ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಕುಲಕ್ಕೆ ಸಂವಿಧಾನ ಶ್ರೇಷ್ಠ ಗ್ರಂಥ

ಅಂಬೇಡ್ಕರ್ ಪರಿನಿರ್ವಾಣ, ಮೌಢ್ಯ ವಿರೋಧಿ ದಿನಾಚರಣೆಯಲ್ಲಿ ಮುರುಘಾ ಶರಣರು
Last Updated 6 ಡಿಸೆಂಬರ್ 2020, 14:53 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದೇಶ ಹಾಗೂ ಮನುಕುಲಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನ ಅತ್ಯಂತ ಶ್ರೇಷ್ಠ ಗ್ರಂಥವಾಗಿದೆ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಇಲ್ಲಿನ ಯಂಗಪ್ಪನ ಕಟ್ಟೆಯ ರುದ್ರಭೂಮಿಯಲ್ಲಿ ಸತೀಶ್‌ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ಡಾ.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಮೌಢ್ಯ ವಿರೋಧಿ ಪರಿವರ್ತನಾ ದಿನ’ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

‘ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಹೀಗೆ ದೇಶದೊಳಗೆ ಅನೇಕ ಧರ್ಮಗಳಿವೆ. ಇದರೊಳಗೆ ಅನೇಕ ಸಮುದಾಯಗಳು ಇವೆ. ಸರ್ವರಿಗೂ ಒಳಿತನ್ನು ಬಯಸುವ ಪ್ರತ್ಯೇಕವಾದ ಧರ್ಮ ಗ್ರಂಥಗಳಿವೆ. ಇವುಗಳನ್ನು ಶ್ರದ್ಧಾ, ಭಕ್ತಿಯಿಂದ ಪಾಲಿಸುವವರೂ ನಮ್ಮ ನಡುವೆ ಇದ್ದಾರೆ. ಆದರೆ, ಎಲ್ಲರಿಗೂ ಸಮಾನ
ವಾದ ಗ್ರಂಥವನ್ನು ನೀಡಿದ ಕೀರ್ತಿ ಬಾಬಾ
ಸಾಹೇಬರಿಗೆ ಸಲ್ಲುತ್ತದೆ’ ಎಂದರು.

‘ಯಾವ ಗ್ರಂಥವೂ ಮೌಢ್ಯಕ್ಕೆ ಉತ್ತೇಜನ ನೀಡಿಲ್ಲ. ಆದರೆ, ಆಚರಣೆ ನೆಪದಲ್ಲಿ ಕೆಲವರು ಮೌಢ್ಯ ಬಿತ್ತುವ ಕೆಲಸ ಸಮಾಜದಲ್ಲಿ ಮಾಡಿದ್ದಾರೆ. ಹಾಗೆಯೇ ಈಗಲೂ ಮಾಡುತ್ತಲೂ ಇದ್ದಾರೆ. ಸ್ವಾರ್ಥಕ್ಕೆ ಬಳಸಿಕೊಂಡವರು ಇದ್ದಾರೆ. ಮನುಷ್ಯ ಎಂದಿಗೂ ಮೌಢ್ಯಕ್ಕೆ ಒಳಗಾಗಬಾರದು. ವೈಚಾರಿಕ ಪ್ರಜ್ಞೆ ಅಳವಡಿಸಿಕೊಂಡು ಸರಿ-ತಪ್ಪನ್ನು ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಾಜ್‌ಪೀರ್, ಮಾಜಿ ಅಧ್ಯಕ್ಷ ಪಾತ್ಯರಾಜನ್, ಮುಖಂಡರಾದ ಬಿ.ಟಿ. ಜಗದೀಶ್, ಅಂಜಿನಪ್ಪ, ಮರುಳಾರಾಧ್ಯ, ಟಿಪ್ಪು ಖಾಸಿಂ ಆಲಿ, ಮುನಿಯಪ್ಪ, ಪಾಪಯ್ಯ ಇದ್ದರು.

ಸ್ಮಶಾನ ಕೆಟ್ಟದಲ್ಲ: ಶರಣರು

‘ಸ್ಮಶಾನದ ಬಗ್ಗೆಯೂ ಕೆಲವರಲ್ಲಿ ಮೌಢ್ಯವಿದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಹಿಂದೆ ಮುರುಘಾಮಠದಿಂದ ವಿವಾಹ ಕೂಡ ಮಾಡಿಸಿದ್ದೇವೆ. ಅದು ಕೂಡ ಪವಿತ್ರವಾದ ಸ್ಥಳ’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

‘ಮನುಷ್ಯ ಮೃತಪಟ್ಟು ಅಂತಿಮಯಾತ್ರೆ ಬಳಿಕ ಸಿಗುವ ಶಾಶ್ವತ ನೆಲೆಯೇ ಸ್ಮಶಾನ. ಇದು ಖಂಡಿತ ಕೆಟ್ಟದಾದ ಸ್ಥಳವಲ್ಲ. ಯಾರೂ ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡಬೇಡಿ. ಇಲ್ಲಿ ಪ್ರೇತಾತ್ಮ ಇರುತ್ತವೆ ಎಂಬ ಭಯ, ಅಂಜಿಕೆ, ಭ್ರಮೆ, ಮೌಢ್ಯದಿಂದ ಮೊದಲು ಹೊರಬನ್ನಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT