ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರಿಗೆರೆ: ಆಸೆಪಟ್ಟು ಬೆಳೆಸಿದ ತೋಟ ಉಳಿಸಿಕೊಳ್ಳುವ ಸವಾಲು

ರಾಜ ಸಿರಿಗೆರೆ
Published 12 ಮೇ 2024, 5:41 IST
Last Updated 12 ಮೇ 2024, 5:41 IST
ಅಕ್ಷರ ಗಾತ್ರ

ಸಿರಿಗೆರೆ: ಸಿರಿಗೆರೆಯ ಬುಕ್ಕರಾಯನಕೆರೆಗೆ ಕೂಗಳತೆ ದೂರದಲ್ಲಿರುವ ಆರ್.‌ ಶಿವಮೂರ್ತಯ್ಯ ಅವರ ಅಡಿಕೆ ತೋಟದಲ್ಲಿನ 15 ಕೊಳವೆಬಾವಿಗಳು ಬತ್ತಿಹೋಗಿವೆ. ಸಮೃದ್ಧ ಅಡಿಕೆ ಫಸಲು ಇರುವ ನಾಲ್ಕು ಎಕರೆ ತೋಟದಲ್ಲಿ 2,300 ಅಡಿಕೆ ಗಿಡಗಳು ಇವೆ. ಈಗ ಅವರು ದಿನವೂ 22,000 ಲೀಟರ್‌ ಸಾಮರ್ಥ್ಯದ 4 ಟ್ಯಾಂಕರ್‌ ನೀರನ್ನು ತಂದು ತೋಟ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರು ದಿನವೂ ₹ 12,000 ಖರ್ಚು ಮಾಡುತ್ತಿದ್ದಾರೆ.

ಬಸವನಶಿವನಕೆರೆ ಗ್ರಾಮದಲ್ಲಿ ಮೂರು ಎಕರೆ ಅಡಿಕೆ ತೋಟ ಮಾಡಿರುವ ಉದಯ್‌, ತೋಟದಲ್ಲಿನ 4 ಕೊಳವೆಬಾವಿಗಳಲ್ಲಿ ಒಂದು ಹನಿಯೂ ನೀರು ಬಾರದಿರುವುದರಿಂದ ಚಿಂತಾಕ್ರಾಂತರಾಗಿದ್ದಾರೆ. ತಂದೆ ಮಾಡಿದ ತೋಟ ಉಳಿಸಿಕೊಳ್ಳಲೇಬೇಕೆಂಬ ಹಟಕ್ಕೆ ಬಿದ್ದು ಚಿತ್ರದುರ್ಗದಿಂದ ಮೂರು ಟ್ಯಾಂಕರ್‌ನಲ್ಲಿ ದಿನವೂ ನೀರು ತಂದು ಗಿಡಗಳಿಗೆ ಉಣಿಸುತ್ತಿದ್ದಾರೆ. ಇದಕ್ಕಾಗಿ ವಾರಕ್ಕೆ ₹ 50,000 ಖರ್ಚು ಮಾಡುತ್ತಿದ್ದಾರೆ.

ಚಿಕ್ಕಬೆನ್ನೂರು ಗ್ರಾಮದ ವಿಜಯಕುಮಾರ್‌ ಅವರ 4 ಎಕರೆ ಅಡಿಕೆ ತೋಟದಲ್ಲಿನ ಕೊಳವೆಬಾವಿಯೂ ಬರಿದಾಗಿದ್ದು, ಹೊಸದಾಗಿ ಕೊರೆಯಿಸಿರುವ ಕೊಳವೆಬಾವಿಯಲ್ಲಿ 1 ಇಂಚಿಗಿಂತಲೂ ಕಡಿಮೆ ನೀರು ಬರುತ್ತಿದೆ. ಎಲ್ಲಿ ನೀರು ಸಿಗುತ್ತಿದೆಯೋ ಅಲ್ಲಿಂದ ತೋಟಕ್ಕೆ ಹಾಯಿಸುವುದೇ ಅವರ ನಿತ್ಯದ ಕೆಲಸವಾಗಿಬಿಟ್ಟಿದೆ.

ಇವು ಸಿರಿಗೆರೆ ಆಸುಪಾಸಿನ ಗ್ರಾಮಗಳ ಅಡಿಕೆ ಬೆಳೆಗಾರರ ಸಂಕಟಗಳು.. ಇಂತಹ ನೂರಾರು ಬಗೆಯ ನೋವನ್ನು ಇಲ್ಲಿಯ ಕೃಷಿಕರು ನಿತ್ಯವೂ ಅನುಭವಿಸುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಸುರಿದ ಮಳೆಯಿಂದ ಕೆರೆ ಕಟ್ಟೆಗಳು, ಹಳ್ಳ–ಕೊಳ್ಳ ಗಳು ತುಂಬಿದ್ದವು. ಸುತ್ತಲಿನ ಹಳ್ಳಿಗಳಲ್ಲಿ ಅಡಿಕೆ ಬೆಳೆದು ಶ್ರೀಮಂತ ರಾದ ಕೃಷಿಕರನ್ನು ಕಂಡು

ಪ್ರೇರೇಪಿತರಾಗಿದ್ದ ಹಲವು ರೈತರು ಸಾವಿರಾರು ಎಕರೆ ಜಮೀನಿನಲ್ಲಿ ತಾವು ಅಡಿಕೆ ಬೆಳೆಯಲು ಮುಂದಾದರು. ಪರಿಣಾಮ ಒಂದೊಂದು ಗ್ರಾಮದಲ್ಲಿಯೂ ಕನಿಷ್ಠ 100 ಕೊಳವೆಬಾವಿಗಳು ಕೊರೆಯಲ್ಪಟ್ಟವು. ಈಗ ಬಹುತೇಕವು ಬತ್ತಿವೆ.

ಬೇರೆ ಬೆಳೆಗಳಿಗೆ ಹೋಲಿಸಿದರೆ ಅಡಿಕೆ ಆರಾಮದಾಯಕ ಕೃಷಿ. ಇದಕ್ಕೆ ಸಿಗುವ ಬೆಲೆಯೂ ಅಪರಂಜಿ. ಹೀಗಾಗಿ ಈ ವರ್ಷ ಸಾವಿರಾರು ಎಕರೆಗಳಲ್ಲಿ ಅಡಿಕೆ ಕೃಷಿಯ ವಿಸ್ತರಣೆ ಆಗಿದೆ.

ಭರಮಸಾಗರ ಏತ ನೀರಾವರಿ ಯೋಜನೆ ಕಾರ್ಯಗತಗೊಂಡು ಸುತ್ತಲಿನ 43 ಕೆರೆಗಳಿಗೆ ನೀರು ಬಂದದ್ದೇ ತಡ, ಯೋಜನೆ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಯುವ ಹುಮ್ಮಸ್ಸು ರೈತರಲ್ಲಿ ಇಮ್ಮಡಿಯಾಯಿತು. ಕಂಡಕಂಡಲ್ಲಿ ಕೊಳವೆಬಾವಿ ಕೊರೆಯುವ ಕೆಲಸ ಹಗಲು ರಾತ್ರಿ ಎನ್ನದೆ 3 ತಿಂಗಳ ಕಾಲ ಮುಂದುವರಿಯಿತು.

ಆದರೂ ಈಗ ಬಸವನಶಿವನಕೆರೆ, ಬೇಡರ ಶಿವನಕೆರೆ, ಬ್ಯಾಲಹಾಳ್‌, ಅಳಗವಾಡಿ, ಓಬಳಾಪುರ, ಓಬವ್ವನಾಗತಿಹಳ್ಳಿ ಮುಂತಾದ ಕಡೆ 1000 ಅಡಿ ಕೊರೆದರೂ ಒಂದು ಹನಿ ನೀರೂ ಸಿಗುತ್ತಿಲ್ಲ. ಕಳೆದ ಬಾರಿಯ ಮುಂಗಾರು ವೈಫಲ್ಯ ಕೃಷಿ ಚಟುವಟಿಕೆಗಳಿಗೆ ಹೊಡೆತ ನೀಡಿತು.

ಏತ ನೀರಾವರಿಯಿಂದ ಕೆರೆಗಳಿಗೆ ಹರಿಸಿದ ನೀರು ಇದೀಗ ಖಾಲಿ ಖಾಲಿ. ಪರಿಣಾಮ ಅಂತರ್ಜಲವೂ ಪಾತಾಳದತ್ತ ಮುಖ ಮಾಡಿದೆ.

ಸಸಿಗಳಿಗಿಲ್ಲ ಬೇಡಿಕೆ

ಕಳೆದ ಮುಂಗಾರಿನಲ್ಲಿ ಅಡಿಕೆ ಸಸಿಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿತ್ತು. ಅಗತ್ಯವಿರುವವರು ಮುಗಿಬಿದ್ದು ಸಸಿಗಳನ್ನು ಖರೀದಿಸಿದ್ದರು. ಸಸಿಗಳಿಗೆ ಈ ವರ್ಷವೂ ಬೇಡಿಕೆ ಬರಬಹುದೆನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶೆಯಾಗಿದೆ. ಸಸಿಗಳು ಬಿಸಿಲಿನಲ್ಲಿ ಒಣಗುತ್ತಿವೆ.

ಕೆರೆಗಳ ತಪ್ಪಲಿನಲ್ಲಿ ನೀರು ಮಾರಾಟ

ಕಾತ್ರಾಳು ಬಳ್ಳೇಕಟ್ಟೆ, ಚಿತ್ರದುರ್ಗ, ಸಿರಿಗೆರೆ ಮುಂತಾದ ಕಡೆ ಕೆರೆಗಳ ಸಮೀಪವೇ ಇರುವ ತೋಟಗಳ ಕೆಲವೇ ಕೊಳವೆಬಾವಿಗಳಲ್ಲಿ ತುಸು ಹೆಚ್ಚು ನೀರು ಸಿಗುತ್ತಿದೆ. ತಮ್ಮ ತೋಟಗಳಿಗೆ ಬಳಸಿಕೊಂಡು ಹೆಚ್ಚುವರಿ ನೀರನ್ನು ಮಾರಾಟ ಮಾಡುವ ಕೆಲಸವೂ ನಡೆಯುತ್ತಿದೆ. ನೀರು ಲಭ್ಯವಿರುವ ಇಂತಹ ಕಡೆ ಹತ್ತಾರು ಟ್ಯಾಂಕರ್‌ಗಳು ಸರತಿಯಲ್ಲಿ ನಿಂತು ನೀರು ತುಂಬಿಕೊಳ್ಳುವುದು ಸಾಮಾನ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT