ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಗಡಿಯಲ್ಲಿ ಅವಳಿ ರಾಜ್ಯದವರ ಸಾಮರಸ್ಯ

ಭಾಷೆ, ಸಂಸ್ಕೃತಿ, ಆಚಾರಕ್ಕೆ ಧಕ್ಕೆಯಾಗದ ಗಡಿ
Last Updated 31 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಮೊಳಕಾಲ್ಮುರು: ರಾಜ್ಯಗಳ ಗಡಿಯಲ್ಲಿ ಭಾಷೆ, ಸಂಸ್ಕೃತಿಗೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಚಿತ್ರದುರ್ಗ ಜಿಲ್ಲೆಯ ಮಟ್ಟಿಗೆ ಸೀಮಾಂಧ್ರ ಗಡಿಯಲ್ಲಿ ಜನರುಅನ್ಯೋನ್ಯ ಜೀವನ ನಡೆಸುತ್ತಿರುವುದು ವಿಶೇಷ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಹಿರಿಯೂರು, ಚಳ್ಳಕೆರೆ ತಾಲ್ಲೂಕುಗಳ ಗ್ರಾಮಗಳು ಸೀಮಾಂಧ್ರಕ್ಕೆ ಅಂಟಿಕೊಂಡಿವೆ. ಇಲ್ಲಿ ಈವರೆಗೆ ಭಾಷೆ, ಸಂಸ್ಕೃತಿ, ಹಬ್ಬಗಳ ಆಚರಣೆಗೆ ಸಂಬಂಧಪಟ್ಟಂತೆ ಯಾವುದೇ ಭಿನ್ನಾಭಿಪ್ರಾಯಗಳು ಎದುರಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಎರಡೂ ಗಡಿಯಲ್ಲಿ ವಾಸಿಸುವ ಜಾತಿಗಳ ಪ್ರಾಬಲ್ಯ ಒಂದೇ ಆಗಿರುವುದು ಹಾಗೂ ಸಂಬಂಧಗಳ ಕೊಡುಕೊಳ್ಳುವಿಕೆ.

‘ಗಡಿಯಲ್ಲಿ ಪರಿಶಿಷ್ಟ ಜಾತಿ, ವರ್ಗ ಮತ್ತು ಗೊಲ್ಲ ಜನಾಂಗದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಮ್ಯಾಸನಾಯಕ ಜನಾಂಗದವರ ಮನೆಯಲ್ಲಿ ತಾಯಿ ಭಾಷೆ ಎರಡೂ ರಾಜ್ಯದಲ್ಲಿ ತೆಲುಗು ಆಗಿದೆ. ಎರಡೂ ರಾಜ್ಯದಲ್ಲಿ ಕನ್ನಡ ಮಿಶ್ರಿತತೆಲುಗು ಮಾತನಾಡುತ್ತಾರೆ. ಆಂಧ್ರದಲ್ಲಿ ಗೊಲ್ಲ ಜನಾಂಗದವರ ಮಾತೃಭಾಷೆ ಕನ್ನಡ. ರಾಯದುರ್ಗದಲ್ಲಿ ಶೇ 40ರಷ್ಟು ವ್ಯಾವಹಾರಿಕ ಭಾಷೆ ತೆಲುಗು ಇದ್ದರೆ, ಮೊಳಕಾಲ್ಮುರು ಮತ್ತು ಚಳ್ಳಕೆರೆಯಲ್ಲಿ ಶೇ 30-40 ವ್ಯವಹಾರಿಕ ಭಾಷೆ ಕನ್ನಡ’ ಎಂದು ಹಿರಿಯ ಸಾಹಿತಿ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಹೇಳುತ್ತಾರೆ.

ರಾಯದುರ್ಗ, ಕಲ್ಯಾಣದುರ್ಗ ತಾಲ್ಲೂಕುಗಳ ಜನತೆ ಕೌಟುಂಬಿಕ ಸಂಬಂಧಗಳು ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕುಗಳಲ್ಲಿ ವ್ಯಾಪಕವಾಗಿ ನಡೆದಿದೆ.ಬಿತ್ತನೆ ಬೀಜ, ರಸಗೊಬ್ಬರ, ಮೇವು, ಕಾಳು-ಕಡಿ ಕೊಟ್ಟು, ಪಡೆಯವುದು, ಜಾನುವಾರು ಕೊಟ್ಟು ಪಡೆಯುವಿಕೆ ನೂರಾರು ವರ್ಷಗಳಿಂದನಡೆದುಕೊಂಡು ಬಂದಿದೆ. ಇದು ಭಾಷೆ ಬಾಂಧವ್ಯವನ್ನು ಗಟ್ಟಿ ಮಾಡಿದೆ ಎಂದು ಅವರು ವಿವರಿಸಿದರು.

‘ಭಾಷಾವಾರು ವಿಂಗಡಣೆಗೂ ಮುನ್ನ ರಾಜ್ಯದ ಗಡಿ ಸೀಮಾಂಧ್ರದ ಪ್ರಸಿದ್ಧ ಕದರಿವರೆಗೆ ಇತ್ತು. ಅಲ್ಲಿನ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕನ್ನಡಕ್ಕೆಪ್ರಥಮ ಆದ್ಯತೆ ನೀಡಲಾಗಿದೆ. ಮಂತ್ರಾಲಯದಲ್ಲೂ ಕನ್ನಡಕ್ಕ ಪ್ರಥಮಸ್ಥಾನವಿದೆ. ಅದೇ ರೀತಿ ನಮ್ಮ ತಾಲ್ಲೂಕುಗಳ ದೇವಸ್ಥಾನಗಳಲ್ಲಿಯೂ ತೆಲುಗು ಬರಹಗಳನ್ನು ಕಾಣಬಹುದು. ಪ್ರಸಿದ್ಧ ಗೌರಸಮುದ್ರ ಮಾರಮ್ಮದೇವಿ ಜಾತ್ರೆ, ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆ, ನುಂಕಿಮಲೆ ಜಾತ್ರೆ, ಕಂಪಳರಂಗ ಸ್ವಾಮಿ ಜಾತ್ರೆ, ಹಿರೇಹಳ್ಳಿ ದಡ್ಡಿ ಸೂರನಾಯಕ ಜಾತ್ರೆ, ಚಳ್ಳಕೆರೆಯ ಎತ್ತಿನ ಜಾತ್ರೆಗಳನ್ನು ಕಡ್ಡಾಯವಾಗಿ ಎರಡೂ ರಾಜ್ಯದವರು ಸೇರಿ ಮಾಡುವುದು ಇದಕ್ಕೆ ಸಾಕ್ಷಿ’ ಎಂದು ಉಪನ್ಯಾಸಕಿ ಡಾ. ಪ್ರಜ್ಞಾ ಹೇಳಿದರು.

‘ಮಡಕಶಿರಾ ಭಾಗದಲ್ಲಿ ಕನ್ನಡ ಹೆಚ್ಚು ವ್ಯಾಪಿಸಿಕೊಂಡಿದೆ. ಇಲ್ಲಿ ಕನ್ನಡ ಶಾಲೆಗಳಿವೆ. ಅನಂತಪುರ ಜಿಲ್ಲೆಯಲ್ಲಿ ಹತ್ತಾರು ಕನ್ನಡ ಮಾದ್ಯಮ ಶಾಲೆಗಳಿದ್ದು, ಸೌಲಭ್ಯಗಳನ್ನು ಎದುರು ನೋಡುತ್ತಿವೆ. ನಮ್ಮ ರಾಜ್ಯ ಸರ್ಕಾರ ಕನ್ನಡ ಪಠ್ಯಪುಸ್ತಕ ಮಾತ್ರ ನೀಡುತ್ತಿದೆ. ಈ ಶಾಲೆ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ, ನಮ್ಮಲ್ಲಿನ ಶೈಕ್ಷಣಿಕ ಸೌಲಭ್ಯಗಳ ವಿಸ್ತರಣೆ ಆಗ್ರಹ ಕೇಳಿಬರುತ್ತಿದ್ದು, ಜನಪ್ರತಿನಿಧಿಗಳು ಗಮನಹರಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT