ಭಾನುವಾರ, ಸೆಪ್ಟೆಂಬರ್ 19, 2021
31 °C
ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ನಾರಾಯಣಸ್ವಾಮಿ

ತುಂಗ–ಭದ್ರಾ ಕಾಲುವೆಗೆ ಮಾರ್ಚ್‌ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ 17.5 ಟಿಎಂಸಿ ಅಡಿ ನೀರು ಹರಿಸುವ ಕಾಲುವೆ ನಿರ್ಮಾಣ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಬೇಕು. ಮುಂದಿನ ವರ್ಷದಿಂದ ತುಂಗಾ ಜಲಾಶಯದ ನೀರು ಭದ್ರಾ ಮೇಲ್ದಂಡೆ ನಾಲೆಗೆ ಹರಿಯಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದರು. ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವಂತೆ ತಾಕೀತು ಮಾಡಿದರು.

‘ತುಂಗಾ ಮತ್ತು ಭದ್ರಾ ಜಲಾಶಯದ ನಡುವೆ ಕಾಲುವೆ ನಿರ್ಮಾಣಕ್ಕೆ 2008ರಲ್ಲಿ ಗುತ್ತಿಗೆದಾರರೊಂದಿಗೆ ಒಪ್ಪಂದವಾಗಿದೆ. ಕಾಡಿನ ಮಧ್ಯೆ ಕಾಲುವೆ ಹಾದುಹೋಗುವುದರಿಂದ ಅರಣ್ಯ ಇಲಾಖೆ 2016ರಲ್ಲಿ ಅನುಮತಿ ನೀಡಿದೆ. ಪರಿಸರ ಸೂಕ್ಷ್ಮ ವಿಚಾರವಾಗಿದ್ದರಿಂದ ವಿಳಂಬವಾಗಿದೆ’ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಘವನ್‌ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ‘ಕೇವಲ ಅನುಮತಿ ಪಡೆಯಲು ಎಂಟು ವರ್ಷ ಕಾಲ ಸವೆಸಿದರೆ ಕಾಲುವೆ ನಿರ್ಮಾಣಕ್ಕೆ ಎಷ್ಟು ವರ್ಷ ಬೇಕಾಗಬಹುದು’ ಎಂದು ಖಾರವಾಗಿ ಪ್ರಶ್ನಿಸಿದರು. ‘ಗುತ್ತಿಗೆ ಪಡೆದ ಕಂಪನಿಗೆ ಬದ್ಧತೆಯ ಕೊರತೆ ಇದೆ. ಈ ದೇಶ ಯಾರ ಅಪ್ಪನ ಮನೆಯ ಆಸ್ತಿ’ ಎಂದು ಕೇಳಿದರು. ಗುತ್ತಿಗೆ ಕಂಪನಿಯ ವ್ಯವಸ್ಥಾಪಕರನ್ನು ಸಭೆಯಿಂದ ಹೊರಗೆ ಕಳುಹಿಸಿದರು.

‘ಹಾಲು ಕುಡಿಯುವ ಮಗು ಕೂಡ ತೆರಿಗೆ ಪಾವತಿ ಮಾಡಬೇಕಿದೆ. ಸಾರ್ವಜನಿಕರ ತೆರಿಗೆ ಹಣ ಈ ರೀತಿ ಪೋಲಾದರೆ ಹೇಗೆ? ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಹಾಗೂ ನಿಯಮ ಪಾಲನೆ ಮಾಡದ ಗುತ್ತಿಗೆ ಕಂಪನಿಗಳಿಗೆ ಹಣ ಪಾವತಿ ಮಾಡಬೇಡಿ. ಅಂತಹ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ’ ಎಂದು ಆದೇಶಿಸಿದರು.

ಭದ್ರಾ ಜಲಾಶಯದಿಂದ ಅಜ್ಜಂಪುರದ ‘ವೈ’ ಜಂಕ್ಷನ್‌ವರೆಗಿನ ನಾಲೆ ನಿರ್ಮಾಣ ಪೂರ್ಣಗೊಂಡಿದೆ. ‘ವೈ’ ಜಂಕ್ಷನ್‌ ಬಳಿಕ ತುಮಕೂರು ಹಾಗೂ ಚಿತ್ರದುರ್ಗ ನಾಲೆ ಕವಲೊಡೆಯುತ್ತವೆ. ಇಲ್ಲಿಂದ ಚಿತ್ರದುರ್ಗ ಭಾಗಕ್ಕೆ ಹರಿಯುವ ನಾಲೆಯ 61 ಕಿ.ಮೀ ವ್ಯಾಪ್ತಿಯ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಒಂದೆಡೆ 356 ಮೀಟರ್‌ ಹಾಗೂ ಮತ್ತೊಂದೆಡೆ 1.9 ಕಿ.ಮೀ ನಾಲೆ ನಿರ್ಮಾಣ ಕಾರ್ಯ ಮಾತ್ರ ಬಾಕಿ ಇದೆ. ಇದನ್ನು ಮಾರ್ಚ್‌ ಹೊತ್ತಿಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದರು.

‘ರಾಷ್ಟ್ರೀಯ ಮಾನ್ಯತೆ ಪಡೆಯಲು ಸನ್ನದ್ಧವಾಗಿರುವ ಯೋಜನೆ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಕಾಮಗಾರಿ ತ್ವರಿತಗೊಳಿಸಿ ಪ್ರಗತಿ ಸಾಧಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಯೋಜನೆಯ ವ್ಯಾಪ್ತಿಯ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು. ಸಭೆಗೆ ಗೈರಾದವರಿಗೆ ನೋಟಿಸ್‌ ಜಾರಿ ಮಾಡಿ’ ಎಂದು ತಾಕೀತು ಮಾಡಿದರು.

3,512 ಎಕರೆ ಭೂಸ್ವಾಧೀನ ಬಾಕಿ

ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ 7,012 ಎಕರೆ ಭೂಸ್ವಾಧೀನ ಮಾಡಿಕೊಳ್ಳೂವ ಅಗತ್ಯವಿದೆ. ಇದರಲ್ಲಿ 3,500 ಎಕರೆ ಭೂಸ್ವಾಧೀನವಾಗಿದ್ದು, ಇನ್ನೂ 3,512 ಎಕರೆ ಸ್ವಾಧೀನಕ್ಕೆ ಬಾಕಿ ಇದೆ ಎಂದು ಸಚಿವ ನಾರಾಯಣಸ್ವಾಮಿ ತಿಳಿಸಿದರು.

‘ಈವರೆಗೆ ₹ 4,800 ಕೋಟಿ ಅನುದಾನ ಖರ್ಚಾಗಿದೆ. ಯೋಜನೆ ಅನುಷ್ಠಾನಕ್ಕೆ ಹಣಕಾಸಿನ ತೊಂದರೆ ಇಲ್ಲ. ರಾಜ್ಯ ಸರ್ಕಾರ ಅನುದಾನವನ್ನು ಉದಾರವಾಗಿ ನೀಡಿದೆ. ಅರಣ್ಯ ಪ್ರದೇಶ ಹೊರತುಪಡಿಸಿ ಉಳಿದೆಡೆ ಭೂಸ್ವಾಧೀನಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ’ ಎಂದು ಹೇಳಿದರು.

ಹೈಕೋರ್ಟ್‌ ಮೊರೆ

ಚಿಕ್ಕಮಗಳೂರು ಜಿಲ್ಲೆಯ ಅಮೃತಮಹಲ್‌ ಕಾವಲು ಪ್ರದೇಶದಲ್ಲಿ 2.5 ಕಿ.ಮೀ ನಾಲೆ ನಿರ್ಮಾಣವಾಗಬೇಕಿದೆ. ಇದು ಸಂರಕ್ಷಿತ ಅರಣ್ಯವೆಂದು ಕೆಲ ಪರಿಸರವಾದಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದರಿಂದ ತುಮಕೂರು ನಾಲೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಇದೇ ನಾಲೆಯ ಮೂಲಕ ವಿ.ವಿ.ಸಾಗರ ಜಲಾಶಯಕ್ಕೆ ನೀರು ಹರಿಸಬೇಕು. ಕಾಮಗಾರಿ ವಿಳಂಬದಿಂದ ನಿರೀಕ್ಷೆಯಂತೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಹಸಿರು ಪೀಠದ (ಎನ್‌ಜಿಟಿ) ಪ್ರಕರಣ ನಿಭಾಯಿಸುವ ದೆಹಲಿಯ ವಕೀಲರೊಬ್ಬರು ಸರ್ಕಾರದ ಪರವಾಗಿ ವಾದ ಮಾಡುತ್ತಿದ್ದಾರೆ ಎಂದು ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ವಿವರಿಸಿದರು.

ಬಲವಂತದ ಭೂಸ್ವಾಧೀನಕ್ಕೆ ಸೂಚನೆ

ತರೀಕೆರೆ ತಾಲ್ಲೂಕಿನ ಅಬ್ಬಿನಹೊಳಲು ಗ್ರಾಮದಲ್ಲಿ ಭೂಮಿ ಕಳೆದುಕೊಂಡು ಪರಿಹಾರ ಪಡೆಯದೇ ಇರುವ ರೈತರ ಹೆಸರಿನಲ್ಲಿ ಹಣ ಜಮಾ ಮಾಡಿ. ಪೊಲೀಸರ ಭದ್ರತೆಯೊಂದಿಗೆ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಿ ಎಂದು ಚಿಕ್ಕಮಗಳೂರು ಹೆಚ್ಚವರಿ ಜಿಲ್ಲಾಧಿಕಾರಿ (ಎಡಿಸಿ) ರೂಪಾ ಅವರಿಗೆ ಸಚಿವ ನಾರಾಯಣಸ್ವಾಮಿ ಸೂಚನೆ ನೀಡಿದರು.

ಎಡಿಸಿ ಬಿ.ಆರ್‌.ರೂಪಾ ಮಾತನಾಡಿ, ‘ಅಬ್ಬಿನಹೊಳಲು ಗ್ರಾಮದಲ್ಲಿ 41 ರೈತರ ಜಮೀನು ಸ್ವಾಧೀನಕ್ಕೆ ಗುರುತಿಸಲಾಗಿದೆ. ಇದರಲ್ಲಿ ಆರು ರೈತರು ಮಾತ್ರ ಪರಿಹಾರ ಪಡೆದಿಲ್ಲ. ಉಪವಿಭಾಗಾಧಿಕಾರಿ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ’ ಎಂದರು.

‘ಭೂಸ್ವಾಧೀನಕ್ಕೆ ಅಗತ್ಯ ರಕ್ಷಣೆಯನ್ನು ಪೊಲೀಸರು ನೀಡಬೇಕು. ಇದು ದಬ್ಬಾಳಿಕೆ ಎಂದು ಭಾವಿಸುವ ಅಗತ್ಯವಿಲ್ಲ. ಮಹತ್ವಕಾಂಕ್ಷಿ ಯೋಜನೆಗೆ ಅಡ್ಡಿಪಡಿಸುವವರಿಗೆ ಸರ್ಕಾರ ಏನು ಎಂಬುದು ಗೊತ್ತಾಗಬೇಕು’ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಇದ್ದರು.

ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ಸಿಗುವ ಕಾಲ ಸನ್ನಿಹಿತವಾಗಿದೆ. ಉನ್ನತ ಮಟ್ಟದ ಸಮಿತಿ ರಚನೆ ಆಗಿದೆ. ಅಂತಿಮವಾಗಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಲಿದೆ.

- ಎ.ನಾರಾಯಣಸ್ವಾಮಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.