ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರತ್ವ ತಿದ್ದುಪಡಿ’ ಕರುಣೆ ಇಲ್ಲದ ಕಾಯ್ದೆ: ಶಾಸಕ ಯು.ಟಿ.ಖಾದರ್‌ ಕಿಡಿ

Last Updated 27 ಜನವರಿ 2020, 12:18 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆಗೆ ಕರುಣೆ ಹಾಗೂ ಮಾನವೀಯತೆ ಇಲ್ಲ. ದೇಶದಲ್ಲಿ ಇನ್ನಷ್ಟು ಜನರನ್ನು ಈ ಕಾಯ್ದೆ ಬಲಿಪಡೆಯಲಿದೆ ಎಂದು ಶಾಸಕ ಯು.ಟಿ.ಖಾದರ್‌ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್‌ಆರ್‌ಸಿ) ಅಸ್ಸಾಂ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ‍ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಡಾ.ಮನಮೋಹನ್‌ ಸಿಂಗ್‌ ರಾಜ್ಯಸಭೆಯಲ್ಲಿ ಹೇಳಿದ ರೀತಿಯಲ್ಲಿ ಈ ಕಾಯ್ದೆ ಜಾರಿಗೆ ಬಂದಿದ್ದರೆ ಯಾವುದೇ ತಕರಾರು ವ್ಯಕ್ತವಾಗುತ್ತಿರಲಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಇದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಅದನ್ನು ಜಾರಿಗೆ ತರುವ ರೀತಿಯ ಬಗ್ಗೆ ಆಕ್ಷೇಪಗಳಿವೆ. ಹೈದರಾಬಾದಿನಲ್ಲಿ ಅತ್ಯಾಚಾರ ಆರೋಪಿಗಳನ್ನು ಕೊಂದು ಹಾಕಿದ್ದಕ್ಕೆ ಬಿಜೆಪಿಯ ಮನೇಕಾ ಗಾಂಧಿ ವಿರೋಧ ವ್ಯಕ್ತಪಡಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡವರು ಬಿಜೆಪಿಯವರ ಕಣ್ಣಿಗೆ ಕಾಣಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಹರಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟಿದ್ದಕ್ಕೆ ಸರ್ಕಾರವನ್ನು ಅಭಿನಂದಿಸುತ್ತೇನೆ. ಆದರೆ, ಅವರು ಶಾಲೆಗೆ ಹೋಗಿಲ್ಲ, ಶಿಕ್ಷಣ ಪಡೆದಿಲ್ಲ. ಅವರು ಪೌರತ್ವ ಸಾಬೀತು ಮಾಡುವುದು ಹೇಗೆ? ಅನಕ್ಷರಸ್ಥರು, ದಲಿತರು, ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಗಿರಿಜನರು ದಾಖಲೆ ಹೊಂದಿಲ್ಲ. ಪೌರತ್ವ ಸಾಬೀತುಪಡಿಸಲು ಅವರೆಲ್ಲರೂ ಹೆಣಗಾಡಬೇಕಿದೆ’ ಎಂದು ಹೇಳಿದರು.

‘ಕೇಂದ್ರದ ಬಿಜೆಪಿ ಸರ್ಕಾರ ಅಭಿವೃದ್ಧಿಪರ ಯಾವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಜನರನ್ನು ತಪ್ಪು ದಾರಿಗೆ ಎಳೆಯುವ ಉದ್ದೇಶದಿಂದ ಪೌರತ್ವ ಕಾಯ್ದೆಯನ್ನು ಮುನ್ನೆಲೆಗೆ ತಂದಿದೆ. ಇದುವರೆಗೂ ಪೌರತ್ವದ ವಿಚಾರ ದೇಶದ ಸಮಸ್ಯೆಯಾಗಿರಲಿಲ್ಲ. ಸರ್ಕಾರದ ನಡೆಯನ್ನು ಪ್ರಶ್ನಿಸುವವರಿಗೆ ದೇಶದ್ರೋಹ ಹಾಗೂ ಮಾನಸಿಕ ಅಸ್ವಸ್ಥರ ಹಣೆಪಟ್ಟಿ ಅಂಟಿಸಲಾಗುತ್ತಿದೆ. ಇಂತಹ ಅಸ್ವಸ್ಥರ ಚಿಕಿತ್ಸೆಗೆ ಆಸ್ಪತ್ರೆಗಳನ್ನಾದರೂ ತೆರೆಯಿರಿ’ ಎಂದು ವ್ಯಂಗ್ಯವಾಡಿದರು.

‘ಸಹಕಾರಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುವ ಹುನ್ನಾರದಲ್ಲಿ ತೊಡಗಿದೆ. ಸಹಕಾರಿ ಕ್ಷೇತ್ರದಲ್ಲಿರುವ ಮೀಸಲಾತಿ ವ್ಯವಸ್ಥೆಗೆ ತಿಲಾಂಜಲಿ ನೀಡಲು ಬಿಜೆಪಿ ಹವಣಿಸುತ್ತಿದೆ. ರೈಲ್ವೆ, ಏರ್‌ ಇಂಡಿಯಾ, ಬಿಎಸ್‌ಎನ್‌ಎಲ್‌ ಸೇರಿ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಕೈಗೆತ್ತಿಕೊಂಡಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT