ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಣಿವಿಲಾಸ ಜಲಾಶಯ: ಮೂಲ ವಿನ್ಯಾಸಕ್ಕೆ ಧಕ್ಕೆಯಾದರೆ ಹೋರಾಟ’

Published 22 ನವೆಂಬರ್ 2023, 13:21 IST
Last Updated 22 ನವೆಂಬರ್ 2023, 13:21 IST
ಅಕ್ಷರ ಗಾತ್ರ

ಹಿರಿಯೂರು: ‘ದಶಕಗಳ ಕಾಲ ನೂರಾರು ತಜ್ಞರ ಚಿಂತನೆಯ ಫಲವಾಗಿ ನಿರ್ಮಾಣಗೊಂಡಿರುವ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಮೂಲವಿನ್ಯಾಸಕ್ಕೆ ಧಕ್ಕೆ ತರುವ ಕೆಲಸಕ್ಕೆ ಯಾರೇ ಆಗಲಿ ಮುಂದಾದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಎಚ್ಚರಿಸಿದರು.

‘ಜಲಾಶಯ ನಿರ್ಮಾಣಗೊಂಡ 115 ವರ್ಷದ ಇತಿಹಾಸದಲ್ಲಿ 1933ರಲ್ಲಿ ಒಮ್ಮೆ, 2022ರಲ್ಲಿ ಮತ್ತೊಮ್ಮೆ ಭರ್ತಿಯಾಗಿದೆ. ಜಲಾಶಯದಲ್ಲಿ 130 ಅಡಿ ಮಾತ್ರ ನೀರು ನಿಲ್ಲುತ್ತದೆ. ಅದಕ್ಕಿಂತ ಹೆಚ್ಚಿನ ನೀರು ಒಂದೆರಡು ತಿಂಗಳು ಕೋಡಿಯ ಮೂಲಕ ವೇದಾವತಿ ನದಿಯಲ್ಲಿ ಹರಿಯುತ್ತದೆ. 130 ಅಡಿಗಿಂತ ಹೆಚ್ಚು ಸಂಗ್ರಹವಾಗುವ ನೀರು ಅಣೆಕಟ್ಟೆಯಲ್ಲಿ ಇರುವುದು ಕೆಲವು ದಿನಗಳು ಮಾತ್ರ. ಯೋಜನೆಯಲ್ಲಿ ಕೇವಲ 2 ಟಿಎಂಸಿ ಅಡಿ ನೀರನ್ನು ಜಲಾಶಯಕ್ಕೆ ಮೀಸಲಿಟ್ಟಿರುವ ಕಾರಣ ಮತ್ತೊಮ್ಮೆ ಜಲಾಶಯ ಭರ್ತಿಯಾಗಲು ಮಳೆಯಾಗಬೇಕಿದೆ. ಹೀಗಾಗಿ ಅಣೆಕಟ್ಟೆಯ ಮೂಲ ವಿನ್ಯಾಸ ಬದಲಾಯಿಸುವ ಗೋಜಿಗೆ ಯಾರೂ ಮುಂದಾಗಬಾರದು’ ಎಂದು ಅವರು ಮನವಿ ಮಾಡಿದ್ದಾರೆ.

‘ಶಾಸಕ ಬಿ.ಜಿ. ಗೋವಿಂದಪ್ಪ ವಾಣಿ ವಿಲಾಸ ಹಿನ್ನೀರಿನಿಂದ ತೊಂದರೆಯಾಗುವ ಜನರಿಗೆ ಬೇರೆ ಕಡೆ ಸರ್ಕಾರಿ ಭೂಮಿ ಕೊಡಿಸಲಿ. ಆಧುನಿಕ ತಂತ್ರಜ್ಞಾನ ಬಳಸಿ ಹಿನ್ನೀರಿನಿಂದ ಅವರಿಗೆ ರಕ್ಷಣೆ ದೊರೆಯುವಂತೆ ತಡೆಗೋಡೆ ನಿರ್ಮಿಸಲಿ. ಅದನ್ನು ಬಿಟ್ಟು ಅಣೆಕಟ್ಟೆಯ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತಹ ಕಾರ್ಯಕ್ಕೆ ಮುಂದಾದರೆ ಜಲಾಶಯದ ನೀರನ್ನೇ ನಂಬಿರುವ ಜಿಲ್ಲೆಯ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ಹೊಳಲ್ಕೆರೆ ತಾಲ್ಲೂಕಿನ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ಗಮನಹರಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT