ಮಂಗಳವಾರ, ಮಾರ್ಚ್ 28, 2023
21 °C
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ರಾಜ್ಯಮಟ್ಟದ ಬುಡಕಟ್ಟು ಉತ್ಸವ ನ.8ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬುಡಕಟ್ಟು ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ನ.8 ಮತ್ತು 9ರಂದು ರಾಜ್ಯ ಮಟ್ಟದ ಬುಡಕಟ್ಟು ಉತ್ಸವವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಸೋಮವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಉತ್ಸವ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಹಲವು ಜಿಲ್ಲೆಯ ಬಡಕಟ್ಟು ಸಮುದಾಯಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಬುಡಕಟ್ಟು ಜನರು ತಯಾರಿಸಿದ ಕರಕುಶಲ ವಸ್ತು, ನಾಟಿ ಔಷಧ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಆಹಾರ ಮೇಳ ಆಕರ್ಷಕವಾಗಿರಲಿದೆ’ ಎಂದು ಹೇಳಿದರು.

ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಸವನಗೌಡ, ‘ಉತ್ಸವದಲ್ಲಿ ಬುಡಕಟ್ಟು ಜನರ ಆಹಾರ ಖಾದ್ಯ ಪರಿಚಯಿಸಲಾಗುತ್ತಿದೆ. ವಿಶೇಷವಾಗಿ ಬಂಬೂ ಬಿರಿಯಾನಿ ಆಕರ್ಷಣೆಯ ಖಾದ್ಯವಾಗಲಿದೆ. ಕಾಡು ಜೇನುತುಪ್ಪ-ಕಾಡು ಗೆಣಸುಗಳಿಂದ ತಯಾರಿಸಲಾದ ತರಾವರಿ ಖಾದ್ಯಗಳು ಸ್ಥಾನ ಪಡೆಯಲಿವೆ’ ಎಂದರು.

‘ಎರಡೂ ದಿನ ಸಂಜೆ 5ರಿಂದ ರಾತ್ರಿ 9ರವರೆಗೆ ಉತ್ಸವ ನಡೆಯಲಿದೆ. ಬುಡಕಟ್ಟು ಕಲಾ ತಂಡಗಳಿಂದ ನೃತ್ಯ, ಹಬ್ಬಗಳ ಆಚರಣೆಗೆ ಸಂಬಂಧಿಸಿದ ಕಲಾ ಪ್ರದರ್ಶನ ಹಾಗೂ ಜೀವನಶೈಲಿ ಕುರಿತ ಸಾಕ್ಷ್ಯ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ನಡೆಯುತ್ತಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ 50 ಬುಡಕಟ್ಟು ಸಮುದಾಯದ ಜನರಿದ್ದು, ಅವರದೇ ಆದ ಭಾಷೆ, ಸಂಸ್ಕೃತಿಯನ್ನು ಹೊಂದಿದ್ದಾರೆ. ಈ ಎಲ್ಲ ಸಮುದಾಯದವರನ್ನು ಒಟ್ಟುಗೂಡಿಸುವ ಹಾಗೂ ಪರಸ್ಪರ ಪರಿಚಯಿಸುವ ಉದ್ದೇಶದಿಂದ ಉತ್ಸವ ನಡೆಸಲಾಗುತ್ತಿದೆ. ಈಗಾಗಲೇ ಆರು ಬುಡಕಟ್ಟು ಉತ್ಸವಗಳನ್ನು ಆಚರಿಸಲಾಗಿದೆ’ ಎಂದು ಹೇಳಿದರು. 

‘ಅಮೇಜಾನ್‌’ನಲ್ಲಿ ಬೇಡಿಕೆ: ಸಚಿವ

ಬುಡಕಟ್ಟು ಸಮುದಾಯದ ಜನರು ತಯಾರಿಸಿದ ಉತ್ಪನ್ನಗಳಿಗೆ ‘ಅಮೇಜಾನ್‌’ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

‘ಬುಡಕಟ್ಟು ಸಮುದಾಯದ ಕಾಫಿ, ಜೇನುತುಪ್ಪ, ಮೆಣಸು ಹಾಗೂ ಇತರ ಉತ್ಪನ್ನಗಳಿಗೆ ಇತ್ತೀಚೆಗೆ ಅಮೇಜಾನ್‌ ಮಾರುಕಟ್ಟೆ ಒದಗಿಸಲಾಯಿತು. ಸರ್ಕಾರದ ಪ್ರಯತ್ನದ ಫಲವಾಗಿ ಇಂತಹ ಅವಕಾಶ ಲಭ್ಯವಾಯಿತು. ಈ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿದ್ದು, ಬುಡಕಟ್ಟು ಜನರು ಹರ್ಷಗೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

***

ಬುಡಕಟ್ಟು ಸಮುದಾಯದ ಜನರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉತ್ಸವವನ್ನು ಅಚ್ಚುಕಟ್ಟಾಗಿ ಹಾಗೂ ವಿಶೇಷವಾಗಿ ಮಾಡಬೇಕು. ತೊಂದರೆ ಆಗದಂತೆ ಎಚ್ಚರವಹಿಸಬೇಕು.

ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.