ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯಲ್ಲಿ ನೇರ ರೈಲು ಮಾರ್ಗಕ್ಕೆ ಭೂಮಿ ಪೂಜೆ

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿಕೆ
Last Updated 2 ಡಿಸೆಂಬರ್ 2022, 4:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಹುನಿರೀಕ್ಷಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿಗೆ 2023ರ ಫೆಬ್ರುವರಿಯಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು. ಈಗಾಗಲೇ ಸಿದ್ಧತೆಗಳು ಬಹುತೇಕ ಕೊನೆಯ ಹಂತದಲ್ಲಿವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.

ನಗರದ ಸರ್ಕಾರಿ ವಿಜ್ಞಾನ ಪದವಿ ಕಾಲೇಜಿನಲ್ಲಿ ಗುರುವಾರ ವೇದಾಂತ ಫೌಂಡೇಷನ್‌ ವತಿಯಿಂದ ಸಿಎಸ್‌ಆರ್‌ ನಿಧಿಯ ಅಡಿ ನಿರ್ಮಿಸಲಾದ ಕಾಂಪೌಂಡ್‌ ಹಾಗೂ ನೈರ್ಮಲ್ಯ ಸಂಕೀರ್ಣ ಉದ್ಘಾಟಿಸಿ ಅವರು ಮಾತನಾಡಿದರು. ‘ಭೂ ಸ್ವಾಧೀನಕ್ಕಾಗಿ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ₹ 150 ಕೋಟಿ ನೀಡಿದೆ. ಭೂ ಸ್ವಾಧೀನ ಪ್ರಕ್ರಿಯೆ ಚಾಲನೆಯಲ್ಲಿದೆ. ವಿಳಂಬವಾಗದಂತೆ ಪ್ರತಿ ಹಂತದಲ್ಲೂ ಸಭೆ ನಡೆಸಿ ಪ್ರಕ್ರಿಯೆಗೆ ವೇಗ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಚಿತ್ರದುರ್ಗ ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯದ ಕೊರತೆ ಬಹಳ ದಿನಗಳಿಂದ ಇತ್ತು. ವಿದ್ಯಾಲಯ ಆರಂಭದ ಮಂಜೂರಾತಿಗೆ ಅವಶ್ಯ ಕಡತಗಳನ್ನು ಇಲಾಖೆಗೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರದ ನಿಯಮಾನುಸಾರ 10 ಎಕರೆ ಭೂಮಿ ಮಂಜೂರು ಸಹ ಮಾಡಲಾಗಿದೆ’ ಎಂದರು.

‘ಕೇಂದ್ರೀಯ ವಿದ್ಯಾಲಯ ಆರಂಭಿಸಲು ಮಂಜೂರಾತಿ ನೀಡಿ ಸರ್ಕಾರಿ ಅಥವಾ ಇತರ ಕಟ್ಟಡಗಳಲ್ಲಿ ಆರಂಭ ಮಾಡಲಾಗುತ್ತದೆ. ಬಳಿಕ ಶಾಲಾ ಕಟ್ಟಡ ನಿರ್ಮಾಣ ಮಾಡಿ, ಶಾಶ್ವತ ಕೇಂದ್ರೀಯ ವಿದ್ಯಾಲಯ ತೆರೆಯಲು ಅವಶ್ಯ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತದೆ. ಇದರಂತೆ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕೇಂದ್ರೀಯ ವಿದ್ಯಾಲಯ ಆರಂಭಿಸಲಾಗಿದೆ’ ಎಂದು ತಿಳಿಸಿದರು.

‘ಪ್ರಾರಂಭದಲ್ಲಿ ಸ್ಥಳ ವೀಕ್ಷಣೆ ಸಂದರ್ಭದಲ್ಲಿ, ಶಾಲೆ ಆರಂಭಿಸಲು ಅವಶ್ಯವಾದ ಕೊಠಡಿ, ವಿದ್ಯುತ್‌, ಕಾಂಪೌಂಡ್‌ ಕೊರತೆ ಇರುವುದು ಕಂಡು ಬಂತು. ಇದನ್ನು ಸರಿಪಡಿಸಲು ಬೇಕಾದ ಅನುದಾನವನ್ನು ವೇದಾಂತ ಮೈನ್ಸ್‌ ಅವರು ನೀಡಿ, 6 ಕೊಠಡಿ, 3 ಅಂತಸ್ತುಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಜತೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಕಾಂಪೌಂಡ್‌ ಸಹ ನಿರ್ಮಿಸಿದ್ದಾರೆ. ಕಟ್ಟಡಕ್ಕೆ ಬಣ್ಣ ಬಳಿಸಲಾಗಿದೆ. ವಿದ್ಯಾಲಯಕ್ಕೆ ಮಂಜೂರು ಮಾಡಲಾದ ಭೂಮಿಯಲ್ಲಿ 66 ಕೆ.ವಿ. ವಿದ್ಯುತ್ ಲೈನ್‌ ಹಾದು ಹೋಗಿದೆ. ಇದನ್ನು ತೆರವುಗೊಳಿಸಲು ಕೆಪಿಟಿಸಿಎಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ, ಉಪವಿಭಾಗಾಧಿಕಾರಿ ಆರ್‌. ಚಂದ್ರಯ್ಯ, ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಹನುಮಂತರಾಯ, ತಹಶೀಲ್ದಾರ್‌ ಸತ್ಯನಾರಾಯಣ, ವೇದಾಂತ ಫೌಂಡೇಶನ್‌ನ ಶ್ರೀಶೈಲ ಗೌಡ, ಪಿ. ನಾರಾಯಣ, ರಾಮನ್‌ ರಂಜನ್‌ ದಾಸ್‌, ರವಿ ನಾಯಕ್‌, ಯತಿರಾಜು, ಸಂತೋಷ್‌ ಇದ್ದರು.

ಸಮವಸ್ತ್ರ ಸಂಹಿತೆ ಪಾಲನೆ ಆಗಲಿ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಧಾರ್ಮಿಕ ಭಾವನೆ ಮಧ್ಯಪ್ರವೇಶಿಸಬಾರದು. ಆರ್ಥಿಕ ಪರಿಸ್ಥಿತಿ ಆಧರಿಸಿ ಮಕ್ಕಳಲ್ಲಿ ಮೇಲು ಕೀಳು ಎಂಬ ಭಾವನೆ ಕಾಣಿಸಬಾರದು. ಶಾಲೆಗಳಲ್ಲಿ ಸಾಮಾಜಿಕವಾಗಿ ಒಂದೇ ಮನೋಭೂಮಿಕೆಯಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕು. ಜ್ಯಾತ್ಯತೀತವಾಗಿ ಧರ್ಮ ಮೀರಿ, ಒಳ್ಳೆಯ ಶಿಕ್ಷಣ ನೀಡುವ ವ್ಯವಸ್ಥೆ ರೂಪಿಸುವಂತಾಗಬೇಕು.

ಖಾಸಗೀಕರಣದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಕಂದಕ ನಿರ್ಮಾಣವಾಗಿದೆ. ಇದು ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಪಾಲನೆ ಆಗಬೇಕು. ವಕ್ಫ್‌ ಬೋರ್ಡ್‌ನಿಂದ ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ಕಾಲೇಜು ಸ್ಥಾಪನೆ ಕುರಿತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವರು ಹಾಗೂ ಚಿತ್ರದುರ್ಗ ಸಂಸದರಾದ ಎ.ನಾರಾಯಣ ಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT