ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿನಿಂದ ಬಚಾವಾದ ಬುಡಕಟ್ಟು ಸಮುದಾಯಗಳು

ವಿಶಿಷ್ಟ ಆಹಾರ ಪದ್ಧತಿ l ಸ್ಥಳೀಯವಾಗಿ ಬೆಳೆದ ತರಕಾರಿ–ಸೊಪ್ಪು ಬಳಕೆ l ನಗರ ಪ್ರದೇಶದ ಅವಲಂಬನೆ ಕಡಿಮೆ
Last Updated 21 ಮೇ 2021, 3:13 IST
ಅಕ್ಷರ ಗಾತ್ರ

ನನ್ನಿವಾಳ (ಚಳ್ಳಕೆರೆ): ಬುಡಕಟ್ಟು ಸಂಸ್ಕೃತಿಯ ಜೀವನ ಶೈಲಿ ಹಾಗೂ ಗ್ರಾಮ ಪಂಚಾಯಿತಿ ಕೈಗೊಂಡ ಮುನ್ನೆಚ್ಚರಿಕೆಯ ಕ್ರಮದಿಂದಾಗಿ ತಾಲ್ಲೂಕಿನಮ್ಯಾಸಬೇಡ ಬುಡಕಟ್ಟು ಸಮುದಾಯದ ಜನರು ಕೊರೊನಾ ಸೋಂಕಿನ ಭಯವಿಲ್ಲದೇ ನೆಮ್ಮದಿಯಿಂದ ಇದ್ದಾರೆ.

ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರ್ಲಕಟ್ಟೆ, ಇಮಾಂಪುರ ಹಾಗೂ ನನ್ನಿವಾಳ ಗ್ರಾಮವನ್ನು ಹೊರತುಪಡಿಸಿ ಉಳಿದ ಪೆತ್ತಮ್ಮನವರಹಟ್ಟಿ, ಎತ್ತಿನಗೌಡರಹಟ್ಟಿ, ವರವಿನವರಹಟ್ಟಿ, ಬಂಗಾರ ದೇವರಹಟ್ಟಿ, ಗಡ್ಡದಾರಹಟ್ಟಿ, ಕಾವಲೋರಹಟ್ಟಿ, ತೋಡ್ಲರಹಟ್ಟಿ, ದೊರೆಹಟ್ಟಿ, ಬಂಡೆಹಟ್ಟಿ, ಕರೆಕಾಟ್ಲಹಟ್ಟಿ, ಚಿಕ್ಕಕಾಟ್ಲಹಟ್ಟಿ, ನಕ್ಲೊರಹಟ್ಟಿ, ಕುರಿತಮ್ಮಯ್ಯನಹಟ್ಟಿ, ಕುರಿನಿಂಗಯ್ಯನಹಟ್ಟಿ, ಉಡೇದಾರ ಹಟ್ಟಿ, ರತ್ನಗಿರಿ, ನಿಂಗ್ಲೋರಹಟ್ಟಿ ಸೇರಿ 29 ಹಟ್ಟಿಗಳಲ್ಲಿ ನೆಲೆಸಿರುವ ಮ್ಯಾಸಬೇಡ ಬುಡಕಟ್ಟು ಸಮುದಾಯದ ಜನ ಸೋಂಕಿನ ಅಳುಕಿಲ್ಲದೇ
ನೆಲೆಸಿದ್ದಾರೆ.

ಪ್ರತಿ ಹಟ್ಟಿಯಲ್ಲಿ 40–50 ಕುಟುಂಬಗಳು ಇವೆ. ಉಳಿದಂತೆ ಜನರು ತಮ್ಮ ಜಮೀನಿನಲ್ಲೇ ನೆಲೆಸಿದ್ದಾರೆ. ಈ ಭಾಗದಲ್ಲಿ ಒಟ್ಟು 900 ಕುಟುಂಬಗಳಿದ್ದು 6 ಸಾವಿರದಿಂದ 7 ಸಾವಿರ ಜನ ಸಂಖ್ಯೆ ಮಾತ್ರ ಇದೆ. ಜೀವನೋಪಾಯಕ್ಕೆ ನಗರ ಪ್ರದೇಶಕ್ಕೆ ಯಾವುದೇ ವೃತ್ತಿಯನ್ನು ಹುಡುಕಿಕೊಂಡು ಹೋಗದೇ ಪಾರಂಪರಿಕವಾಗಿ ಬಂದ ಪಶುಪಾಲನೆ ಹಾಗೂ ಕೃಷಿ ಚಟುವಟಿಕೆಯಲ್ಲಿ ಸದಾ ತೊಡಗಿಸಿಕೊಂಡ ಜನರು ಅವಶ್ಯಕತೆ ಇದ್ದರೆ ಮಾತ್ರ ನಗರ ಪ್ರದೇಶಕ್ಕೆ ಬಂದು ಹೋಗುತ್ತಾರೆ.‌

ಸಂಬಂಧಿಕರನ್ನು ಹೊರತು ಪಡಿಸಿ ಇನ್ಯಾರಾದರೂ ಹೊಸಬರು ಹಟ್ಟಿಗೆ ಪ್ರವೇಶಿಸಿದರೆ ಅವರ ಮೇಲೆ ನಿಗಾ ಇಡುತ್ತಾರೆ. ತಮ್ಮ ಜಮೀನುಗಳಲ್ಲಿ ಬೆಳೆದ ಸೊಪ್ಪು, ತರಕಾರಿಯನ್ನೇ ಇವರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅವರ ಆಹಾರ ಪದ್ಧತಿ ಹಾಗೂ ಶ್ರಮಿಕ ಜೀವನದಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.

ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ರೋಗದ ಬಾಧೆಯಿಂದ ಎಲ್ಲೆಡೆ ಜನರು ತತ್ತರಿಸಿ ಹೋಗಿದ್ದರೂ ಈ ಹಟ್ಟಿಯಲ್ಲಿ ಸೋಂಕಿತ
ರಾಗಲಿ ಮತ್ತು ಸೋಂಕಿನ ಭಯ–ಭೀತಿಯಾಗಲಿ ಇದುವರೆಗೆ ಕಂಡು ಬಂದಿಲ್ಲ.

ಗ್ರಾಮ ಪಂಚಾಯಿತಿ ಮುಂಜಾಗ್ರತಾ ಕ್ರಮವಾಗಿ ಪ್ರತಿ ಹಟ್ಟಿಯ ಹೊರ–ಒಳ ಭಾಗದಲ್ಲಿ ಇದುವರೆಗೆ 4–5 ಸಲ ಸ್ಯಾನಿಟೈಸ್‌ ಮಾಡಿಸಿದೆ. ರಸ್ತೆ, ಚರಂಡಿ ಸ್ವಚ್ಛತೆಯ ಜೊತೆಗೆ ಬ್ಲೀಚಿಂಗ್ ಪೌಡರ್, ಫೆನಾಯಿಲ್ ಸಿಂಪರಣೆ ಮಾಡಲಾಗಿದೆ. ಅಲ್ಲಿಯ ಜನರಿಗೆ ಸ್ವಯಂ ಸ್ವಚ್ಛತೆ, ಗ್ರಾಮ ನೈರ್ಮಲ್ಯ ಹಾಗೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿವಳಿಕೆ ನೀಡಲಾಗಿದೆ.

ನರೇಗಾ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಆಯಾ ಹಟ್ಟಿಯ ಜನರಿಗೆ ಸಾಕಷ್ಟು ಕೂಲಿ ಕೆಲಸವನ್ನು ಒದಗಿಸುವ ಮೂಲಕ ನಗರಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ 29 ಹಟ್ಟಿಗಳನ್ನು ಹೊರತುಪಡಿಸಿ ಇನ್ನುಳಿದ ನನ್ನಿವಾಳ ಗ್ರಾಮದಲ್ಲಿ 2 ಮತ್ತು ಗೊರ್ಲಕಟ್ಟೆಯಲ್ಲಿ 7 ಸೇರಿದಂತೆ 9 ಸೋಂಕಿತರು ಕೋವಿಡ್ ಕೇಂದ್ರಕ್ಕೆ ದಾಖಲಾಗಿದ್ದಾರೆ.

ಮೊದಲಿನಿಂದಲೂ ಹೊರಗಿನವರ ಸಂಪರ್ಕವಿಲ್ಲ, ಯಾರೊಂದಿಗೂ ಬೆರೆಯುವುದು ಇಲ್ಲ. ಹೆಚ್ಚು ವಾಹನಗಳ ಓಡಾಟವಿಲ್ಲ. ಹೀಗಾಗಿ ಹಟ್ಟಿಯ ಜನರಿಗೆ ಯಾವುದೇ ಸೋಂಕಿನ ಭಯ–ಭೀತಿ ಇಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ನಿರುಮ್ಮಳವಾಗಿದ್ದಾರೆ ಎನ್ನುತ್ತಾರೆ ಪೆತ್ತಮನವರಹಟ್ಟಿ ಗ್ರಾಮದ ಮುಖಂಡ ಎಸ್.ಪಾಪಣ್ಣ.

***

ಇಮಾಂಪುರದ ಜನರು ತಮ್ಮ ಗ್ರಾಮಕ್ಕೆ ತಾವೇ ಸ್ವಯಂ ಕ್ವಾರಂಟೈನ್ ಮಾಡಿಕೊಂಡಿದ್ದಾರೆ

-ಇನಾಯಿತ್‍ ಪಾಷಾ, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT