು-ಬರಹದಲ್ಲಿ ತಾಯ್ತನ ಅಡಗಿದೆ. ಬುದ್ಧ, ಬಸವ, ಅಂಬೇಡ್ಕರ್‌ ಅವರಲ್ಲಿದ್ದ ತಾಯ್ತನವನ್ನು ಅಧ್ಯಯನ ಮಾಡಿ ಅದನ್ನು ತಮ್ಮ ಬರಹದಲ್ಲಿ ಅಳವಡಿಸಿಕೊಂಡಿದ್ದಾರೆ. ಸಮಾನತೆ ತತ್ವವನ್ನು ಕೃತಿಯಲ್ಲಿ ಕಾಣಬಹುದು’ ಎಂದರು.

ಲೇಖಕ ಎಚ್.ಲಿಂಗಪ್ಪ ಮಾತನಾಡಿ ‘ಬುದ್ದ, ಬಸವ ಪ್ರಜ್ಞೆ, ಬಿ.ಆರ್.ಅಂಬೇಡ್ಕರ್ ಮಾರ್ಗದಲ್ಲಿ ನಂಬಿಕೆಯಿಟ್ಟುಕೊಂಡು ಇಲ್ಲಿಯವರೆಗೂ ಎಲ್ಲಾ ಕೃತಿಗಳನ್ನು ಬರೆದುಕೊಂಡು ಬರುತ್ತಿದ್ದೇನೆ. ನನ್ನ ಬರವಣಿಗೆಗೆ ಗುರುಗಳು, ಶಿಷ್ಯರು ಅಭಿಮಾನಿಗಳ ಸಹಕಾರವಿದೆ. ಕುಂಟುಬದ ಪ್ರೋತ್ಸಾಹ ಇರುವುದರಿಂದ 40ಕ್ಕೂ ಹೆಚ್ಚು ಕೃತಿ ಬರೆಯಲು ಸಾಧ್ಯವಾಗಿದೆ’ ಎಂದರು.

ಪ್ರಾಧ್ಯಾಪಕ ಜೆ.ಕರಿಯಪ್ಪ ಮಾಳಿಗೆ, ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ, ಟಿ.ವಿ.ಸುರೇಶ್‍ಗುಪ್ತ, ಜಿ.ಎಸ್.ಉಜ್ಜಿನಪ್ಪ, ದೊಡ್ಡಮಲ್ಲಯ್ಯ, ಬಿ.ಪಿ.ತಿಪ್ಪೇಸ್ವಾಮಿ,ರಂಗಪ್ಪ, ಸಂಜೀವಕುಮಾರ್ ಪೋತೆ, ಲಕ್ಷ್ಮಿಕಾಂತ್, ಎಸ್.ಎನ್.ಮಹಾಂತೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT