ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮೂರಿನ ಆಸ್ಪತ್ರೆಗೆ ವೈದ್ಯಕೀಯ ಪರಿಕರ ಖರೀದಿಸಿದ ಗ್ರಾಮಸ್ಥರು

ಸರ್ಕಾರಿ ಆಸ್ಪತ್ರೆಗೆ ₹ 2 ಲಕ್ಷ ಮೌಲ್ಯದ ಪರಿಕರ ನೀಡಿದ ಶಿವಪುರದ ಜನರು
Last Updated 11 ಜುಲೈ 2021, 15:47 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಶಿವಪುರ ಗ್ರಾಮಸ್ಥರು ತಾವೇ ಹಣ ಸಂಗ್ರಹಿಸಿ ತಮ್ಮೂರಿನ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕದ ಸಾಂದ್ರಕ, ಇಸಿಜಿ ಯಂತ್ರ, ಕೋವಿಡ್ ಪರೀಕ್ಷೆಗಾಗಿ ಕಿಯೋನಿಕ್ಸ್ ಘಟಕವನ್ನು ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ.

ಗ್ರಾಮಸ್ಥರೇ ಹಣ ಸಂಗ್ರಹಿಸಿ ₹ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ವೈದ್ಯಕೀಯ ಪರಿಕರಗಳನ್ನು ಆಸ್ಪತ್ರೆಗೆ ನೀಡಿದ್ದಾರೆ.

ಗ್ರಾಮದ ಎಂ.ಜೆ. ನಾಗರಾಜ್ ಹಾಗೂ ಜಿ.ಎಸ್. ಚಂದ್ರಶೇಖರ್ ಎಂಬುವರು ₹ 30 ಸಾವಿರ ಮೌಲ್ಯದ ಇಸಿಜಿ ಯಂತ್ರ ನೀಡಿದ್ದಾರೆ. ಎಚ್.ಎನ್. ಬಸವರಾಜ್ ಎಂಬುವವರು ₹20 ಸಾವಿರ ಮೌಲ್ಯದ ಕಿಯೋನಿಕ್ಸ್ ಬಾಕ್ಸ್ ನೀಡಿದ್ದಾರೆ. ಗ್ರಾಮದ ಎಸ್.ಆರ್. ಅಜ್ಜಯ್ಯ ₹ 10,000 ನೆರವು ನೀಡಿದ್ದಾರೆ. ಉಳಿದವರು ₹ 2,000, ₹ 3,000, ₹ 5,000ದಂತೆ ಧನಸಹಾಯ ಮಾಡಿದ್ದಾರೆ. ಸೆಲ್ಕೋ ಕಂಪನಿಯವರು ಪರಿಕರ ಖರೀದಿಗೆ ಗ್ರಾಮಸ್ಥರೊಂದಿಗೆ ಕೈಜೋಡಿಸಿದ್ದಾರೆ.

‘ನಮ್ಮ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕದ ಸಾಂದ್ರಕ ಇರಲಿಲ್ಲ. ರೋಗಿಗಳಿಗೆ ಆಮ್ಲಜನಕ ಬೇಕಾದಾಗ ತಾಲ್ಲೂಕು ಕೇಂದ್ರ ಅಥವಾ ಚಿತ್ರದುರ್ಗಕ್ಕೆ ಹೋಗುವ ಪರಿಸ್ಥಿತಿ ಇತ್ತು. ಕೋವಿಡ್ ರೋಗಿಗಳಿಗೆ ಆಮ್ಲಜನಕ ಅಗತ್ಯವಾಗಿ ಬೇಕು. ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ಆಮ್ಲಜನಕದ ಸಾಂದ್ರಕ ಖರೀದಿಸಿ ಕೊಡುಗೆಯಾಗಿ ನೀಡಿದ್ದೇವೆ’ ಎನ್ನುತ್ತಾರೆ ಹಣ ಸಂಗ್ರಹ ಮಾಡಿದ ಗ್ರಾಮದ ಶಿಕ್ಷಕ ರುದ್ರಯ್ಯ ಹಾಗೂ ಧೃವಕುಮಾರ್.

‘ರೋಗಿಗಳಿಗೆ ಎದೆನೋವು ಬಂದಾಗ ನಮ್ಮ ಊರಿನ ಆಸ್ಪತ್ರೆಯಲ್ಲಿ ಇಸಿಜಿ ಮಾಡುವ ಯಂತ್ರ ಇರಲಿಲ್ಲ. ಅದನ್ನು ಖರೀದಿಸಿದ್ದೇವೆ. ಎಲ್ಲವನ್ನೂ ಸರ್ಕಾರವೇ ಕೊಡಿಸಲಿ ಎಂದು ಕಾಯುತ್ತ ಕೂರಬಾರದು’ ಎನ್ನುತ್ತಾರೆ ಎಂ.ಜೆ. ನಾಗರಾಜ್.

‘ಗ್ರಾಮಸ್ಥರು ದುಡಿಮೆಯ ಹಣವನ್ನು ಆಸ್ಪತ್ರೆಗೆ ದಾನ ಮಾಡಿರುವುದು ಎಲ್ಲರಿಗೂ ಮಾದರಿಯಾಗಿದೆ. ಸಮಾಜಕ್ಕೆ ಉಪಯೋಗ ಆಗುವ ಪವಿತ್ರ ಕಾರ್ಯ ಮಾಡಿದರೆ ದೇವರು ಮೆಚ್ಚುತ್ತಾನೆ. ಸರ್ಕಾರದೊಂದಿಗೆ ಸಾರ್ವಜನಿಕರೂ ಕೈಜೋಡಿಸಿರುವುದು ವಿಶೇಷ’ ಎಂದು ಶಾಸಕ ಎಂ.ಚಂದ್ರಪ್ಪ ಗ್ರಾಮಸ್ಥರನ್ನು ಶ್ಲಾಘಿಸಿದರು.

ಮಾಜಿ ಶಾಸಕ ಪಿ. ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಪ್ಪ, ಸೆಲ್ಕೋ ಕಂಪನಿಯ ವ್ಯವಸ್ಥಾಪಕ ಮಂಜುನಾಥ ಭಾಗವತ್, ಶರತ್ ಕುಮಾರ್ ಪಾಟೀಲ್, ಜಯಪ್ಪ, ಗಿರಿಜಾ ಅಜ್ಜಯ್ಯ, ಪಿ.ಆರ್. ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT