ಶನಿವಾರ, ಜನವರಿ 29, 2022
23 °C
3 ದಶಕಗಳಿಂದ ಸೇವೆ: ಪೊಲೀಸರಿಗೆ ನೆರವು ನೀಡುವ ತಂದೆ–ಮಕ್ಕಳು

ಚಿತ್ರದುರ್ಗ | ಅಪಘಾತದಲ್ಲಿ ಮೃತಪಟ್ಟವರ ಶವ ತೆಗೆಯುವ ಕಾಯಕ

ಸುವರ್ಣಾ ಬಸವರಾಜ್, ಹಿರಿಯೂರು Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವ ಹಿರಿಯೂರು ತಾಲ್ಲೂಕಿನಲ್ಲಿ ಕೆಲವೊಮ್ಮೆ ಸರಣಿ ಅಪಘಾತಗಳು ಸಂಭವಿಸಿದಾಗ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು, ಮೃತದೇಹಗಳನ್ನು ರಸ್ತೆ ಯಿಂದ ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಗುತ್ತದೆ.

ಇಂತಹ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳು ಕರೆದ ತಕ್ಷಣ ಒಂದಿಷ್ಟೂ ಭಯಪಡದೆ ಪೊಲೀಸರಿಗೆ ನೆರವು ನೀಡುವ ಕಾಯಕವನ್ನು ಮೂರು ದಶಕಗಳಿಂದ ನಡೆಸಿಕೊಂಡು ಬಂದಿರುವ ತಂದೆ–ಮಕ್ಕಳು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಇದ್ದಾರೆ.

ಹೊಟ್ಟೆಪಾಡಿಗಾಗಿ ವಾರದ ಸಂತೆಯಲ್ಲಿ ತೆಂಗಿನಕಾಯಿ ಮಾರಾಟ ಮಾಡುವುದು, ಪರಿಚಯದ ಹೋಟೆಲ್‌ಗಳಿಗೆ ನಿಯಮಿತವಾಗಿ ಕಾಯಿ ಕೊಡುವ ವೃತ್ತಿಯ ಇಬ್ರಾಹಿಂ ಸಾಬ್ (55) ಹಾಗೂ ಅವರ ಪುತ್ರರಾದ ಖಲೀಲ್ ಮತ್ತು ಇಷು ಅಂತಹ ಅಪರೂಪದ ವ್ಯಕ್ತಿಗಳು. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಜಿಲ್ಲಾ ಪೊಲೀಸ್ ಇಲಾಖೆ ಚಿತ್ರದುರ್ಗದಲ್ಲಿ ಈಚೆಗೆ ಸನ್ಮಾನಿಸಿದ್ದಾರೆ.

ಆದಿವಾಲ ಗ್ರಾಮದಲ್ಲಿ ಮುಸ್ಲಿಂ ಜನಾಂಗದ ಯಾವುದೇ ವ್ಯಕ್ತಿ ಮೃತಪಟ್ಟರೆ ಶವಸಂಸ್ಕಾರಕ್ಕೆ ಗುಂಡಿಗಳನ್ನು ತಂದೆ–ಮಕ್ಕಳು ತೆಗೆಯುತ್ತಾರೆ. ಈ ಕಾಯಕವೇ ಅವರಿಗೆ ಹೆದ್ದಾರಿಯಲ್ಲಿ ಆಗಾಗ್ಗೆ ಸಂಭವಿಸುವ ಅಪಘಾತಗಳಲ್ಲಿ ಮರಣ ಹೊಂದಿದವರ ಶವಗಳನ್ನು ತೆಗೆಯಲು ಪ್ರೇರಣೆ ನೀಡಿದೆ.

ಕರುಳು ಹಿಂಡುವ ದೃಶ್ಯಗಳು: ‘ಹೆದ್ದಾರಿಯಲ್ಲಿ ಸಂಭವಿಸುವ ಕೆಲವು ಅಪಘಾತಗಳು ವಾರಗಟ್ಟಲೆ ನಮ್ಮ ಮನಸ್ಸನ್ನು ಕಾಡಿದ್ದಿದೆ. ವಿಶೇಷವಾಗಿ ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ಅರೆಬರೆ ಬೆಂದ ಸ್ಥಿತಿಯಲ್ಲಿರುವವರು ಕೂಗಿಕೊಳ್ಳುವಾಗ, ದೇಹಗಳು ನಜ್ಜುಗುಜ್ಜಾಗಿ ಅದನ್ನು ಬದುಕಿದ್ದವರು ನೋಡಿ ರೋದಿಸುವಾಗ ಕಣ್ಣಂಚಿನಲ್ಲಿ ನೀರು ಗೊತ್ತಿಲ್ಲದೇ ಬಂದು ಹೋಗುತ್ತದೆ’ ಎಂದು ಇಬ್ರಾಹಿಂ ಸಾಬ್ ಹೇಳುತ್ತಾರೆ. 

‘ಹಿಂದಿನ ವರ್ಷ ಕಸ್ತೂರಿ ರಂಗಪ್ಪನಹಳ್ಳಿ ಸಮೀಪ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಬಸ್ಸೊಂದು ಸಂಪೂರ್ಣ ಸುಟ್ಟುಹೋಗಿತ್ತು. ಹತ್ತಾರು ಪ್ರಯಾಣಿಕರು ಕುಳಿತ ಜಾಗದಲ್ಲಿಯೇ ಸುಟ್ಟು ಕರಕಲಾಗಿದ್ದರು. ಗಾಯಗೊಂಡವರನ್ನು ಆಂಬ್ಯುಲೆನ್ಸ್‌ಗೆ ಹಾಕುವಾಗ, ಅಳಿದುಳಿದ ಶವಗಳನ್ನು ತೆಗೆಯುವಾಗ, ನಮಗಾದ ಯಾತನೆ ಅಷ್ಟಿಷ್ಟಲ್ಲ. ಸುಮಾರು 30 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಎಷ್ಟು ಅಪಘಾತ ಸ್ಥಳಗಳಿಗೆ ಹೋಗಿದ್ದೇನೆ ಎಂಬ ಲೆಕ್ಕ ಇಟ್ಟಿಲ್ಲ’ ಎನ್ನುತ್ತಾರೆ ಅವರು.

‘ಹೆದ್ದಾರಿ ವಿಸ್ತರಣೆಗೂ ಮೊದಲು ಅಪಘಾತಗಳ ಸಂಖ್ಯೆ ಹೆಚ್ಚಿತ್ತು. ಹಿಂದಿನ 10–12 ವರ್ಷದಿಂದ ಅಪಘಾತ ಪ್ರಕರಣಗಳು ಕಡಿಮೆಯಾಗಿದೆ. ಅವೈಜ್ಞಾನಿಕ ಅಂಡರ್‌ಪಾಸ್‌ಗಳು, ರಸ್ತೆ ವಿಭಜಕದ ಮಧ್ಯದ ದೀಪಗಳು ಬೆಳಗದಿರುವುದು, ಕುಡಿದು ವಾಹನ ಚಲಾಯಿಸುವುದು, ರಸ್ತೆ ಚೆನ್ನಾಗಿದೆ ಎಂದು ಮಿತಿಮೀರಿದ ವೇಗದಲ್ಲಿ ವಾಹನ ಓಡಿಸುವುದು ಅಪಘಾತಗಳಿಗೆ ಪ್ರಮುಖ ಕಾರಣಗಳು. ಸರಣಿ ಅಪಘಾತಗಳು ಸಂಭವಿಸುತ್ತಿರುವುದರ ಬಗ್ಗೆ ವೈಜ್ಞಾನಿಕ ಅಧ್ಯಯನ ಅಗತ್ಯವಿದೆ. ನನ್ನ ಕೈಯಲ್ಲಿ ಶಕ್ತಿ ಇರುವ ತನಕ ಈಗಿನ ಕಾಯಕ ಮುಂದುವರಿಯುತ್ತದೆ. ನನ್ನ ನಂತರ ಮಕ್ಕಳು ಮುಂದುವರಿಸಿಕೊಂಡು ಹೋಗುವರೆಂಬ ವಿಶ್ವಾಸವಿದೆ’ ಎನ್ನುತ್ತಾರೆ ಇಬ್ರಾಹಿಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.