ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿವಿಲಾಸ ಜಲಾಶಯದ ಕೋಡಿ: ಮೇಲ್ಸೇತುವೆ ನಿರ್ಮಿಸಲು ಒತ್ತಾಯ

Last Updated 11 ಜನವರಿ 2023, 6:47 IST
ಅಕ್ಷರ ಗಾತ್ರ

ಹಿರಿಯೂರು: ‘ಸಾರ್ವಜನಿಕರ ಹಿತದೃಷ್ಟಿಯಿಂದ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೋಡಿಗೆ ಹಿರಿಯೂರು ಹಾಗೂ ಹೊಸದುರ್ಗ ಕ್ಷೇತ್ರಗಳ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಮೇಲ್ಸೇತುವೆ ನಿರ್ಮಿಸಬೇಕು’ ಎಂದು ತಾಲ್ಲೂಕು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಬೀವುಲ್ಲಾ ಒತ್ತಾಯಿಸಿದ್ದಾರೆ.

ಸೆ. 2ರಂದು ವಾಣಿವಿಲಾಸ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದ್ದು, ಇಂದಿಗೂ ಕೋಡಿಯಲ್ಲಿ ನೀರು ಹರಿಯುತ್ತಿದೆ. 89 ವರ್ಷ ಜಲಾಶಯ ಭರ್ತಿಯಾಗದ ಕಾರಣ ಕೋಡಿ ಹಿರಿಯೂರು– ಹೊಸದುರ್ಗ ನಗರಗಳ ನಡುವೆ ವಾಹನಗಳ ಓಡಾಟಕ್ಕೆ ಯಾವುದೇ ತೊಂದರೆ ಆಗಿರಲಿಲ್ಲ. ಈಗ ಕೋಡಿಯ ನೀರು ಈ ರಸ್ತೆಯ ಮೇಲೆ ಹರಿಯುತ್ತಿರುವ ಕಾರಣ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಹೊಸದುರ್ಗಕ್ಕೆ ಹೋಗುವ ಬಸ್‌ಗಳು ವಾಣಿವಿಲಾಸಪುರಕ್ಕೆ ಬಂದು, ಮರಳಿ ಕಕ್ಕಯ್ಯನಹಟ್ಟಿ ಮೂಲಕ ಭರಮಗಿರಿ–ಬಳಗಟ್ಟ ರಸ್ತೆಗೆ ಹೋಗಿ ಅಲ್ಲಿಂದ ಲಕ್ಕಿಹಳ್ಳಿ ಕಡೆ ಸಾಗಬೇಕಿದೆ. ಕೋಡಿಯಲ್ಲಿ ನೀರು ಹರಿಯುತ್ತಿರುವ ಕಾರಣ ಬಸ್‌ಗಳು ಎಂಟ್ಟತ್ತು ಕಿ.ಮೀ. ಸುತ್ತಿಕೊಂಡು ಸಾಗಬೇಕಿದೆ. ಇದರಿಂದ ಸಮಯ ಮತ್ತು ಇಂಧನ ಎರಡೂ ವ್ಯರ್ಥವಾಗುತ್ತಿದೆ. ಜೊತೆಗೆ ಬೆಂಗಳೂರಿನಿಂದ ತರೀಕೆರೆ, ಭದ್ರಾವತಿ, ಶಿವಮೊಗ್ಗದ ಕಡೆ ಹೋಗುವವರು ವಾಣಿವಿಲಾಸ ಜಲಾಶಯ ವೀಕ್ಷಣೆ ಮಾಡಿ ಅದೇ ರಸ್ತೆಯಲ್ಲಿ ಹೊಸದುರ್ಗದ ಕಡೆ ಹೋಗಬಹುದಿತ್ತು. ಆದರೆ, ಕೋಡಿಯ ನೀರು ರಸ್ತೆಯನ್ನು ಕೊರೆದಿರುವ ಕಾರಣ ಏಳೆಂಟು ಕಿ.ಮೀ. ಸುತ್ತಬೇಕು ಎಂದು ಜಲಾಶಯ ವೀಕ್ಷಿಸದೆ ಹೋಗುತ್ತಿದ್ದಾರೆ’ ಎಂದು ಜಬೀವುಲ್ಲಾ ಹೇಳಿದ್ದಾರೆ.

‘ಕೋಡಿಯ ಮೇಲ್ಭಾಗದಲ್ಲಿ ಎಂಟತ್ತು ಅಡಿ ಎತ್ತರಕ್ಕೆ ಮೇಲ್ಸೇತುವೆ ನಿರ್ಮಿಸಿದಲ್ಲಿ ವಾಹನಗಳು ಸರಾಗವಾಗಿ ಸಂಚರಿಸುತ್ತವೆ. ಇದರೊಂದಿಗೆ ವಾಣಿವಿಲಾಸಪುರ ಗ್ರಾಮದಲ್ಲಿ ಕೋಡಿಯ ನೀರು ಹರಿಯುವ ಜಾಗದಲ್ಲಿ ನಿರ್ಮಿಸಿರುವ ಹಳೆಯ ಕಾಲದ ಸೇತುವೆ 2–3 ಕಡೆ ಗುಂಡಿ ಬಿದ್ದಿದ್ದು, ಅದನ್ನೂ ಹೊಸದಾಗಿ ನಿರ್ಮಿಸಬೇಕು. ಈ ಎರಡೂ ಸೇತುವೆಗಳನ್ನು ನಿರ್ಮಿಸದೇ ಹೋದಲ್ಲಿ ವಾಣಿ ವಿಲಾಸ ಜಲಾಶಯಕ್ಕೆ ಪ್ರವೇಶವೇ ಇಲ್ಲದಂತಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT