ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಟ್ಯಾಕ್ಸಿ, ಆಟೊಗೆ ಪ್ರಯಾಣಿಕರ ಕೊರತೆ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಚಾಲಕರು, ಜೀವನ ನಿರ್ವಹಣೆಗೆ ಪರದಾಟ
Last Updated 3 ಜೂನ್ 2020, 1:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಾಕ್‌ಡೌನ್‌ ಸಡಿಲಗೊಂಡು ಜನ ಮತ್ತು ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಸಿಕ್ಕರೂ ಆಟೊ ಹಾಗೂ ಟ್ಯಾಕ್ಸಿ ಸೇವೆಯನ್ನು ಜನರು ನಿರೀಕ್ಷಿತಮಟ್ಟದಲ್ಲಿ ಪಡೆಯುತ್ತಿಲ್ಲ. ದುಡಿಮೆ ಇಲ್ಲದೇ ಚಾಲಕರು, ವಾಹನ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊರೊನಾ ಸೋಂಕಿನ ಭೀತಿ ಸಮಾಜವನ್ನು ಆವರಿಸಿಕೊಂಡಿದೆ. ಸಾರ್ವಜನಿಕ ಸಾರಿಗೆ ಬಳಕೆಗೆ ಹಿಂದೇಟು ಹಾಕುವಂತೆ ಮಾಡಿದೆ. ಟ್ಯಾಕ್ಸಿ ಹಾಗೂ ಆಟೊ ಚಾಲಕರು ಸೋಂಕು ನಿವಾರಣೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಪ್ರಯಾಣಿಕರಿಗೆ ವಿಶ್ವಾಸ ಮೂಡುತ್ತಿಲ್ಲ. ಜೀವನ ನಿರ್ವಹಣೆ, ವಾಹನ ಕಂತು, ತೆರಿಗೆ ಹಾಗೂ ವಿಮೆ ಪಾವತಿಗೆ ಚಾಲಕರು ಪರದಾಡುತ್ತಿದ್ದಾರೆ.

ಪ್ರವಾಸೋದ್ಯಮದ ವಿಪುಲ ಅವಕಾಶಗಳನ್ನು ಹೊಂದಿರುವ ಕೋಟೆನಾಡಿನಲ್ಲಿ ನೂರಾರು ಟ್ಯಾಕ್ಸಿಗಳಿವೆ. ಚಿತ್ರದುರ್ಗ ನಗರವೊಂದರಲ್ಲೇ ಸಾವಿರಕ್ಕೂ ಅಧಿಕ ಆಟೊಗಳಿವೆ. ಲಾಕ್‌ಡೌನ್‌ ಘೋಷಣೆ ಆದಾಗಿನಿಂದ ಈ ವಾಹನಗಳು ಮನೆ ಬಳಿ ನಿಂತಿದ್ದವು. ವಾಹನ ಸಂಚಾರಕ್ಕೆ ಸರ್ಕಾರ ಅವಕಾಶ ಕಲ್ಪಿಸಿದ ಬಳಿಕ ರಸ್ತೆಗೆ ಇಳಿದಿವೆ. ಆದರೆ, ಪ್ರಯಾಣಿಕರು ಮಾತ್ರ ವಾಹನಗಳ ಬಳಿ ಸುಳಿಯುತ್ತಿಲ್ಲ.

‘ನಿತ್ಯ ಬೆಳಿಗ್ಗೆ ಸ್ಟ್ಯಾಂಡ್‌ಗೆ ಬಂದು ಟ್ಯಾಕ್ಸಿಯನ್ನು ಪಾಳಿಗೆ ನಿಲ್ಲಿಸುತ್ತೇವೆ. ಲಾಕ್‌ಡೌನ್‌ ತೆರವಾದ ಆರಂಭದ ಕೆಲ ದಿನ ಒಂದಷ್ಟು ಜನರು ಬಾಡಿಗೆ ಸೇವೆ ಪಡೆದರು. ಹಲವು ದಿನಗಳಿಂದ ಖಾಲಿ ಕುಳಿತಿದ್ದೇವೆ. ಕಾರಿನ ಮೇಲಿನ ದೂಳು ಕೊಡವಿ ಖಾಲಿ ಕೈಯಲ್ಲಿ ಮನೆಗೆ ಮರಳುತ್ತಿದ್ದೇವೆ. ದಿನ ಕಳೆದಂತೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಟ್ಯಾಕ್ಸಿ ಚಾಲಕ ಮೊಹಮ್ಮದ್ ಇಮ್ತಿಯಾಜ್‌.

ಲಾಕ್‌ಡೌನ್‌ ನಿಯಮಾವಳಿಗಳನ್ನು ಸರ್ಕಾರ ಸಡಿಲಗೊಳಿಸಿದಾಗ ಟ್ಯಾಕ್ಸಿ ಹಾಗೂ ಆಟೊ ಚಾಲಕರು ಹರ್ಷಗೊಂಡಿದ್ದರು. ಆದರೆ, ಈ ಸಂತಸ ಬಹುದಿನಗಳವರೆಗೆ ಉಳಿಯಲಿಲ್ಲ. ಸೋಂಕಿನ ಬಗೆಗಿನ ಭೀತಿಯಿಂದ ಅನೇಕರು ಬಾಡಿಗೆ ವಾಹನ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ನಿತ್ಯ ₹ 300ರಿಂದ ₹ 1 ಸಾವಿರದವರೆಗೆ ದುಡಿಯುತ್ತಿದ್ದ ಆಟೊ ಚಾಲಕರಿಗೆ ನೂರು ರೂಪಾಯಿ ಕೂಡ ಸಿಗುತ್ತಿಲ್ಲ. ರಸ್ತೆಯಲ್ಲಿ ಸಂಚರಿಸುವ ಆಟೊಗಳಲ್ಲಿ ಪ್ರಯಾಣಿಕರು ಕಾಣುವುದು ಅಪರೂಪವಾಗಿದೆ.

‘ವಾಹನ ಸಾಲದ ಕಂತು ಪಾವತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ವಿನಾಯಿತಿ ಕಲ್ಪಿಸಿದೆ. ಆದರೆ, ಬಡ್ಡಿ ಹೊರೆಯಾಗುವ ಆತಂಕವಿದೆ. ಸರ್ಕಾರ ₹ 5 ಸಾವಿರ ನೆರವು ನೀಡುವ ಬದಲು ವಿಮೆ ಹಾಗೂ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದರೆ ಅನುಕೂಲವಾಗುತ್ತದೆ’ ಎಂಬುದು ಟ್ಯಾಕ್ಸಿ ಚಾಲಕ ಸನಾವುಲ್ಲಾ ಖಾನ್‌ ಅಭಿಪ್ರಾಯ.

ನೈಜ ಚಾಲಕರು ಅತಂತ್ರ

ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಆಟೊ ಹಾಗೂ ಟ್ಯಾಕ್ಸಿ ಚಾಲಕರ ಖಾತೆಗೆ ₹ 5 ಸಾವಿರ ನೆರವು ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ, ನೈಜ ಚಾಲಕರು ಈ ಸಹಾಯಧನದಿಂದ ವಂಚಿತರಾಗುತ್ತಿದ್ದಾರೆ.

‘ಸೇವಾಸಿಂಧು’ ಜಾಲತಾಣದ ಮೂಲಕ ಆಸಕ್ತರು ಅರ್ಜಿ ಸಲ್ಲಿಸಬೇಕು. ಆಟೊ ಹಾಗೂ ಟ್ಯಾಕ್ಸಿಯ ದಾಖಲೆಗಳನ್ನು ಒದಗಿಸಬೇಕು. ಬಹುತೇಕ ಆಟೊ ಮತ್ತು ಟ್ಯಾಕ್ಸಿಯ ಮಾಲೀಕ– ಚಾಲಕ ಬೇರೆ ಬೇರೆ ಆಗಿರುತ್ತಾರೆ. ಹೀಗಾಗಿ, ವಾಹನದ ದಾಖಲೆಗಳನ್ನು ಚಾಲಕರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ.

‘ಚಾಲಕರಾಗಿ ಕೆಲಸ ಮಾಡುವವರಿಗೆ ಇದು ನೆರವಾಗುತ್ತಿಲ್ಲ. ಚಾಲಕರ ಬ್ಯಾಡ್ಜ್‌ ಹೊಂದಿದ್ದರೂ ಅರ್ಜಿ ಸ್ವೀಕೃತವಾಗುತ್ತಿಲ್ಲ. ಸರ್ಕಾರ ನೀಡುತ್ತಿರುವ ಸಹಾಯಧನ ನೈಜ ಚಾಲಕರಿಗೆ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎನ್ನುತ್ತಾರೆ ಟ್ಯಾಕ್ಸಿ ಚಾಲಕ ಸನಾವುಲ್ಲಾ ಖಾನ್‌.

ಸೋಂಕು ತಡೆಗೆ ಮುನ್ನೆಚ್ಚರಿಕೆ

ಆಟೊ ಹಾಗೂ ಟ್ಯಾಕ್ಸಿ ಚಾಲಕರು ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ. ಸಾರಿಗೆ ಇಲಾಖೆ ಹಾಗೂ ಪೊಲೀಸರು ರೂಪಿಸಿದ ನಿಯಮಾವಳಿಗಳನ್ನು ಪಾಲನೆ ಮಾಡುತ್ತಿದ್ದಾರೆ.

ಕಾರಿನಲ್ಲಿ ಮೂವರು ಹಾಗೂ ಆಟೊದಲ್ಲಿ ಇಬ್ಬರು ಪ್ರಯಾಣಿಸಲು ಅವಕಾಶವಿದೆ. ಹಿಂದೆ ಪಡೆಯುತ್ತಿದ್ದ ದರದಲ್ಲಿಯೇ ಸೇವೆ ಒದಗಿಸುತ್ತಿವೆ. ಪ್ರಯಾಣಿಕರ ಕೈಗಳನ್ನು ಸ್ಯಾನಿಟೈಸ್‌ ಮಾಡಿ ಆಸೀನರಾಗಲು ಅವಕಾಶ ಕಲ್ಪಿಸಲಾಗುತ್ತಿದೆ. ಪ್ರಯಾಣಿಕರು ಹಾಗೂ ಚಾಲಕರ ನಡುವೆ ವಿಂಡ್‌ ಶೀಲ್ಡ್‌ ಅಳವಡಿಕೆ ದುಬಾರಿಯಾಗುತ್ತದೆ ಎಂಬ ಕಾರಣಕ್ಕೆ ಸೀಟುಗಳಿಗೆ ಪ್ಲಾಸ್ಟಿಕ್‌ ಕವರ್‌ ಅಳವಡಿಸಲಾಗಿದೆ. ಸೇವೆ ಒದಗಿಸಿದ ಬಳಿಕ ಟ್ಯಾಕ್ಸಿಯನ್ನು ಶುಚಿಗೊಳಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT