ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ತಂತ್ರಜ್ಞಾನ ಬಳಕೆಗೆ ಗ್ರಾಮಸ್ಥರ ನೆರವು

ಸುಂದರ ಪರಿಸರದ ಮಧ್ಯದಲ್ಲಿರುವ ತಿರುಮಲಾಪುರದ ಸರ್ಕಾರಿ ಶಾಲೆ
Last Updated 3 ಅಕ್ಟೋಬರ್ 2021, 3:55 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ತಾಳ್ಯ ಹೋಬಳಿಯ ಟಿ. ನುಲೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತಿರುಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗ್ರಾಮಸ್ಥರ ನೆರವಿನಿಂದ ಹೈಟೆಕ್ ಸ್ಪರ್ಶ ಪಡೆದಿದೆ.

ಸುಂದರ ಪರಿಸರದ ಮಧ್ಯದಲ್ಲಿರುವ ಈ ಶಾಲೆಯಲ್ಲಿ 45 ವಿದ್ಯಾರ್ಥಿಗಳು ಓದುತ್ತಿದ್ದು, ಮೂವರು ಶಿಕ್ಷಕರಿದ್ದಾರೆ. ಇಲ್ಲಿಯ ಶಿಕ್ಷಕರು ಮಕ್ಕಳಿಗೆ ತಂತ್ರಜ್ಞಾನ ಬಳಸಿ ಬೋಧನೆ ಮಾಡುತ್ತಿದ್ದಾರೆ. ಶಾಲೆಯಲ್ಲಿ ಎಲ್‌ಇಡಿ ಟಿವಿ ಇದ್ದು, ಎರಡು ಕಂಪ್ಯೂಟರ್, ಜೆರಾಕ್ಸ್ ಯಂತ್ರ ಹಾಗೂ ಪ್ರಿಂಟರ್ ಸಹ ಇವೆ.

‘ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ತರಗತಿ ನಡೆಸಲು ಗ್ರಾಮಸ್ಥರ ಆರ್ಥಿಕ ನೆರವಿನಿಂದ 40 ಇಂಚಿನ ಎಲ್‌ಇಡಿ ಟಿವಿ ಖರೀದಿಸಿದೆವು. ಇದರಿಂದ ಪೆನ್ ಡ್ರೈವ್, ಮೊಬೈಲ್ ಮೂಲಕ ಯೂಟ್ಯೂಬ್ ಲಿಂಕ್ ಬಳಸಿ ಮಕ್ಕಳಿಗೆ ಪಠ್ಯಕ್ಕೆ ಸಂಬಂಧಿಸಿದ ಪಾಠಗಳನ್ನು ತೋರಿಸಲು ಅನುಕೂಲವಾಗಿದೆ. ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಸಂವೇದ ಪಾಠಗಳನ್ನು ಡೌನ್‌ಲೋಡ್ ಮಾಡಿ ಮಕ್ಕಳಿಗೆ ಪ್ರದರ್ಶಿಸುತ್ತೇವೆ. ಇದರಿಂದ ಮಕ್ಕಳ ಕಲಿಕೆ ಹೆಚ್ಚು ಪರಿಣಾಮಕಾರಿ ಆಗುತ್ತಿದೆ. ಗ್ರಾಮಸ್ಥರು ಒಂದು ಯುಪಿಎಸ್ ಕೂಡ ಕೊಡಿಸಿದ್ದು, ವಿದ್ಯುತ್ ಇಲ್ಲದ ಸಂದರ್ಭದಲ್ಲೂ ವಿದ್ಯಾರ್ಥಿಗಳು ಟಿವಿ ನೋಡಬಹುದು. ಶಾಲೆಗೆ ಸೇರಿದ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿಕೊಟ್ಟರೆ ಔಷಧವನ ನಿರ್ಮಿಸುವ ಉದ್ದೇಶ ಇದೆ.’ ಎನ್ನುತ್ತಾರೆ ಮುಖ್ಯಶಿಕ್ಷಕ ಇ ಮಂಜಪ್ಪ.

‘ಕೋವಿಡ್ ಇರುವುದರಿಂದ ವಿದ್ಯಾರ್ಥಿಗಳಿಗೆ ಪರ್ಯಾಯ ಶೈಕ್ಷಣಿಕ ಯೋಜನೆಯ ಪಠ್ಯಗಳನ್ನು ಕಲಿಸುತ್ತಿದ್ದೇವೆ. ಒಂದರಿಂದ ಐದನೇ ತರಗತಿಯವರೆಗೆ ಆನ್‌ಲೈನ್ ಮೂಲಕ ಬೋಧನೆ ಮಾಡಿ ಅಭ್ಯಾಸದ ಹಾಳೆಗಳನ್ನು ನೀಡಿ ಉತ್ತರ ಬರೆಸುತ್ತೇವೆ. ಪ್ರತಿ ಪಾಠಕ್ಕೂ ಅಭ್ಯಾಸದ ಹಾಳೆಗಳನ್ನು ನೀಡಬೇಕಿದ್ದು, ಗ್ರಾಮಸ್ಥರ ನೆರವಿನಿಂದ ₹ 16,500 ಮೌಲ್ಯದ ಜೆರಾಕ್ಸ್ ಮತ್ತು ಕಲರ್ ಪ್ರಿಂಟಿಂಗ್ ಮಷಿನ್ ತಂದಿದ್ದೇವೆ. ಇದರಿಂದ ಮಕ್ಕಳಿಗೆ ಉಚಿತವಾಗಿ ಅಭ್ಯಾಸದ ಹಾಳೆ, ಪ್ರಶ್ನೆಪತ್ರಿಕೆ ಕೊಡಲು ಅನುಕೂಲವಾಗಿದೆ. ಇನ್‌ಫೋಸಿಸ್ ನೆರವಿನಿಂದ ಎರಡು ಕಂಪ್ಯೂಟರ್ ತರಿಸಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಆಗುತ್ತಿದೆ’ ಎನ್ನುತ್ತಾರೆ ಸಹಶಿಕ್ಷಕರಾದ ಬಿ.ಆರ್. ಅಜ್ಜಪ್ಪ ಹಾಗೂ ಎನ್.ಸಿ. ಬಸವ ಕುಮಾರ್.

‘ಮೊದಲು ಶಾಲೆ ಗ್ರಾಮದ ಒಳಗೆ ಎರಡು ಶಿಥಿಲಗೊಂಡ ಕೊಠಡಿಗಳಲ್ಲಿ ನಡೆಯುತ್ತಿತ್ತು. ಗ್ರಾಮದ ಹೊರವಲಯದಲ್ಲಿ ದೇವಸ್ಥಾನದ ಟ್ರಸ್ಟ್‌ಗೆ ಸೇರಿದ ಮುಕ್ಕಾಲು ಎಕರೆ ಜಾಗವನ್ನು ಶಾಲೆಗೆ ನೀಡಿದ್ದು, ಅಲ್ಲಿ 3 ಹೊಸ ಕೊಠಡಿ ನಿರ್ಮಿಸಲಾಯಿತು. ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಮರಗಳಿದ್ದು, ಸುಂದರ ಪರಿಸರ ಹೊಂದಿದೆ. ನಮ್ಮೂರಿನ ಜನ ಶಾಲೆಯ ಅಭಿವೃದ್ಧಿಗೆ ಹೆಚ್ಚು ಸಹಕಾರ ನೀಡುತ್ತಾರೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಸ್. ನಾಗರಾಜಪ್ಪ.

ರಸಪ್ರಶ್ನೆಯಲ್ಲಿ ಟಾಪರ್‌
ಶಾಲೆಯಲ್ಲಿ ಭೌತಿಕ ಸೌಲಭ್ಯಗಳು ಇರುವುದರ ಜತೆಗೆ ವಿದ್ಯಾರ್ಥಿಗಳೂ ಕಲಿಕೆಯಲ್ಲಿ ಮುಂದೆ ಇದ್ದಾರೆ. ಕೋವಿಡ್‌ಗೂ ಮೊದಲು ನಡೆಯುತ್ತಿದ್ದ ಪ್ರತಿಭಾ ಕಾರಂಜಿ, ಕಲಿಕೋತ್ಸವ, ಗಣಿತ ಕಲಿಕಾ ಆಂದೋಲನ ಸ್ಪರ್ಧೆಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಿದ್ದಾರೆ.

‘ನಮ್ಮ ಶಾಲೆಯ ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಕ್ಲಸ್ಟರ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 2 ಬಾರಿ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲೂ ಭಾಗವಹಿಸಿದ್ದಾರೆ’ ಎನ್ನುತ್ತಾರೆ ಸಹಶಿಕ್ಷಕ ಬಿ.ಆರ್. ಅಜ್ಜಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT