ಮಂಗಳವಾರ, ಆಗಸ್ಟ್ 3, 2021
24 °C
ಭೋವಿ ಜನೋತ್ಸವದಲ್ಲಿ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ

ಚದುರಿದ ಸಮಾಜ ಒಗ್ಗೂಡಿಸಿದ ಇಮ್ಮಡಿ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಾಜ್ಯದ ವಿವಿಧೆಡೆ ಹಂಚಿಹೋಗಿದ್ದ ಸಮಾಜವನ್ನು ಒಗ್ಗೂಡಿಸುವ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಶ್ರಮಿಸುತ್ತಿದ್ದಾರೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.

ಭೋವಿ ಗುರುಪೀಠದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 35ನೇ ಜನ್ಮದಿನೋತ್ಸವದ ಅಂಗವಾಗಿ ಕೋವಿಡ್-19 ಹಿನ್ನೆಲೆಯಲ್ಲಿ ಶನಿವಾರ ಸರಳವಾಗಿ ನಡೆದ ‘ಭೋವಿ ಜನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದವರು.

‘ಸ್ವಾಮೀಜಿ ಸಮಾಜದ ಎಲ್ಲಾ ವರ್ಗವನ್ನು ವಿಶ್ವಾಸದಿಂದ ಕರೆದುಕೊಂಡು ಹೋಗುತ್ತಿದ್ದಾರೆ. ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬುತ್ತಿದ್ದಾರೆ. ಅದೇ ರೀತಿ ನಮ್ಮ ಮಧ್ಯೆ ಏನೇ ಗೊಂದಲ, ಸಮಸ್ಯೆ ಇದ್ದರು ಎಲ್ಲಾರೂ ಒಗ್ಗಟ್ಟಾಗಿ ಸಾಗೋಣ. ಆಗ ಮಾತ್ರ ರಾಜಕೀಯವಾಗಿ ಪ್ರಾಬಲ್ಯ ಸಾಧಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ನನ್ನ ಕ್ಷೇತ್ರಕ್ಕೆ ₹ 1ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿದ್ದೇನೆ. ಇದನ್ನು ಭೋವಿ ಸಮುದಾಯದ ಶಾಸಕನೊಬ್ಬ ಮಾಡುತ್ತಿದ್ದಾರೆ ಎಂಬ ಮನೋಭಾವ ಜನರಲ್ಲಿ ಮೂಡುತ್ತದೆ. ಉತ್ತಮ ಕೆಲಸ ಯಾರು ಮಾಡುತ್ತಾರೋ ಅವರನ್ನು ಸಮಾಜ ಎಂದಿಗೂ ಮರೆಯುವುದಿಲ್ಲ’ ಎಂದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ‘ದಲಿತ, ಹಿಂದುಳಿದ ಸಮುದಾಯಗಳ ಮಠಗಳು ರಾಜಕೀಯ ಸ್ಥಾನಮಾನ ಪಡೆಯಲು ಪ್ರೇರಣಾ ಶಕ್ತಿಯೇ ಡಾ.ಬಿ.ಆರ್. ಅಂಬೇಡ್ಕರ್‌. ಈ ವರ್ಗಗಳ ಜನತೆ ಧಾರ್ಮಿಕ ಶ್ರದ್ಧೆ ಜೊತೆ ಸಾಮಾಜಿಕ ಹೊಣೆಗಾರಿಕೆ, ಮಠದ ಬೆಳವಣಿಗೆಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಲು ಮುಂದಾಗಬೇಕು’ ಎಂದು ಹೇಳಿದರು.

ಕುಚಿಂಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ‘ಮೀಸಲಾತಿ ವಿಚಾರದಲ್ಲಿ ಆತಂಕದಲ್ಲಿದ್ದ ಜನಾಂಗಗಳಿಗೆ ಮೀಸಲಾತಿ ಸಂರಕ್ಷಣಾ ವೇದಿಕೆ ಸ್ಥಾಪಿಸಿ, ಭೋವಿ ಜನಾಂಗ ಸೇರಿ ಕೊರಚ, ಕೊರಮ, ಲಂಬಾಣಿ ಹೀಗೆ ಅನೇಕ ಜಾತಿಗಳಿಗೆ ಧೈರ್ಯತುಂಬಿ ಆ ಸಮುದಾಯಗಳ ಆತ್ಮವಿಶ್ವಾಸ ಬೆಳೆಸುವಲ್ಲಿ ಇಮ್ಮಡಿ ಶ್ರೀ ಪಾತ್ರ ಅನನ್ಯ. ಕಳೆದ 18ವರ್ಷದಿಂದಲೂ ಭೋವಿ ಸಮುದಾಯವನ್ನು ಸುಸಂಸ್ಕೃತ ಸಮಾಜವನ್ನಾಗಿ ಪರಿವರ್ತಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ಸಮಾನತೆಯ ಸಮಾಜಕ್ಕೆ ಒತ್ತು: ‘ಬಸವಾದಿ ಶರಣರ ತತ್ವದ ಅಡಿಯಲ್ಲಿ ಸಮಾನತೆಯ ಸಮಾಜ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಸಮುದಾಯಗಳ ಎಲ್ಲಾ ವಲಯದ ನಾಯಕರು ಸ್ಪಂದಿಸುತ್ತಿರುವ ಕಾರಣ ಈ ವಿಚಾರದಲ್ಲಿ ಸಫಲತೆ ಕಾಣುವತ್ತ ಸಾಗುತ್ತಿದ್ದೇವೆ’ ಎಂದು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

‘ಭೋವಿ ಸಮುದಾಯದ ಏಳಿಗೆಗಾಗಿ ಸಮಾಜದ ಎಲ್ಲರನ್ನೂ ಒಂದುಗೂಡಿಸಿಕೊಂಡು ನಿರಂತರವಾಗಿ ಶ್ರಮಿಸುತ್ತಿರುವ ಫಲವಾಗಿ ಒಂದೊಂದೆ ಕಾರ್ಯಗಳು ಸಫಲವಾಗುತ್ತಿವೆ. ಇದು ನನಗೆ ತೃಪ್ತಿ ನೀಡಿದೆ’ ಎಂದರು.

ಇದೇ ವೇಳೆ ಬಿಇಒ ವೆಂಕಟೇಶ್‌, ಎಂಜಿನಿಯರ್ ಶಿವಮೂರ್ತಿ, ಸಬ್‍ ಇನ್ಸ್‍ಪೆಕ್ಟರ್ ಮಾರುತಿ, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ಎಚ್. ವೆನಲಾ, ಶ್ರೀಹಾಸ್ಟಿನಿ ಅವರನ್ನು ಸನ್ಮಾನಿಸಲಾಯಿತು.

ವಚನಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಕೃಷ್ಣಯಾದವಾನಂದ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಕಿರಣ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಬಸವ ಪ್ರಸಾದ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್. ಲಕ್ಷ್ಮಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು