ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಸರ್ಕಾರಿ ಶಾಲೆಯತ್ತ ಚಿತ್ತ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಶಿಕ್ಷಣ ವ್ಯವಸ್ಥೆಗೆ ಕೊರೊನಾ ಸೋಂಕು ಅನಿರೀಕ್ಷಿತ ಆಘಾತ ನೀಡಿದೆ. ಮಕ್ಕಳು ಶಾಲೆ ಮೆಟ್ಟಿಲು ತುಳಿಯದೇ ವರ್ಷಗಳೇ ಉರುಳುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಆಶಾಕಿರಣವೊಂದು ಮೂಡಿದೆ. ಸರ್ಕಾರಿ ಶಾಲೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.

ಖಾಸಗಿ ಶಾಲೆಯ ಪ್ರವೇಶಕ್ಕೆ ದುಂಬಾಲು ಬೀಳುತ್ತಿದ್ದ ಸ್ಥಿತಿ ಈಗ ಎಲ್ಲಿಯೂ ಕಾಣುತ್ತಿಲ್ಲ. ಸೀಟು ಪಡೆಯಲು ಲಾಬಿ ಮಾಡುವ ಅನಿವಾರ್ಯ ಕೂಡ ಇಲ್ಲ. ಪ್ರವೇಶಾತಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಖಾಸಗಿ ಶಾಲೆಗಳೂ ಪರದಾಡುತ್ತಿವೆ. ಕೋವಿಡ್‌ ಸಂದರ್ಭದಲ್ಲಿ ಆರ್ಥಿಕ ವ್ಯವಸ್ಥೆಯ ಮೇಲೆ ಬಿದ್ದ ಪೆಟ್ಟು ಇಂತಹದೊಂದು ಬದಲಾವಣೆಗೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ 2020ರ ಮಾರ್ಚ್‌ ತಿಂಗಳಲ್ಲಿ ಶಾಲೆಗಳ ಬಾಗಿಲು ಮುಚ್ಚಿದವು. ಸೋಂಕಿನ ತೀವ್ರತೆ ಕಡಿಮೆಯಾದರೂ ಶಾಲೆಗಳು ಬಾಗಿಲು ತೆರೆಯುವುದು ಕೊಂಚ ತಡವಾಯಿತು. ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾದರು. ಪ್ರಾಥಮಿಕ ಶಾಲೆಯ ಮಕ್ಕಳಿಗೆ ‘ವಿದ್ಯಾಗಮ’ ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಯಿತು. ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮನೆಯಲ್ಲೇ ಉಳಿದು ಪಾಠ ಕೇಳುವಂತಾಯಿತು.

ದುಬಾರಿ ಶುಲ್ಕ ಪಾವತಿಸಿ ಖಾಸಗಿ ಶಾಲೆ ಪ್ರವೇಶಾತಿ ಪಡೆದರೂ ತರಗತಿಗಳು ನಡೆಯುವುದು ಅನುಮಾನ. ಶೇ 70ರಷ್ಟು ಶುಲ್ಕವನ್ನು ಮಾತ್ರ ಪಡೆಯಬೇಕು ಎಂಬ ಸೂಚನೆ ಸರ್ಕಾರದಿಂದ ಹೊರಬಿದ್ದರೂ ಹಲವು ಶಿಕ್ಷಣ ಸಂಸ್ಥೆಗಳು ಪೂರ್ಣ ಪ್ರಮಾಣದ ಶುಲ್ಕಕ್ಕೆ ಪೋಷಕರನ್ನು ಪೀಡಿಸಿವೆ. ಆನ್‌ಲೈನ್‌ ಮೂಲಕ ಮಾಡುವ ಪಾಠಕ್ಕೆ ಈ ಪರಿ ಶುಲ್ಕ ಪಾವತಿಸಬೇಕೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. ಇದರ ವಿರುದ್ಧ ಕೆಲ ಪೋಷಕರು ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಶುಲ್ಕದ ಹೊರೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.

ನಿರಂತರ ಕಲಿಕೆಗೆ ಒತ್ತು: ಸರ್ಕಾರಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. 1ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಚಂದನ ವಾಹಿನಿಯ ಮೂಲಕ ಬೋಧನೆ ನಡೆಯುತ್ತಿದೆ. ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸಲಾಗುತ್ತಿದೆ. ಚಿಕ್ಕ ಮಕ್ಕಳ ಕೈಗೆ ಮೊಬೈಲ್‌ ನೀಡಿ ಆನ್‌ಲೈನ್‌ ಶಿಕ್ಷಣ ಕೇಳುವಂತೆ ಪೀಡಿಸುವುದಕ್ಕಿಂತ ಇದು ಉತ್ತಮ ಎಂಬ ಅಭಿಪ್ರಾಯ ಪೋಷಕರಲ್ಲಿ ಬೆಳೆದಿದೆ. 1, 5 ಹಾಗೂ 8ನೇ ತರಗತಿಯ ಪ್ರವೇಶಾತಿಯಲ್ಲಿ ಗಣನೀಯ ಏರಿಕೆ
ಕಂಡುಬಂದಿದೆ.

‘ಸೇತುಬಂಧ ಶಿಕ್ಷಣದ ಜೊತೆಗೆ ಅಧ್ಯಯನ ಸಾಮಗ್ರಿಗಳನ್ನು ಸ್ಥಳೀಯವಾಗಿ ಸಿದ್ಧಪಡಿಸಿ ಒದಗಿಸಲಾಗಿದೆ. 8, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ನೀಡಿದ ಅಧ್ಯಯನ ಸಾಮಗ್ರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 1ರಿಂದ 7ನೇ ತರಗತಿಯ ಮಕ್ಕಳಿಗೆ ವಿಶೇಷ ಪುಸ್ತಕಗಳನ್ನು ಒದಗಿಸಲಾಗಿದೆ. ಹಿರಿಯೂರಿನಲ್ಲಿ ‘ಇಂಚರ’, ಹೊಳಲ್ಕೆರೆಯಲ್ಲಿ ‘ನಿರಂತರ’, ಮೊಳಕಾಲ್ಮುರು ‘ಸಿಂಚನ’ ಚಳ್ಳಕೆರೆ ‘ಕಲಿಕಾ ಸಿಂಚನ’ ಚಿತ್ರದುರ್ಗ ‘ಕಲಿಕಾ ಸಂಜೀವನಿ’ ಪುಸ್ತಕ ನೀಡಲಾಗಿದೆ. ಮಕ್ಕಳಿಗೆ ಅಭ್ಯಾಸದ ಹಾಳೆ ನೀಡಿ ಕಲಿಕೆಯಲ್ಲಿ ತೊಡಗಿಸಲಾಗುತ್ತಿದೆ’ ಎನ್ನುತ್ತಾರೆ ಡಿಡಿಪಿಐ ಕೆ.ರವಿಶಂಕರ್‌ ರೆಡ್ಡಿ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರವೂ ಪಣ ತೊಟ್ಟಿದೆ. ಶಾಲೆಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೊಠಡಿ ದುರಸ್ತಿಗೊಳಿಸುವ ಕಾರ್ಯವೂ ಭರದಿಂದ ಸಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಹೊರಬೀಳುತ್ತಿದೆ. ಇದು ಕೂಡ ಸರ್ಕಾರಿ ಶಾಲೆಗಳತ್ತ ಒಲವು ಹೆಚ್ಚಾಗಲು ಕಾರಣವಾಗಿದೆ ಎಂಬುದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಂಬಿಕೆ.

ಶೇ 96 ಉತ್ತೀರ್ಣ: ತರಗತಿಯಿಂದ ತರಗತಿಗೆ ಉತ್ತೀರ್ಣ ಹೊಂದುವವರ ಪ್ರಮಾಣ ಜಿಲ್ಲೆಯಲ್ಲಿ ಶೇ 96ರಷ್ಟಿದೆ. ರಾಜ್ಯದಲ್ಲೇ ಚಿತ್ರದುರ್ಗ ಮೂರನೇ ಸ್ಥಾನದಲ್ಲಿದೆ. ಶೇ 97ರಷ್ಟು ಉತ್ತೀರ್ಣ ಪ್ರಮಾಣ ಹೊಂದಿದ ಕಾರವಾರ ಪ್ರಥಮ ಹಾಗೂ ಶಿರಸಿ ದ್ವಿತೀಯ ಸ್ಥಾನದಲ್ಲಿವೆ.

‘ಶೈಕ್ಷಣಿಕ ವರ್ಷ ಕಳೆದಂತೆ ವಿದ್ಯಾರ್ಥಿಗಳು ತರಗತಿಯಿಂದ ತರಗತಿಗೆ ಬಡ್ತಿ ಪಡೆಯಬೇಕು. ಶಿಕ್ಷಣದಿಂದಲೂ ಅವರು ಹೊರಗೆ ಉಳಿಯಬಾರದು. ಇದನ್ನು ಶಿಕ್ಷಣ ಇಲಾಖೆ ಪ್ರತಿ ವರ್ಷವೂ ಗಮನಿಸಿ ಶ್ರೇಯಾಂಕ ನೀಡುತ್ತದೆ. ಶೇ 100ರಷ್ಟು ಸಾಧನೆ ಮಾಡುವ ಗುರಿಯನ್ನು ಹೊಂದಲಾಗಿದೆ’ ಎನ್ನುತ್ತಾರೆ ರವಿಶಂಕರ ರೆಡ್ಡಿ.

ಉತ್ತೀರ್ಣತೆಯ ಪ್ರಮಾಣ ಜಿಲ್ಲೆಯ ಅನುದಾನರಹಿತ ಶಾಲೆಗಳಲ್ಲಿಯೇ ಕಡಿಮೆ ಇದೆ. ಇದಕ್ಕೆ ಶುಲ್ಕ ಪಾವತಿಯ ವಿಚಾರವೂ ತಳುಕು ಹಾಕಿಕೊಂಡಿದೆ.
ಶುಲ್ಕ ಪಾವತಿಸದ ಅಥವಾ ಕಂತು ಬಾಕಿ ಉಳಿಸಿಕೊಂಡ ಮಕ್ಕಳಿಗೆ ಮತ್ತೊಂದು ತರಗತಿಗೆ ಬಡ್ತಿ ನೀಡಲು ಆಡಳಿತ ಮಂಡಳಿ ನಿರಾಕರಿಸುತ್ತಿದೆ. ಈ ತೊಡಕು ನಿವಾರಿಸುವ ಪ್ರಯತ್ನವೂ ನಡೆಯುತ್ತಿದೆ.

ವಿಶೇಷ ದಾಖಲಾತಿ ಆಂದೋಲನ

ಮಕ್ಕಳು ಶಾಲೆಯಿಂದ ಹೊರಗೆ ಉಳಿಯಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ರೂಪಿಸಿದ ವಿಶೇಷ ದಾಖಲಾತಿ ಆಂದೋಲನ ಹೆಚ್ಚು ಫಲಪ್ರದವಾಗಿದೆ.

ಜೂನ್‌ ತಿಂಗಳಿಂದ ಆರಂಭವಾದ ಈ ಆಂದೋಲನದ ಫಲವಾಗಿ ಅತಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಈ ಆಂದೋಲವನ್ನು ಇನ್ನೂ ಕೆಲ ತಿಂಗಳು ಮುಂದುವರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಪ್ರತಿ ಶಾಲೆಯ ವ್ಯಾಪ್ತಿಯ ಹಳ್ಳಿ, ಬಡಾವಣೆ, ಗಲ್ಲಿಗೆ ಭೇಟಿ ನೀಡುವ ಶಿಕ್ಷಕರು, ಮಕ್ಕಳು ಮತ್ತು ಪೋಷಕರ ಮನವೊಲಿಸುವಲ್ಲಿ ಸಫಲರಾಗುತ್ತಿದ್ದಾರೆ. ಸ್ಥಳದಲ್ಲೇ ಅರ್ಜಿಯನ್ನು ಭರ್ತಿ ಮಾಡಿ ಪ್ರವೇಶಾತಿ ಕಲ್ಪಿಸುತ್ತಿದ್ದಾರೆ.

ಮಕ್ಕಳ ಪ್ರವೇಶಕ್ಕೆ ಬೇಡಿಕೆ

ಹೊಸದುರ್ಗ: ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲೆಯಲ್ಲಿ ಗುಣಮಟ್ಟದ ಬೋಧನೆ, ತರಬೇತಿ ಹಾಗೂ ಅತ್ಯುತ್ತಮ ಸೌಲಭ್ಯ ಸಿಗುತ್ತಿರುವುದರಿಂದ ಮಕ್ಕಳ ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿದೆ.

1946ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಉತ್ತಮ ಸಾಧಕರಾಗಿದ್ದಾರೆ. ಅತ್ಯಾಧುನಿಕ ವಿಜ್ಞಾನ ಪಾರ್ಕ್, ಸ್ಮಾರ್ಟ್ ಕ್ಲಾಸ್ ರೂಮ್, ಮಾಹಿತಿ ತಂತ್ರಜ್ಞಾನ ಹಾಗೂ ಬ್ಯುಟಿ ವೆಲ್‌ನೆಸ್ ತರಬೇತಿ, ರಾಷ್ಟೀಯ ಸೇವಾ ಯೋಜನೆ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಳ, ಸುಸಜ್ಜಿತ ಗ್ರಂಥಾಲಯ, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿಶಾಲವಾದ ಆಟದ ಮೈದಾನ ಸೇರಿ ಇನ್ನಿತರ ಸೌಲಭ್ಯ ಹೊಂದಿದೆ.

ಈ ಶಾಲೆಯಲ್ಲಿ 23 ಅನುಭವಿ ಶಿಕ್ಷಕರಿದ್ದಾರೆ. ಎನ್ಎಂ‌ಎಂಎಸ್, ಎನ್‌ಟಿಎಸ್‌ಇ, ಸಾಧನಾ ಹಾಗೂ ತಪಸ್ ಪರೀಕ್ಷೆಗೆ ತರಬೇತಿ ನೀಡುವ ವ್ಯವಸ್ಥೆ ಇದೆ. ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಪ್ರತಿ ವರ್ಷವೂ ಈ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆ ತೋರಿಸುತ್ತಿದ್ದಾರೆ. ಇದರಿಂದಾಗಿ ಈ ಶಾಲೆಯು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಆಕರ್ಷಿಸುತ್ತಿದೆ.

‘ಪಟ್ಟಣ ಹಾಗೂ ತಾಲ್ಲೂಕಿನ 50ಕ್ಕೂ ಹೆಚ್ಚು ಹಳ್ಳಿಯ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಬಡವರು ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವುದರಿಂದ ಹೆಚ್ಚು ಹಣ ಕೊಟ್ಟು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಆಗುತ್ತಿಲ್ಲ. ಇಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಹಾಗೂ ಸರ್ಕಾರಿ ಸೌಲಭ್ಯ ಪಡೆದು ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಚ್ಚಿನ ಪೋಷಕರು ಪ್ರವೇಶಾತಿಗೆ ಬರುತ್ತಿದ್ದಾರೆ. ಈಗಾಗಲೇ 280 ವಿದ್ಯಾರ್ಥಿಗಳು ದಾಖಲಾಗಿದ್ದು, 8, 9, 10ನೇ ತರಗತಿ ಸೇರಿ ಒಟ್ಟು 810 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇದು ಜಿಲ್ಲೆಯಲ್ಲಿಯೇ ಸರ್ಕಾರಿ ಪ್ರೌಢಶಾಲೆಯ ಅತ್ಯಧಿಕ ದಾಖಲೆಯಾಗಿದೆ’ ಎಂದು ಉಪಪ್ರಾಂಶುಪಾಲ ಎಚ್.ನಾಗೇಂದ್ರಪ್ಪ ವಿವರಿಸಿದರು.

ಅನುದಾನ ರಹಿತ ಶಾಲೆಗಳ ಪ್ರವೇಶ ಕುಸಿತ

ಹಿರಿಯೂರು: 2020–21ನೇ ಸಾಲಿಗೆ ಹೋಲಿಸಿದರೆ 2021–22ನೇ ಸಾಲಿನಲ್ಲಿ ಅನುದಾನ ರಹಿತ ಶಾಲೆಗಳಿಗಿಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಹೆಚ್ಚು ಮಕ್ಕಳು ಪ್ರವೇಶ ಪಡೆದಿದ್ದಾರೆ.

ಒಂದರಿಂದ ಹತ್ತನೇ ತರಗತಿವರೆಗೆ 2021–22ನೇ ಸಾಲಿನಲ್ಲಿ ಅನುದಾನ ರಹಿತ ಶಾಲೆಗಳಿಗೆ 685 ಮಕ್ಕಳು ಕಡಿಮೆ ಆಗಿದ್ದರೆ, ಅನುದಾನಿತ ಶಾಲೆಗಳಿಗೆ 1,022 ಹಾಗೂ ಸರ್ಕಾರಿ ಶಾಲೆಗಳಿಗೆ 991 ಹೆಚ್ಚು ಮಕ್ಕಳು ಪ್ರವೇಶ ಪಡೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ತಿಳಿಸಿದ್ದಾರೆ.

‘ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ತರಗತಿ ನೀಡಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ಸಮನಾಗಿ ಸರ್ಕಾರಿ ಶಾಲೆಗಳಲ್ಲಿ ಆನ್‌ಲೈನ್ ತರಗತಿ ನಡೆಸಲಾಗುತ್ತಿದೆ. ಶಿಕ್ಷಣದ ಗುಣಮಟ್ಟ ಸುಧಾರಿಸಿದೆ’ ಎನ್ನುತ್ತಾರೆ ನಾಗಭೂಷಣ್. 

‘ಸರ್ಕಾರಿ ಶಾಲೆ ಖುಷಿ ತಂದಿದೆ’

ಹೊಳಲ್ಕೆರೆ: ‘ಕಾನ್ವೆಂಟ್‌ನಲ್ಲಿ ಓದುತ್ತಿದ್ದ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದು, ನಮಗೆ ಖುಷಿ ತಂದಿದೆ’ ಎಂದು ಚೀರನಹಳ್ಳಿಯ ಗೃಹಿಣಿ ಅನಿತಾ ಅಭಿಪ್ರಾಯಪಟ್ಟಿದ್ದಾರೆ.

‘ಪಟ್ಟಣದ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಮಗ ಸಿ.ಡಿ.ನೂತನ್‌ನನ್ನು ನಮ್ಮೂರಿನ ಸರ್ಕಾರಿ ಶಾಲೆಗೆ ಸೇರಿಸಿದ್ದೇನೆ. ಕೋವಿಡ್‌ನಿಂದ ಲಾಕ್‌ಡೌನ್‌ ಘೋಷಿಸಲಾಯಿತು. ಶಾಲೆಗಳು ಮುಚ್ಚಿದ್ದರಿಂದ ಮಕ್ಕಳು ಮನೆಯಲ್ಲೇ ಕೂರಬೇಕಾಯಿತು. ಖಾಸಗಿ ಶಾಲೆಯಲ್ಲಿ ಆನ್‌ಲೈನ್ ಕ್ಲಾಸ್ ಆರಂಭಿಸಿದರು. ಮಕ್ಕಳಿಗೆ ಹಾಗೂ ನಮಗೆ ಅವರ ಪಾಠ ಅರ್ಥ ಆಗುವುದಿಲ್ಲ. ಹಳ್ಳಿಗಳಲ್ಲಿ ನೆಟ್‌ವರ್ಕ್ ಕೂಡ ಸರಿಯಾಗಿ ಸಿಗುವುದಿಲ್ಲ. ಶಾಲೆಗೆ ಹೋಗದಿದ್ದರೂ ₹ 20,000 ಶುಲ್ಕ ನೀಡಬೇಕು ಎಂದು ಕೇಳಿದರು. ಇದರಿಂದ ಬೇಸತ್ತು ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದೆ’ ಎನ್ನುತ್ತಾರೆ ಅವರು.

‘ಆನ್‌ಲೈನ್ ತರಗತಿಯಿಂದ ಅನುಕೂಲಕ್ಕಿಂತ ತೊಂದರೆಗಳೇ ಹೆಚ್ಚು. ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ನಾವು ಹೊಲದ ಕೆಲಸಕ್ಕೆ ಹೋದರೆ ಅವರು ಪಾಠ ಕೇಳದೆ ಅಡ್ಡದಾರಿ ಹಿಡಿದರೆ ಕಷ್ಟ. ಹೆಚ್ಚು ಹೊತ್ತು ಮೊಬೈಲ್ ನೋಡಿದರೆ ಕಣ್ಣಿಗೆ ತೊಂದರೆ ಆಗಬಹುದು.  ಕಾನ್ವೆಂಟ್ ಶಾಲೆಯ ಮಕ್ಕಳು ಸೀಮಿತ ಜ್ಞಾನ ಪಡೆಯುತ್ತಾರೆ. ಸರ್ಕಾರಿ ಶಾಲೆ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ನಿಪುಣರಾಗುತ್ತಾರೆ’ ಎನ್ನುತ್ತಾರೆ ಪೋಷಕರಾದ ಮಕ್ಕಳನ್ನು ಕಾನ್ವೆಂಟ್‌ನಿಂದ ಸರ್ಕಾರಿ ಶಾಲೆಗೆ ಸೇರಿಸಿದ ವಾಸುದೇವ್, ಮಂಗಳಾ, ಶ್ವೇತಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.