ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: 100 ಬಾಲಕರಿಗೆ ಈಜು ತರಬೇತಿ

ವಾಣಿವಿಲಾಸ ಸಾಗರ ಜಲಾಶಯ ಹಿನ್ನೀರು ಪ್ರದೇಶದಲ್ಲಿ ಆಯೋಜನೆ
Last Updated 1 ಅಕ್ಟೋಬರ್ 2020, 8:53 IST
ಅಕ್ಷರ ಗಾತ್ರ

ಹೊಸದುರ್ಗ: ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ 100 ಬಾಲಕರಿಗೆ ಒಂದು ತಿಂಗಳ ಈಜು ತರಬೇತಿ ಶಿಬಿರ ನಡೆಯುತ್ತಿದೆ.

ಜನರಲ್‌ ತಿಮ್ಮಯ್ಯ ಜಲಸಾಹಸ ಅಕಾಡೆಮಿ ಹಾಗೂ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿದೆ.

ಮಾಡದಕೆರೆ ಹೋಬಳಿಯ ಗೂಳಿಹಟ್ಟಿ, ಭೋವಿಹಟ್ಟಿ, ದುಗ್ಗಾವರ, ಡಿ.ಮಲ್ಲಾಪುರ, ನವಿಲುಕಲ್ಲು ಭೋವಿಹಟ್ಟಿ, ಕಂಠಾಪುರ ಸೇರಿ ಇನ್ನಿತರ ಶಾಲೆಗಳ 5ರಿಂದ 10ನೇ ತರಗತಿವರೆಗಿನ 100 ಮಕ್ಕಳನ್ನು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ತರಬೇತಿಗೆ ಆಯ್ಕೆ ಮಾಡಲಾಗಿದೆ. 100 ಮಕ್ಕಳನ್ನು ಮೂರು ತಂಡಗಳಾಗಿ ವಿಂಗಡಿಸಲಾಗಿದೆ. ಒಂದು ತಂಡದಲ್ಲಿ 33 ಮಕ್ಕಳಿದ್ದಾರೆ. ಒಂದು ತಂಡಕ್ಕೆ 10 ದಿನಗಳ‌ವರೆಗೆ ಬೆಳಿಗ್ಗೆ 7ರಿಂದ ಸಂಜೆ 7ರವರೆಗೂ ತರಬೇತಿ ನೀಡಲಾಗುತ್ತಿದೆ.

ಈಗಾಗಲೇ ಮೊದಲನೇ ತಂಡಕ್ಕೆ ಸೆ. 26ರಿಂದ ತರಬೇತಿ ಆರಂಭವಾಗಿದೆ. ತರಬೇತಿಯಲ್ಲಿ ಭಾಗವಹಿಸಿರುವ ಬಾಲಕರಿಗೆ ಉಚಿತ ಊಟ, ವಸತಿಸೌಕರ್ಯ ಕಲ್ಪಿಸಲಾಗಿದೆ. ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರು ಟೀಶರ್ಟ್‌, ಶೂ ಉಚಿತವಾಗಿ ನೀಡಿದ್ದಾರೆ. ಅಕ್ಟೋಬರ್‌ 25ರವರೆಗೂ ತರಬೇತಿ ನಡೆಯಲಿದೆ. ಮಂಗಳೂರು, ಬೆಂಗಳೂರು, ದಾವಣಗೆರೆಯಿಂದ ಬಂದಿರುವ 12 ತರಬೇತಿದಾರರು ಈಜುಗಾರಿಕೆಯ ಕೌಶಲ, ಬೋಟಿಂಗ್‌, ಮನರಂಜನಾ ಆಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ತರಬೇತಿ ನೀಡುತ್ತಿದ್ದಾರೆ.

‘ಕಳೆದ ವರ್ಷ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರು ಜಿಲ್ಲೆಯ 250 ದೈಹಿಕ ಶಿಕ್ಷಕರಿಗೆ ಈಜು ತರಬೇತಿ ಏರ್ಪಡಿಸಿ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಶಾಲಾ ಮಕ್ಕಳಿಗೂ ಈ ತರಬೇತಿ ಅಗತ್ಯ ಎಂಬ ಉದ್ದೇಶದಿಂದ ಈ ಬಾರಿ ಮಾಡದಕೆರೆ ಹೋಬಳಿಯ ಆಯ್ದ ಶಾಲೆಗಳ ಬಾಲಕರಿಗೆ ಆಯೋಜಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿದಾಗ ಹಾಗೂ ನೀರಿನಲ್ಲಿ ಮುಳುಗಡೆಯಾದ ಸಂದರ್ಭದಲ್ಲಿ ತಮ್ಮನ್ನು ಹಾಗೂ ಇತರರನ್ನು ರಕ್ಷಿಸಿಕೊಳ್ಳಲು ನೆರವಾಗಲಿದೆ. ಈ ತರಬೇತಿಯನ್ನು ಮುಂದಿನ ದಿನದಲ್ಲಿ ತಾಲ್ಲೂಕಿನ ಎಲ್ಲ ಶಾಲೆಯ ಮಕ್ಕಳಿಗೂ ವಿಸ್ತರಿಸುವ ಸಾಧ್ಯತೆ ಇದೆ’ ಎಂದು ಯುವಜನ ಸೇವೆ ಹಾಗೂ ಕ್ರೀಡಾ ಅಧಿಕಾರಿ ಎನ್‌.ಟಿ.ದಿವಾಕರ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT