ಬುಧವಾರ, ಜೂನ್ 29, 2022
25 °C
ಮೀಸಲಾತಿ ಪ್ರಮಾಣ ಶೇ 7.5ಕ್ಕೆ ಏರಿಕೆಗೆ ಪಟ್ಟು

ಚಿತ್ರದುರ್ಗ: ಮೊಳಗಿದ ವಾಲ್ಮೀಕಿ ಸಮುದಾಯದ ಕಹಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಏರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ವಾಲ್ಮೀಕಿ ಸಮಾಜ ಶುಕ್ರವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು.

ಸಮುದಾಯದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನಡೆಸುತ್ತಿರುವ ಧರಣಿಯನ್ನು ಬೆಂಬಲಿಸಿ ಕರೆ ನೀಡಿದ ಹೋರಾಟಕ್ಕೆ ಜಿಲ್ಲೆಯ ಎಲ್ಲೆಡೆ ವಾಲ್ಮೀಕಿ ಸಮಾಜ ಬೀದಿಗೆ ಇಳಿಯಿತು.

ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿಯೂ ಪ್ರತಿಭಟನೆಗಳು ನಡೆದವು. ಸಾರಿಗೆ ಸಚಿವ ಶ್ರೀರಾಮುಲು ಹಾಗೂ ಸಮುದಾಯದ ಶಾಸಕರು ರಾಜೀನಾಮೆ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಆಗ್ರಹಿಸಿದರು.

ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿವಿಧೆಡೆಯಿಂದ ಬಂದಿದ್ದ ಸಮುದಾಯದ ಮುಖಂಡರು ಇಲ್ಲಿಂದ ಮೆರವಣಿಗೆ ಹೊರಟು ಬಿ.ಡಿ.ರಸ್ತೆ, ಪ್ರವಾಸಿಮಂದಿರದ ಮೂಲಕ ಒನಕೆ ಓಬವ್ವ ವೃತ್ತ ತಲುಪಿದರು. ಪ್ರತಿಭಟನೆಯಲ್ಲಿ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಬಳಿಕ ಬಹಿರಂಗ ಸಭೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನೆ ಮಾಡಿದರು.

‘ಸಮುದಾಯದ ಜನಪ್ರತಿನಿಧಿಗಳು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ. ಇವರು ರಾಜೀನಾಮೆ ನೀಡಿ ಹೊರಗೆ ಬಂದಿದ್ದರೆ ಸರ್ಕಾರದ ಮೇಲೆ ಒತ್ತಡ ನಿರ್ಮಾಣವಾಗುತ್ತಿತ್ತು. ಒಮ್ಮೆಯೂ ಮನವಿ ಪತ್ರ ನೀಡದ ಸಮುದಾಯಕ್ಕೆ ಶೇ 10 ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ವಾಲ್ಮೀಕಿ ಸಮುದಾಯವನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕ ಅಂಜಿನಪ್ಪ ಮಾತನಾಡಿ, ‘ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಮೀಸಲಾತಿ ಪ್ರಮಾಣ ಏರಿಕೆ ಆಗಬೇಕಿದೆ. ಸರ್ಕಾರ ಮೀಸಲಾತಿ ಪ್ರಮಾಣ ಏರಿಕೆ ಮಾಡುವಲ್ಲಿ ಇದೇ ನಿರ್ಲಕ್ಷ್ಯ ಮುಂದುವರಿಸಿದರೆ ಪರಿಣಾಮ ಎದುರಿಸಲಿದೆ’ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್ ಮಾತನಾಡಿ, ‘ರಾಜನಹಳ್ಳಿಶ್ರೀ ನೇತೃತ್ವದ ಹೋರಾಟಕ್ಕೆ ನೂರು ದಿನ ಮುಗಿದಿದೆ. ಇನ್ನೂ ಸರ್ಕಾರ ಸ್ಪಂದಿಸದೇ ಇರುವುದು ಅಕ್ಷಮ್ಯ. ನಾಯಕ ಸಮುದಾಯದ
ಜನಪ್ರತಿನಿಧಿಗಳು ರಾಜೀನಾಮೆ ನೀಡಿ ಹೋರಾಟಕ್ಕೆ ಕೈಜೋಡಿಸಬೇಕು’ ಎಂದು ಆಗ್ರಹಿಸಿದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಸಮುದಾಯದ ಮುಖಂಡರಾದ ಸೊಂಡೆಕೊಳ ಶ್ರೀನಿವಾಸ್, ನರಸಿಂಹಮೂರ್ತಿ, ಡಿ.ಗೋಪಾಲಸ್ವಾಮಿ ನಾಯಕ, ಸಿರಿಗೆರೆ ತಿಪ್ಪೇಶ್, ಜೆಡಿಎಸ್ ಮುಖಂಡ ಡಿ. ಯಶೋಧರ, ಕಾಂಗ್ರೆಸ್‌ ಮುಖಂಡ ಸಂಪತ್ ಕುಮಾರ್, ಬಿಜೆಪಿಯ ರತ್ನಮ್ಮ, ಮದಕರಿ ವಿದ್ಯಾಸಂಸ್ಥೆಯ ಸಂದೀಪನಾಯಕ, ರಾಜಾಮದಕರಿ ನಾಯಕ ಇದ್ದರು.

*
ಮೀಸಲಾತಿ ಹೋರಾಟ ಮೂರು ದಶಕಗಳಿಂದ ನಡೆಯುತ್ತಿದೆ. ಈವರೆಗೆ ಅಧಿಕಾರ ನಡೆಸಿದ ಯಾವ ಸರ್ಕಾರಗಳೂ ಮೀಸಲಾತಿ ಹೆಚ್ಚಳಕ್ಕೆ ಪ್ರಯತ್ನಿಸಿಲ್ಲ.
-ಎಚ್‌.ಜೆ. ಕೃಷ್ಣಮೂರ್ತಿ, ಅಧ್ಯಕ್ಷ, ನಾಯಕ ಸಮಾಜದ ಜಿಲ್ಲಾ ಘಟಕ

*
ವಾಲ್ಮೀಕಿ ಸಮುದಾಯ ಮೊದಲಿನಿಂದಲೂ ತ್ಯಾಗಕ್ಕೆ ಹೆಸರು. ಮೀಸಲಾತಿ ಹಕ್ಕಿಗೆ ಬೀದಿಗೆ ಇಳಿದಿದ್ದೇವೆ. ಸಮುದಾಯದ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡಬಾರದು.
-ವೆಂಕಟೇಶ್‌, ನಗರಸಭೆ ಸದಸ್ಯ, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು