ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಾಂಪುರ | ನಕ್ಷತ್ರ ಆಮೆಗಳ ಬೇಟೆ: ನಾಲ್ವರ ಬಂಧನ

Published 24 ಜೂನ್ 2024, 15:35 IST
Last Updated 24 ಜೂನ್ 2024, 15:35 IST
ಅಕ್ಷರ ಗಾತ್ರ

ಶ್ರೀರಾಂಪುರ: ಸಮೀಪದ ಕಂಚೀನಗರ ಗುಡ್ಡಗಾಡು ಪ್ರದೇಶದಲ್ಲಿ ನಕ್ಷತ್ರ ಆಮೆಗಳನ್ನು ಬೇಟೆಯಾಡಿದ ಸಂಬಂಧ ದಾಳಿ ನಡೆಸಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಕಂಚೀನಗರ ಗ್ರಾಮದ ಹೊರವಲಯದಲ್ಲಿ ವಾಹನವನ್ನು ನಿಲ್ಲಿಸಿಕೊಂಡು ಅನುಮಾನಸ್ಪದವಾಗಿ ಓಡಾಡುತ್ತಿದ್ದ ಅಪರಿಚಿತರನ್ನು ಗಮನಿಸಿದ ಸ್ಥಳೀಯರು ಶ್ರೀರಾಂಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ದಾಳಿ ನಡೆಸಿದ ಪೊಲೀಸರು ಬೇಟೆಗಾರರಿಂದ 35 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡು, ಚಿಕ್ಕಬಳ್ಳಾಪುರ ಮೂಲದ ಮೂವರು ಹಾಗೂ ಕೋಲಾರ ಮೂಲದ ಒಬ್ಬ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. 

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶ್ರೀರಾಂಪುರ ಪೊಲೀಸ್ ‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಈ ನಕ್ಷತ್ರ ಆಮೆಗಳಿದ್ದು, ಅಳಿವಿನ ಅಂಚಿನಲ್ಲಿವೆ. ಇವು ವಿಷ್ಣುವಿನ ವಾಹನಗಳು ಎಂಬ ನಂಬಿಕೆ ಜನರಲ್ಲಿದ್ದು, ಮನೆಯಲ್ಲಿಟ್ಟು ಪೂಜಿಸಿದರೆ ಒಳ್ಳೆಯದಾಗುವುದೆಂಬ ನಂಬಿಕೆ ಇದೆ. ಇದರಿಂದ ಹಿಡಿದು ಮಾರಾಟ ಮಾಡಲಾಗುತ್ತದೆ’ ಎಂದು ವಲಯ ಅರಣ್ಯಧಿಕಾರಿ ಸುನೀಲ್‌ಕುಮಾರ್ ಹೇಳಿದರು.

ಈ ಪ್ರಭೇದದ ಪ್ರಾಣಿಗಳು ಅಳಿವಿನ ಅಂಚಿನಲ್ಲಿರುವುದರಿಂದ ಇವುಗಳನ್ನು ಸಂರಕ್ಷಿಸುವುದು ಎಲ್ಲರ ಹೊಣೆ ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT