ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಮುನ್ಸೂಚನೆಯ ರೈತ ಮಿತ್ರ ಪೈಡ್ ಕುಕೂ- ಧರ್ಮಪುರ ಸುತ್ತಲಿನ ಪ್ರದೇಶದಲ್ಲಿ ಪತ್ತೆ

Last Updated 12 ಜುಲೈ 2021, 3:34 IST
ಅಕ್ಷರ ಗಾತ್ರ

ಧರ್ಮಪುರ: ಕೃಷಿ ಚಟುವಟಿಕೆ ಮುಖ್ಯವಾಗಿ ಮಳೆ ಆಧಾರಿತವಾಗಿದೆ. ಮಳೆಯ ಮುನ್ಸೂಚನೆ ಕೊಡುವ ಪಕ್ಷಿ ಎಂದೇ ಪರಿಚಿತವಾಗಿರುವ ಪೈಡ್ ಕುಕೂ (ಜಾಕೋಬಿನ್‌ ಕುಕೂ) ಪಟ್ಟಣದ ಸುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದು, ರೈತರು ಸಂತಸಗೊಂಡಿದ್ದಾರೆ.

ಪೈಡ್‌ ಕುಕೂ ಭಾರತೀಯ ಇತಿಹಾಸದಲ್ಲಿ ಅಪೂರ್ವ ಪಕ್ಷಿ ಎನಿಸಿಕೊಂಡಿದೆ. ಈ ಪಕ್ಷಿ ಕಪ್ಪು ಮತ್ತು ಬಿಳಿ ಬಣ್ಣದಿಂದ ಕೂಡಿದ್ದು, ಅದರ ಜುಟ್ಟು ವರ್ಣರಂಜಿತವಾಗಿದೆ. ಇದರ ವೈಜ್ಞಾನಿಕ ಹೆಸರು ಕ್ಲಮೇಟರ್ ಜಾಕೋಬಿನಸ್.

ಕೀಟ ಬಾಧೆಗೆ ಒಳಗಾಗುವ ಬೆಳೆಗಳನ್ನು ರಕ್ಷಿಸುವ ಬಹುಮುಖ್ಯ ಕೆಲಸವನ್ನು ಇದು ನಿರ್ವಹಿಸುತ್ತವೆ. ಇದು ನಮ್ಮ ಪೂರ್ವಜರಿಗೆ ತಿಳಿದಿದ್ದರಿಂದಲೇತಮ್ಮ ಹೊಲ, ತೋಟದ ಸುತ್ತ ಜೀವವೈವಿಧ್ಯ ಪರಿಸರವನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ, ಈಗ ಅತಿಯಾಗಿ ಬಳಕೆಯಾಗುತ್ತಿರುವ ರಾಸಾಯನಿಕ ಮತ್ತು ಗೊಬ್ಬರದ ಬಳಕೆಯಿಂದ ಪಕ್ಷಿಸಂಕುಲ ನಾಶವಾಗುತ್ತಿದೆ. ಆದರೂ ಅಲ್ಲಲ್ಲಿ ಪಕ್ಷಿಗಳು ಕಾಣಿಸಿಕೊಂಡು ರೈತನಿಗೆ ಕೊಂಚ ಸಮಾಧಾನ ತರುತ್ತವೆ.

ಈ ಪಕ್ಷಿ ಅತಿ ಹೆಚ್ಚಾಗಿ ಆಫ್ರಿಕಾ, ಭಾರತ, ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ ಇದರ ಪ್ರಭೇದ ಎರಡು ರೀತಿಯಿದ್ದು, ಒಂದು ದಕ್ಷಿಣ ಭಾರತದ್ದು. ಮತ್ತೊಂದು ಪ್ರಭೇದ ಆಫ್ರಿಕಾದಿಂದ ಉತ್ತರ ಭಾರತಕ್ಕೆ ವಲಸೆ ಬರುತ್ತದೆ. ಈ ಪಕ್ಷಿ ಕೋಗಿಲೆ ಪ್ರಭೇದಕ್ಕೆ ಸೇರಿದ್ದು, ಸ್ವತಂತ್ರವಾಗಿ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುವುದಿಲ್ಲ. ಬದಲಾಗಿ ಬೇರೆ ಪಕ್ಷಿಗಳು ಕಟ್ಟಿದ ಗೂಡುಗಳಲ್ಲಿ ಮೊಟ್ಟೆ ಇಡುತ್ತದೆ.ಈ ಪಕ್ಷಿ ಮಾನ್ಸೂನ್ ಮಾರುತಗಳ ಜತೆ ಸಂಚರಿಸುತ್ತಾ ಮಳೆಯನ್ನು ತರುತ್ತದೆ ಎಂದು ಭಾರತೀಯರು ನಂಬಿದ್ದಾರೆ. ರೈನ್ ಕ್ಯಾಚರ್ ಎಂದೂ ಹೇಳುತ್ತಾರೆ ಎಂದು ವಿವರಿಸಿದರು ಯುವ ಪಕ್ಷಿ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿಗಳ ಅಧ್ಯಯನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಕಾರ್ತಿಕ್ ಎನ್.ಜೆ.

ಭಾರತೀಯ ವನ್ಯಜೀವಿಗಳ ಅಧ್ಯಯನ ಸಂಸ್ಥೆ, ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ರಿಮೋಟ್ ಸೆನ್ಸಿಂಗ್ ಸಂಸ್ಥೆಗಳುಜಂಟಿ ವೈಜ್ಞಾನಿಕ ಅಧ್ಯಯನ ನಡೆಸಿದ್ದು, ಈ ಪಕ್ಷಿ ಬಗ್ಗೆ ಅತ್ಯಂತ ಕುತೂಹಲಕಾರಿ ಮಾಹಿತಿ ತಿಳಿಸಿವೆ. ಈ ಪಕ್ಷಿ ಯಾವ ಭಾಗದಲ್ಲಿ ಸಂಚರಿಸುತ್ತದೆಯೋ ಆ ಭಾಗದಲ್ಲಿ ಮಳೆ ಬಂದೆ ಬರುತ್ತದೆ ಎಂಬುದನ್ನುಖಾತರಿ ಪಡಿಸಿವೆ. ಕಳೆದ ಒಂದು ವಾರದಿಂದ ಧರ್ಮಪುರ ಸುತ್ತಮುತ್ತ ಈ ಪಕ್ಷಿಗಳು ಕಾಣಿಸಿಕೊಂಡಿದ್ದು, ಇದೇ ಸಂದರ್ಭದಲ್ಲಿ ಇಲ್ಲಿ ಮಳೆ ಬರುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ ಎಂದು ಕಾರ್ತಿಕ್ ಹೇಳುತ್ತಾರೆ.

‘ಈ ಪಕ್ಷಿಯ ಬಗ್ಗೆ ಅನಾದಿಕಾಲದಿಂದಲೂ ಉಲ್ಲೇಖವಿದ್ದು, ಸಮಗ್ರ ಅಧ್ಯಯನ ನಡೆಸಲಾಗಿದೆ. ಇದೊಂದು ರೈತ ಮಿತ್ರ. ಮಳೆಯ ಮುನ್ಸೂಚನೆ ನೀಡುತ್ತದೆ. ಈ ಪಕ್ಷಿ ಬಂತೆಂದರೆ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ನಮ್ಮ ಜನರಲ್ಲಿದೆ’ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಇದರ ಬಗ್ಗೆ ಸಂಶೋಧನೆ ನಡೆಸುತ್ತಿರುವ ಅಂಕೋಲಾದ ವಿದ್ಯಾರ್ಥಿನಿ ಅಪೂರ್ವ ಕುಲಕರ್ಣಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT