ಹಿರಿಯೂರು: ವಾಸವಿ ಆತ್ಮಾರ್ಪಣೆ ದಿನಾಚರಣೆ

ಹಿರಿಯೂರು: ನಗರದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಆರ್ಯವೈಶ್ಯ ಮಂಡಳಿ, ವಾಸವಿ ದೀಕ್ಷಾ ಸಮಿತಿ ಹಾಗೂ ವಾಸವಿ ಯುವಜನ ಸಂಘದ ನೇತೃತ್ವದಲ್ಲಿ ವಾಸವಿ ಆತ್ಮಾರ್ಪಣೆ ದಿನ ಆಚರಿಸಲಾಯಿತು.
‘ಪೆನುಗೊಂಡ ಪಟ್ಟಣದಲ್ಲಿ ಕುಸುಮಶ್ರೇಷ್ಠಿ ದಂಪತಿಗೆ ಕಲಿಯುಗದಲ್ಲಿ ಧರ್ಮರಕ್ಷಣೆಗಾಗಿ ಜನಿಸಿದ ತಾಯಿಯೇ ವಾಸವಿ. ಲೋಕಕಲ್ಯಾಣಕ್ಕಾಗಿ, ಅಧರ್ಮ, ಅಕ್ರಮಗಳನ್ನು ಎದುರಿಸುವ ಉದ್ದೇಶದಿಂದ 102 ಗೋತ್ರಗಳ ಆರ್ಯವೈಶ್ಯ ದಂಪತಿಗಳು ತಾಯಿ ವಾಸವಿ ದೇವಿಯ ಆದೇಶದಂತೆ ಆಕೆಯೊಂದಿಗೆ ಅಗ್ನಿ ಪ್ರವೇಶ ಮಾಡಿದ ಶುಭದಿನವನ್ನು ನಾಡಿನಾದ್ಯಂತ ಎಲ್ಲ ಆರ್ಯವೈಶ್ಯರು ವಾಸವಿ ಆತ್ಮಾರ್ಪಣಾ ದಿನವನ್ನಾಗಿ ಆಚರಿಸುತ್ತ ಬಂದಿದ್ದೇವೆ. ನಮ್ಮ ಸಮಾಜದ 17 ಜನ ವಾಸವಿ ದೀಕ್ಷಾ ಮಾಲಾಧಾರಿಗಳಾಗಿರುವುದು ಸಂತೋಷ ತಂದಿದೆ’ ಎಂದು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಚ್.ಎಸ್. ನಾಗರಾಜಗುಪ್ತ
ಹೇಳಿದರು.
ಬೆಳಿಗ್ಗೆ 6.30ಕ್ಕೆ ಗಣಪತಿ ಪೂಜೆಯೊಂದಿಗೆ ಆರಂಭವಾದ ಸಮಾರಂಭ ವಾಸವಿ ಮಾತೆಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಹಾ ನಿವೇದನೆ, ಮಾಲಾಧಾರಿಗಳಿಗೆ ವಾಸವಿ ದೀಕ್ಷೆ ನಡೆಯಿತು. ನಂತರ ದೀಕ್ಷಾಧಾರಿಗಳು, ಆರ್ಯವೈಶ್ಯ ಜನಾಂಗದವರು ದೀಕ್ಷಾ ಧ್ವಜದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನಕ್ಕೆ ಮರಳಿದರು.
ದೇಗುಲಕ್ಕೆ ಮರಳಿದ ನಂತರ ಸರಸ್ವತಿ ನಾಗರಾಜ್ ಮತ್ತು ಎಚ್.ಎಸ್. ನಾಗರಾಜಗುಪ್ತ ಅವರ ನೇತೃತ್ವದಲ್ಲಿ 50 ಪುಟ್ಟ ಕನ್ನಿಕೆಯರಿಗೆ ಪೂಜೆ ನೆರವೇರಿಸಲಾಯಿತು. ನಂತರ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ, ವಾಸವಿ ಮೂಲಮಂತ್ರ, ಯಜ್ಞಹೋಮ, ಪೂರ್ಣಾಹುತಿ, ಮಹಾನೈವೇದ್ಯ, ಮಂತ್ರಪುಷ್ಪ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸಂಜೆ ವಾಸವೀದೇವಿ ಭಜನಾ ಕಾರ್ಯಕ್ರಮ, ದಿವ್ಯದೀಪ ಜ್ಯೋತಿದರ್ಶನ, ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.