ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ರಸ್ತೆ ದೂಳು ನಿತ್ಯದ ಗೋಳು

ಶ್ವಾಸಕೋಶ ಸಂಬಂಧಿ ಕಾಯಿಲೆ ಹೆಚ್ಚಳ, ದೂಳಿಗೆ ಮಾಸ್ಕ್‌ ಅಗತ್ಯ
Last Updated 22 ಏಪ್ರಿಲ್ 2021, 5:29 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿನ ಎರಡನೇ ಅಲೆ ಕೋಟೆನಗರಿಯಲ್ಲಿ ನಿಧಾನಗತಿಯಲ್ಲಿ ಹೆಚ್ಚುತ್ತಿದೆ. ಸೋಂಕಿಗೂ ಮೊದಲೇ ಆವರಿಸಿಕೊಂಡಿದ್ದ ದೂಳು ಮಾತ್ರ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸೋಂಕಿನ ರಕ್ಷಣೆಗಿಂತ ದೂಳಿನ ಅಪಾಯದಿಂದ ಪಾರಾಗಲು ಮಾಸ್ಕ್‌ ಧರಿಸುವವರ ಸಂಖ್ಯೆ ಹೆಚ್ಚಿದೆ.

ದೂಳಿಗೂ ನಗರಕ್ಕೂ ಅವಿನಾಭಾವ ಸಂಬಂಧ. ನೆತ್ತಿ ಸುಡುವ ಉರಿಬಿಸಿಲು ಒಂದೆಡೆಯಾದರೆ, ಕಣ್ಣು ತೆರೆಯಲು ಸಾಧ್ಯವಿಲ್ಲದಂತೆ ಆವರಿಸಿಕೊಂಡ ದೂಳು ಮತ್ತೊಂದೆಡೆ. ಮಳೆಗಾಲ ಕಳೆಯುತ್ತಿದ್ದಂತೆ ದೂಳು ಹೆಚ್ಚಾಗುತ್ತದೆ. ಒಂದೂವರೆ ವರ್ಷದಿಂದ ನಗರದ ಬಹುತೇಕ ರಸ್ತೆಗಳನ್ನು ಕಿತ್ತುಹಾಕಿ ಕಾಮಗಾರಿ ನಡೆಸುತ್ತಿರುವ ಪರಿಣಾಮ ದೂಳಿನ ಪ್ರಮಾಣ ದುಪ್ಪಟ್ಟಾಗಿದೆ.

ಪಾಲನೆಯಾಗದ ನಿಯಮ:ಜನವಸತಿ ಪ್ರದೇಶದಲ್ಲಿನ ರಸ್ತೆ ಕಾಮಗಾರಿಗೆ ಸರ್ಕಾರ ಕೆಲ ಸುರಕ್ಷತಾ ಕ್ರಮಗಳನ್ನು ರೂಪಿಸಿದೆ. ಕಾಮಗಾರಿ ಸಂದರ್ಭದಲ್ಲಿ ದೂಳು ಮೇಲೆ ಏಳದಂತೆ ನೀರು ಹಾಕಬೇಕು ಎಂಬ ನಿಯಮ ಇದರಲ್ಲಿದೆ. ಆದರೆ, ಬಹುತೇಕರು ಈ ನಿಯಮ ಪಾಲನೆ ಮಾಡುತ್ತಿಲ್ಲ. ಗಣ್ಯ ವ್ಯಕ್ತಿಗಳು ಸಂಚರಿಸುವ ಮುನ್ಸೂಚನೆ ಸಿಕ್ಕಾಗ ಮಾತ್ರ ರಸ್ತೆಯಲ್ಲಿನ ದೂಳು ಅಡಗುತ್ತದೆ.

ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳು ಸಿಮೆಂಟ್‌ ಮಾರ್ಗಗಳಾಗಿ ಪರಿವರ್ತನೆ ಹೊಂದುತ್ತಿರು
ವುದರಿಂದ ಟಾರು ಕೀಳಲಾಗಿದೆ. ಸುಮಾರು ಮೂರು ಅಡಿಯಷ್ಟು ರಸ್ತೆಯನ್ನು ಅಗೆದು ಮಣ್ಣು ಹಾಕಲಾಗುತ್ತದೆ. ಬಳಿಕ ಸಿಮೆಂಟ್‌ ಕಾಂಕ್ರಿಟ್‌ ಹಾಕಿ ರಸ್ತೆ ನಿರ್ಮಿಸಲಾಗುತ್ತದೆ. ಸಿಮೆಂಟ್‌ ಕಾಂಕ್ರಿಟ್‌ ಹಾಕುವುದು ವಿಳಂಬವಾಗುತ್ತಿರುವುದರಿಂದ ದೂಳು ಹೆಚ್ಚಾಗುತ್ತಿದೆ.

ದೂಳಿನ ಮಜ್ಜನ:ಸುರಕ್ಷತೆಯ ನಿಯಮಗಳನ್ನು ಗಾಳಿಗೆ ತೂರಿರುವುದು ನಗರದಲ್ಲಿ ಸಂಚರಿಸಿದ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ. ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವ ಬದಲು ಇಡೀ ರಸ್ತೆಯನ್ನು ಕಿತ್ತುಹಾಕಲಾಗುತ್ತಿದೆ. ರಸ್ತೆಯ ಕಾಮಗಾರಿ ಮುಗಿಯುವವರೆಗೂ ವಾಹನ ಸವಾರರಿಗೆ ದೂಳಿನ ಮಜ್ಜನವಾಗುತ್ತಿದೆ.

ಗಾಂಧಿ ವೃತ್ತದಿಂದ ಜೆಎಂಐಟಿ ವೃತ್ತದವರೆಗಿನ ಮಾರ್ಗ, ಕನಕ ವೃತ್ತದಿಂದ ಗಾಂಧಿ ವೃತ್ತದವರೆಗಿನ ರಸ್ತೆ, ಚಳ್ಳಕೆರೆ ಗೇಟಿನಿಂದ ಪ್ರವಾಸಿ ಮಂದಿರದವರೆಗಿನ ಮುಖ್ಯ ರಸ್ತೆ, ಜೋಗಿಮಟ್ಟಿ ರಸ್ತೆ... ಹೀಗೆ ಕಾಮಗಾರಿಗೆ ಗುರುತಿಸಿದ ಎಲ್ಲ ಭಾಗವನ್ನು ಏಕಕಾಲಕ್ಕೆ ಅಗೆದು ಹಾಕಲಾಗಿದೆ. ಆದರೆ, ರಸ್ ತೆನಿರ್ಮಾಣ ಮಾತ್ರ ಹಂತಹಂತವಾಗಿ ನಡೆಯುತ್ತಿದೆ.

ಶ್ವಾಸಕೋಶ ಸಂಬಂಧಿ ಕಾಯಿಲೆ:ದೂಳಿನ ಪ್ರಮಾಣ ಹೆಚ್ಚಾಗಿರುವುದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದಂತೆ ಕಾಣುತ್ತಿದೆ. ಚಿತ್ರದುರ್ಗ ನಗರದಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುವವರ ಸಂಖ್ಯೆ ಏರಿಕೆ ಆಗುತ್ತಿದೆ. ಇಂತಹ ಸಮಸ್ಯೆಯಿಂದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡುವವರ ಪ್ರಮಾಣ ಹೆಚ್ಚಾಗುತ್ತಿದೆ.

ಕೊರೊನಾ ಸೋಂಕು ಎಂಬ ಸಾಂಕ್ರಾಮಿಕ ಕಾಯಿಲೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರನ್ನು ಬಲಿಪಡೆಯುತ್ತಿದೆ. ಅದರಲ್ಲೂ ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವವರು ಎಚ್ಚರಿಕೆಯಿಂದ ಇರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ರಸ್ತೆಯ ಮೇಲಿಂದ ಏಳುತ್ತಿರುವ ದೂಳಿನಿಂದ ಶ್ವಾಸಕೋಶ ಸಂಬಂಧಿ ಕಾಯಿಲೆ ಅಂಟಿಸಿಕೊಂಡವರಿಗೆ ಕೊರೊನಾ ಸೋಂಕು ಸುಲಭವಾಗಿ ತಗುಲುವ ಅಪಾಯವಿದೆ.

ಅಡಿಕೆ ಸಿಪ್ಪೆಯ ಅಪಾಯ
ಕಾಂಕ್ರಿಟ್‌ ರಸ್ತೆಯನ್ನು ವೈಜ್ಞಾನಿಕ ವಿಧಾನದಲ್ಲಿ ನಿರ್ಮಿಸಬೇಕು. ಕ್ಯೂರಿಂಗ್ ಸರಿಯಾದ ವಿಧಾನದಲ್ಲಿ ಮಾಡಬೇಕು. ನೀರು ಹಿಡಿದಿಡುವ ಉದ್ದೇಶದಿಂದ ಸಿ.ಸಿ. ರಸ್ತೆಯ ಕ್ಯೂರಿಂಗ್‌ಗೆ ಅಡಿಕೆ ಸಿಪ್ಪೆಯನ್ನು ಬಳಸಲಾಗುತ್ತಿದೆ. ವಾರಗಟ್ಟಲೆ ರಸ್ತೆಯ ಮೇಲಿರುವ ಸಿಪ್ಪೆ ನೀರಿನ ಅಂಶವನ್ನು ಹಿಡಿದಿಟ್ಟು ಕ್ಯೂರಿಂಗ್‌ಗೆ ಅನುಕೂಲ ಮಾಡಿಕೊಡುತ್ತದೆ. ಈ ಅವಧಿ ಮುಗಿದ ಬಳಿಕ ಸಿ‌ಪ್ಪೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಆದರೆ, ಸಿಪ್ಪೆ ತೆರವುಗೊಳಿಸುವ ಕಾಳಜಿಯನ್ನು ಗುತ್ತಿಗೆದಾರರು ತೋರುತ್ತಿಲ್ಲ.

ಕಾಂಕ್ರೀಟ್‌ ರಸ್ತೆಯ ಮೇಲೆ ಹರಡಿದ ಸಿಪ್ಪೆಯ ಮೇಲೆ ವಾಹನ ಸಂಚರಿಸುತ್ತಿವೆ. ಇದರಿಂದ ಅಡಿಕೆ ಸಿಪ್ಪೆ ಪುಡಿಯಾಗಿ ಗಾಳಿಗೆ ಹರಡುತ್ತಿದೆ. ರಸ್ತೆ ಪಕ್ಕದ ಮನೆ, ಅಂಗಡಿಯನ್ನು ಈ ದೂಳು ಆವರಿಸುತ್ತಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಬೀಡಿ, ಸಿಗರೇಟು ಸೇದಿ ಬಿಸಾಡಿದರೆ ಸಿಪ್ಪೆಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಹೊಳಲ್ಕೆರೆ ರಸ್ತೆಯ ಮೇಲೆ ಹೀಗೆ ಎರಡು ಬಾರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಸಿಪ್ಪೆ ತೆರವಿಗೆ ಸೂಚನೆ ನೀಡಿದ್ದಾರೆ. ಆದರೆ ಇದು ಪಾಲನೆಯಾಗಿಲ್ಲ.

ಶುಚಿಯಾಗದ ರಸ್ತೆಗಳು
ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯನ್ನು ಶುಚಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ ಹೊಣೆ ಗುತ್ತಿಗೆದಾರರದು. ಆದರೆ, ಕಾಮಗಾರಿ ಪೂರ್ಣಗೊಂಡ ಯಾವ ಭಾಗದಲ್ಲಿಯೂ ರಸ್ತೆಯನ್ನು ಶುಚಿಗೊಳಿಸುತ್ತಿಲ್ಲ. ರಸ್ತೆಯ ಬದಿಯಲ್ಲಿ ದೂಳು, ಜಲ್ಲಿಕಲ್ಲು, ಕಲ್ಲಿನ ಪುಡಿಯ ರಾಶಿ ಬಿದ್ದಿದೆ.

ತುರುವನೂರು ರಸ್ತೆಯ ಕೆ.ಕೆ. ನ್ಯಾಷನಲ್‌ ಸ್ಕೂಲ್‌ ಮುಂಭಾಗದಲ್ಲಿ ಜಲ್ಲಿಕಲ್ಲು, ಕಲ್ಲಿನ ಪುಡಿಯ ರಾಶಿ ಹಾಕಲಾಗಿದೆ. ಇದು ರಸ್ತೆಗೆ ಹರಡಿ ಅನೇಕರು ಆಯತಪ್ಪಿ ಬಿದ್ದಿದ್ದಾರೆ. ವಾಹನ ಸಂಚಾರದಿಂದ ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ಮಣ್ಣನ್ನು ತೆರವುಗೊಳಿಸುವ ಕೆಲಸ ಮಹಾನಗರಗಳಲ್ಲಿ ನಡೆಯುತ್ತಿದೆ. ಚಿತ್ರದುರ್ಗ ನಗರಸಭೆ ಹೀಗೆ ಮಣ್ಣು ತೆರವುಗೊಳಿಸಿದ ನಿದರ್ಶನ ಅಪರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT