ಮಂಗಳವಾರ, ಅಕ್ಟೋಬರ್ 26, 2021
21 °C
ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಮುಂದಿನ ವರ್ಷಕ್ಕೆ ವಾಲಿಬಾಲ್‌ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಐದು ದಿನ ರಾಷ್ಟ್ರೀಯ ಆಹ್ವಾನಿತ ಪುರುಷ ಮತ್ತು ಮಹಿಳೆಯರ ವಾಲಿಬಾಲ್‌ ಟೂರ್ನಿ ಮಳೆಯ ಕಾರಣಕ್ಕೆ ಮುಂದೂಡಲಾಗಿದೆ. ಮುಂದಿನ ಜನವರಿ ಅಥವಾ ಫೆಬ್ರುವರಿಯಲ್ಲಿ ಟೂರ್ನಿ ಆಯೋಜಿಸಲಾಗುವುದು ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಅ.8ರಿಂದ 12ರವರೆಗೆ ಟೂರ್ನಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಂಗಳವಾರ ಮತ್ತು ಬುಧವಾರ ಸುರಿದ ಧಾರಾಕಾರ ಮಳೆಗೆ ಮೈದಾನದಲ್ಲಿ ತೇವಾಂಶ ಹೆಚ್ಚಾಗಿದೆ. ಭಾರತೀಯ ವಾಲಿಬಾಲ್‌ ಫೆಡರೇಷನ್‌ ಪ್ರತಿನಿಧಿಗಳ ಶಿಫಾರಸಿನ ಮೇರೆಗೆ ಟೂರ್ನಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಬಹುನಿರೀಕ್ಷೆಯಲ್ಲಿದ್ದ ಕ್ರೀಡಾಪ್ರೇಮಿಗಳಿಗೆ ಇದರಿಂದ ನಿರಾಸೆಯಾಗಿದೆ’ ಎಂದು ಹೇಳಿದರು.

‘ಚಿತ್ರದುರ್ಗ ನಗರದಲ್ಲಿ ಹತ್ತು ಸೆಂ.ಮೀ ಮಳೆ ಸುರಿದಿದೆ. ವರ್ಷದಲ್ಲಿ ಸುರಿದ ಅತಿ ಹೆಚ್ಚು ಮಳೆ ಇದಾಗಿದೆ. ವಾಲಿಬಾಲ್‌ ಅಂಕಣ, ವೀಕ್ಷಕರ ಗ್ಯಾಲರಿ ಸೇರಿದಂತೆ ಇಡೀ ಮೈದಾನ ಸಂಪೂರ್ಣ ಒದ್ದೆಯಾಗಿದೆ. ಇನ್ನೂ ಮೂರು ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ, ಸಮಿತಿ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ಕ್ರೀಡಾಪಟುಗಳು ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಹರಿಯಾಣ ಮತ್ತು ಸಿಕ್ಕಿಂ ತಂಡಗಳು ಕರ್ನಾಟಕಕ್ಕೆ ಪ್ರಯಾಣ ಬೆಳೆಸಿದ್ದವು. ಟೂರ್ನಿ ರದ್ದಾಗಿದ್ದರಿಂದ ತಮ್ಮ ರಾಜ್ಯಗಳಿಗೆ ಮರಳಿದವು. ಮಳೆಯ ಅಡಚಣೆ ಉಂಟಾಗದೇ ಇದ್ದಿದ್ದರೆ ಶುಕ್ರವಾರ ಬೆಳಿಗ್ಗೆ ಎಲ್ಲ ತಂಡಗಳು ಚಿತ್ರದುರ್ಗಕ್ಕೆ ಆಗಮಿಸುವ ನಿರೀಕ್ಷೆ ಇತ್ತು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಆಹಾರ ಮೇಳ ರದ್ದು

ಉತ್ಸವದ ಅಂಗವಾಗಿ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ, ಆಹಾರ ಮೇಳ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಕೂಡ ರದ್ದುಪಡಿಸಲಾಗಿದೆ.

‘ವಾಲಿಬಾಲ್‌ ಟೂರ್ನಿ ರದ್ದಾಗಿರುವುದರಿಂದ ಇದಕ್ಕೆ ಪೂರಕವಾಗಿ ಆಯೋಜಿಸಿದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ವನ್ಯಜೀವಿ ಛಾಯಾಚಿತ್ರ ಪ್ರದರ್ಶನ, ರಘು ದೀಕ್ಷಿತ್‌ ಸಂಗೀತ ಕಾರ್ಯಕ್ರಮಗಳು ನಡೆಯುವುದಿಲ್ಲ. ಮುರುಘಾ ಮಠದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮಗಳು ನಿಗದಿಯಂತೆ ನಡೆಯುತ್ತವೆ’ ಎಂದು ಸ್ಪಷ್ಟಪಡಿಸಿದರು.

ಶರಣ ಸಂಸ್ಕೃತಿ ಉತ್ಸವದ ಕ್ರೀಡಾ ಸಮಿತಿಯ ಸಮೀವುಲ್ಲಾ, ತಿಮ್ಮಣ್ಣ ವಡಕಲ್, ಸೋಮಣ್ಣ, ಶಿವರಾಂ, ಮಹೀಬುಲ್ಲಾ
ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.